ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಚಿವ ಶ್ರೀರಾಮುಲು ಶಾಸಕ ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸನಗೌಡ ಬಿಡುಗಡೆ

 • ಆಸ್ತಿ ನೀರಿನ ತೆರಿಗೆ ಕಡಿತ
 • ವಾರ್ಡ್‍ಗೊಂದು ಜನಸಂಪರ್ಕ ಕಛೇರಿ
 • 21 ದಿನಗಳೊಳಗಾಗಿ ಫಾರಂ.2
 • ಗ್ರೀನ್ ಅಂಡ್ ಕ್ಲೀನ್ ಸಿಟಿ
 • ಗುತ್ತಿಗೆ ನೌಕರರ ಖಾಯಂ
 • ಪಾಲಿಕೆ ಕಚೇರಿ ಸ್ಥಳಾಂತರ
 • ವಿದ್ಯುತ್ ಚಿತಾಗಾರ ಅಳವಡಿಕೆ
  (ಸಂಜೆವಾಣಿ ಪ್ರತಿನಿಧಿಯಿಂದ)
  ಬಳ್ಳಾರಿ, ಏ.23: ನಡೆಯಲಿರುವ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನೆಲ್ಲ ಮಾಡಲಿದೆ ಎಂದು ಮತದಾರರಿಗೆ ಭರವಸೆ ನೀಡುವ ಚುನಾವಣಾ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
  ಸಚಿವ ಶ್ರೀರಾಮುಲು ಶಾಸಕ ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸನಗೌಡ ಮೊದಲಾದವರು ನಿನ್ನೆ ಸಂಜೆ ಡಾ.ಅರುಣಾ ಕಾಮಿನೇನಿ, ಡಾ. ಬಿ.ಕೆ.ಸುಂದರ್, ಸಂಜಯ್ ಬೆಟಗೇರಿ ಮೊದಲಾದವರು ಸಿದ್ದಪಡಿಸಿರುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈಸಂದರ್ಭದಲ್ಲಿ ಶ್ರೀರಾಮುಲು ಮಾತನಾಡಿ, ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಅದು ಇಲ್ಲಿನ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಇರಬೇಕು ಎಂಬುದು ನಮ್ಮ ಆಶಯವಾಗಿದೆ. ಅದಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡಿ ಎಂದು ಕೇಳಿದೆ. ಮುಸ್ಲಿಂರು, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಸಮುದಾಯದ ಜನತೆ ಬಿಜೆಪಿಗೆ ಮತ ನೀಡಲು ಉತ್ಸಾಹಕರಾಗಿದ್ದಾರೆ ಹಾಗಾಗಿ ನಗರಪಾಲಿಕೆಯ 39 ವಾರ್ಡುಗಳ ಪೈಕಿ 27 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆಂದರು.
  ಆಸ್ತಿ ತೆರಿಗೆ ಕಡಿತ:
  ಬಿಜೆಪಿ ಆಡಳಿತಕ್ಕೆ ಬಂದರೆ. ಬಳ್ಳಾರಿ ಮಹಾನಗರ ಪಾಲಿಕೆ ಅಡಿಯಲ್ಲಿ ಬರುವ ಎಲ್ಲಾ ಆಸ್ತಿಗಳ ಮೇಲಿನ ಅವೈಜ್ಞಾನಿಕ ತೆರಿಗೆ ಸಂಗ್ರಹವನ್ನು ಮಾರ್ಪಡಿಸಿ, ಈಗ ಚಾಲ್ತಿಯಲ್ಲಿರುವ ಆಸ್ತಿಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸಲಾಗುವುದು.
  ಮಹಾನಗರ ಪಾಲಿಕೆ ವತಿಯಿಂದ ರೂ. 204 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಸರಬರಾಜಿಗೆ ಮತ್ತು ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.
  ತುಂಗಭದ್ರಾ ಡ್ಯಾಂನಿಂದ ನಗರದ ಅಲ್ಲಿಪುರ ಕೆರೆಗೆ ಪ್ರತ್ಯೇಕವಾಗಿ ಪೈಪ್ ಲೈನ್‍ಗಳನ್ನು ಅಳವಡಿಸಿ ನಗರಕ್ಕೆ ನೀರು ತರುವ ಮಹತ್ತರ ಯೋಜನೆಗೆ ಮೊದಲ ಆದ್ಯತೆ ನೀಡಲಾಗುವುದು. ನಗರದ ಒಳಚರಂಡಿಯ ಹಳೆಯ ಪೈಪ್ ಲೈನ್ ಗಳ ಬದಲಾವಣೆ, ದುರಸ್ತಿ ಹಾಗೂ ಹೊಸ ಪೈಪ್ ಲೈನ್‍ಗಳ ಅಳವಡಿಕೆಯ ಯೋಜನೆಗೆ 231 ಕೋಟಿ ರೂ ಹಣವನ್ನು ಮೀಸಲಿಟ್ಟು ಸಮರ್ಪಕವಾಗಿ ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗುವುದು.
  ವಾರ್ಡ್ ಜನಸಂಪರ್ಕ ಕಛೇರಿ:
  ಆಡಳಿತಕ್ಕೆ ಬಂದ ಮೇಲೆ ಮೊದಲ ಸಾಮಾನ್ಯ ಸಭೆಯಲ್ಲಿಯೇ ಎಲ್ಲಾ 30 ವಾರ್ಡುಗಳಲ್ಲಿ. ಆಯಾ ಕಾರ್ಪೊರೇಟರ್ ಗಳ ಸಹಾಯದೊಂದಿಗೆ ಜನಸಂಪರ್ಕ ಕಛೇರಿಯನ್ನು ತೆರೆಯಲಿದೆ. ಈ ಕಛೇರಿಯಲ್ಲಿ ಮಹಾನಗರ ಪಾಲಿಕೆಯ ಸಿಬ್ಬಂದಿಯು ಕಾರ್ಯನಿರ್ವಹಿಸಲಿದ್ದು, ಆಯಾ ವಾರ್ಡಿನ ಕುಂದುಕೊರತೆಗಳನ್ನು ಮಹಾನಗರ ಪಾಲಿಕೆಗೆ ತಲುಪಿಸುವುದು ಮತ್ತು ಅಲ್ಲಿನ ಪಾಲಿಕೆಯ ಸದಸ್ಯರು ಜನರಿಗೆ ಪ್ರತಿನಿತ್ಯ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅನುಕೂಲವಾಗುವ ದೃಷ್ಠಿಯಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗುವುದು ಮತ್ತು ಮಹಾನಗರ ಪಾಲಿಕೆಗೆ ಸಂದಾಯವಾಗಬೇಕಾದ ಎಲ್ಲಾ ತರಹದ ತೆರಿಗೆಗಳನ್ನು ಆನ್ ಲೈನ್ ಪದ್ಧತಿಗಳ ಮುಖಾಂತರ ಪಾವತಿಸಲು ಅವಕಾಶ ಕಲ್ಪಿಸಲಾಗುವುದು.
  ನೀರಿನ ತೆರಿಗೆ ಕಡಿತ:
  ಪಾಲಿಕೆಯಿಂದ ಈಗ ಸಂಗ್ರಹಿಸಲಾಗುತ್ತಿರುವ ನೀರಿನ ಮೇಲಿನ ತೆರಿಗೆಯನ್ನು ರೂ.175 ರಿಂದ 100 ಕ್ಕೆ ಇಳಿಸುವ ನಿರ್ಧಾರವನ್ನು ಸಹ ಮೊದಲ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಿದೆ. ಅಧಿಕಾರಕ್ಕೆ ಬಂದ 6 ತಿಂಗಳೊಳಗಾಗಿ ಕೊಳಗೇರಿ ನಿವಾಸಿಗಳಿಗೆ ಸ್ವಂತ ಸೂರಿನ ಮಾಲೀಕತ್ವದ ಹಕ್ಕುಪತ್ರ (ಪಟ್ಟಾಗಳನ್ನು) ಸುಮಾರು 59,068 ನಿವಾಸಿಗಳಿಗೆ ಅಂದರೆ 10,363 ಕುಟುಂಬಗಳಿಗೆ ವಿತರಿಸಲಾಗುವುದು. ನಗರದ 6 ಪ್ರತ್ಯೇಕ ವಲಯಗಳನ್ನು ಗುರುತಿಸಿ ಆಯಾ ಭಾಗದ ಕಸವನ್ನು ಆ ವಲಯಗಳಲ್ಲೇ ಸಂಗ್ರಹಿಸಿ ಅಲ್ಲಿಂದ ಊರಿನಾಚೆಗೆ ಕಸ ವಿಲೇವಾರಿ ಮಾಡುವ ಯೋಜನೆಗೆ ಚಾಲನೆಯನ್ನು ನೀಡಲಾಗುವುದು. ಜೊತೆಗೆ ಬೀದಿಬದಿ ವ್ಯಾಪಾರಿಗಳಿಂದ ಈ ಹಿಂದಿನಂತೆ ತೆರಿಗೆ ವಸೂಲಿ ಮಾಡಲ್ಲ,
  ಟೋಲ್ ಫ್ರೀ ಕಾಲ್ ಸೆಂಟರ್:
  ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ತ್ವರಿತವಾಗಿ ಕ್ರಮಗಳನ್ನು ಕೈಗೊಳ್ಳಲು ಮಹಾನಗರ ಪಾಲಿಕೆಯಿಂದ ಟೋಲ್ ಫ್ರೀ ಕಾಲ್ ಸೆಂಟರ್ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗುವ ಪ್ರತ್ಯೇಕ ಮೊಬೈಲ್ ಆಪ್ ನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
  21 ದಿನಗಳೊಳಗಾಗಿ ಫಾರಂ.2:
  ಸಧ್ಯ ಪಾಲಿಕೆಯಲ್ಲಿ Form No.2 (ಫಾರಂ ನಮೂನೆ 2) ಪಡೆಯುವಲ್ಲಿ ಆಗುತ್ತಿರುವ ತೊಂದರೆಯನ್ನು ಬಗೆಹರಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಆದ್ಯತೆಯನ್ನು ನೀಡಲಾಗುವುದು, ದಾಖಲೆಗಳನ್ನು ಪರಿಶೀಲಿಸಿ 21 ದಿನಗಳೊಳಗಾಗಿ ಸಾರ್ವಜನಿಕರ ವಿಳಾಸಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಕಲ್ಪಿಸಲಾಗುವುದು. ಅಧಿಕಾರಕ್ಕೆ ಬಂದ 10 ತಿಂಗಳೊಳಗಾಗಿ ನಗರದ ಎಲ್ಲ ಉದ್ಯಾನವನಗಳಲ್ಲಿ ಯುವಕರಿಗೆ ಹಾಗೂ ಮಹಿಳೆಯರಿಗೆ ಉತ್ತಮ ಆರೋಗ್ಯ ರೂಪಿಸಿಕೊಳ್ಳಲು ಪ್ರತ್ಯೇಕವಾದ ವ್ಯಾಯಾಮಕ್ಕಾಗಿ ಸಲಕರಣೆಗಳನ್ನು ಜೋಡಿಸಲಾಗುವುದು. ಮತ್ತು ಹಿರಿಯ ನಾಗರಿಕರಿಗೆ ವಿಶ್ರಾಂತಿ ತಾಣಗಳನ್ನು ನಿರ್ಮಿಸಲಾಗುವುದು. ಪ್ರತಿ ಉದ್ಯಾನವನದಲ್ಲಿ ಓದುವ ಹವ್ಯಾಸವನ್ನು ಸಾರ್ವಜನಿಕರಲ್ಲಿ ಹೆಚ್ಚಿಸುವ ಉದ್ದೇಶದಿಂದ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸ ಪತ್ರಿಕೆಗಳೂ ಸೇರಿದಂತೆ ನಾಡು ನುಡಿಗೆ ಸಂಬಂಧಿಸದ ವಿವಿಧ ಪುಸ್ತಕಗಳನ್ನು ಒದಗಿಸಲಿದೆ.
  150 ವಾಹನ:
  ಕಸ ವಿಲೇವಾರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದ್ದು, ಸಮರ್ಪಕವಾಗಿ ಕಸ ವಿಲೇವಾರಿಯನ್ನು ಮಾಡಲು 150 ಹೊಸ ವಾಹನಗಳನ್ನು ಖರೀದಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು. ಬೀದಿ ಬದಿಯ ದನ-ಕರುಗಳನ್ನು ಗೋ ಶಾಲೆಗೆ ಸೇರಿಸುವ ಕಾರ್ಯದ ಜೊತೆಗೆ ಬೀದಿ ನಾಯಿ,ಹಂದಿಗಳ ಹಾವಳಿ ತಡೆಗಟ್ಟಲು ಕಟ್ಟುನಿಟ್ಟನ ಕ್ರಮಗಳನ್ನು ಜಾರಿಗೊಳಿಸಲಾಗುವುದು.
  ನಗರದ ಐತಿಹಾಸಿಕ ಬಳ್ಳಾರಿ ಬೆಟ್ಟಕ್ಕೆ ಈ ಮೊದಲಿನಂತೆ ಬೆಟ್ಟಕ್ಕೆ ಸುಂದರ ವಿದ್ಯುತ್ ದೀಪಲಂಕಾರಗೊಳಿಸಲಾಗುವುದು. ಜೊತೆಗೆ ಕೇಬಲ್ ಕಾರ್ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಿದೆ. ಎಲ್ಲಾ ವಾರ್ಡ್ ಗಳಲ್ಲಿ ಬೀದಿ ದೀಪಗಳ ಸಮರ್ಪಕ ಅಳವಡಿಕೆಗಾಗಿ ಎಲ್ ಇಡಿ ಬೀದಿದೀಪದ ಯೋಜನೆಯನ್ನು ಖಾಸಗಿ ಸಂಸ್ಥೆಯ ಸಹಭಾಗಿತ್ವದ ಜೊತೆಗೆ ಒಪ್ಪಂದ ಮಾಡಿಕೊಂಡು 50 ಕೋಟಿ ವೆಚ್ಚದ ಕಾಮಗಾರಿಯನ್ನು ಅಧಿಕಾರಕ್ಕೆ ಬಂದ 90 ದಿನದೊಳಗಾಗಿ ಕಾರ್ಯರೂಪಕ್ಕೆ ತರಲಿದೆ.
  ಗ್ರೀನ್ ಅಂಡ್ ಕ್ಲೀನ್ ಸಿಟಿ:
  ಪ್ರಮುಖವಾಗಿ ಗ್ರೀನ್ & ಕ್ಲೀನ್ ಸಿಟಿ ಯೋಜನೆಯಡಿಯಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳ್ಳಾರಿಯನ್ನು ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ತೆಗೆದುಕೊಳ್ಳಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದ್ದು, ಈ ಹಿನ್ನಲೆಯಲ್ಲಿ 2023ರ ಕೇಂದ್ರದ ಘೋಷಣೆಯಲ್ಲಿ ಬಳ್ಳಾರಿ ನಗರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರುವಂತಾಗಲು ಪ್ರಯತ್ನಿಸಲಾಗುವುದು.
  @12bc = ಖಾಯಂ:
  ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಹಿಳೆಯರ ಸುರಕ್ಷತೆ ಹಾಗೂ ಕಾನೂನಿನ ಸುವ್ಯವಸ್ಥೆ ಕಾಪಾಡಲು ನಗರದ ಪ್ರಮುಖ ಬಡಾವಣೆಗಳಲ್ಲಿ ಹಾಗೂ ಉದ್ಯಾನವನಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲುಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ನಿವಾಸಿಗಳು ವಾಸಿಸುವ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕೈಗೊಳ್ಳಲು ಗಮನಹರಿಸಲಾಗುವುದು.ನಗರದ ರಾಜಕಾಲುವೆಗಳಿಗೆ ತಡೆಗೋಡೆಯನ್ನು ನಿರ್ಮಿಸಿ ಕಬ್ಬಿಣದ ಗ್ರಿಲ್ ಗಳನ್ನು ಅಳವಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
  ಚತುಷ್ಪಥ ರಸ್ತೆ:
  ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಚತುಷ್ಪಥ ರಸ್ತೆಗಳನ್ನಾಗಿ ಅಭಿವೃದ್ದಿಪಡಿಸಲಿದೆ. ರೈಲ್ವೆ ಇಲಾಖೆಯ ಸಹಕಾರದೊಂದಿಗೆ ರೂ.8 ಕೋಟಿ ವೆಚ್ಚದಲ್ಲಿ ಮೋತಿ ವೃತ್ತದಲ್ಲಿರುವ ಮೇಲ್ಸೇತುವೆಯ ಆಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಸುಧಾಕ್ರಾಸ್ ಬಳಿಯ ರೈಲ್ವೆ ಮೇಲ್ಸೇತುವೆ ಯೋಜನೆಗೆ ಆದ್ಯತೆ ನೀಡಲಾಗುವುದು. ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಸುಷ್ಮಾಸ್ವರಾಜ್ ಕಾಲೋನಿಗೆ ಹೋಗುವ ರಸ್ತೆಯಲ್ಲಿ ರೈಲ್ವೇ ಅಂಡರ್ ಪಾಸ್ ನಿರ್ಮಿಸುವ ಯೋಜನೆಯನ್ನು ಕೈಗೊಳ್ಳಲಾಗುವುದು
  ಕಚೇರಿ ಸ್ಥಳಾಂತರ:
  ಸಾರ್ವಜನಿಕರ ಅನುಕೂಲದ ದೃಷ್ಠಿಯಿಂದ ಮತ್ತು ಆಡಳಿತಾತ್ಮಕ ಸಿಬ್ಬಂದಿಗೆ ಕಾರ್ಯನಿರ್ವಹಿಸಲು ಅನುಕೂಲವಾಗುವ ಹಿನ್ನೆಲೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಕಛೇರಿಯನ್ನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಕಛೇರಿಗೆ ಸ್ಥಳಾಂತರಿಸಲಾಗುವುದು ಮತ್ತು ಅಲ್ಲಿ ಸುಸಜ್ಜಿತ ಎಲ್ಲಾ ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ಮಹಾನಗರ ಪಾಲಿಕೆಯ ಕಟ್ಟಡವನ್ನು ನಿರ್ಮಿಸಲಾಗುವುದು.
  ವಿದ್ಯುತ್ ಚಿತಾಗಾರ:
  ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪಾಲಿಕೆಯಿಂದ ಅತಿ ಹೆಚ್ಚಿನ ಗಮನವನ್ನು ವಹಿಸಲಾಗುವುದು ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟದ ಸಂಬಂಧ ಸಲಹೆ ಸೂಚನೆಗಳನ್ನು ಪಡೆಯಲು ನುರಿತ ವೈದ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ರಚಿಸಲಾಗುವುದು. ಸ್ವಚ್ಛತೆಯನ್ನು ಕಾಪಾಡುವ ದೃಷ್ಠಿಯಿಂದ ಮತ್ತು ನಗರದ ಸೌಂದರ್ಯವನ್ನು ವೃದ್ಧಿಗೊಳಿಸುವ ನಿಟ್ಟಿ ಹಣ್ಣು-ಹೂವು ಹಾಗೂ ತರಕಾರಿ ಮಾರಾಟಗಾರರಿಗೆ ಸುಸಜ್ಜಿತವಾದ ಮಿನಿ ಮಾರ್ಕೆಟ್ ಗಳನ್ನು ಮೊದಲಹಂತದಲ್ಲಿ ನಗರದ 4 ಭಾಗಗಳಲ್ಲಿ ನಿರ್ಮಿಸಲಾಗುವುದು. ಅಭಿವೃದ್ಧಿ ಕಾಣದೇ ಬಾಕಿ ಉಳಿದುಕೊಂಡಿರುವ ಎಲ್ಲಾ ವಾರ್ಡ್ ಗಳಲ್ಲಿನ ಸಿಸಿ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು. ರಸ್ತೆ ಹಾಗೂ ನಗರ ಸೌಂದರ್ಯೀಕರಣದ ಭಾಗವಾಗಿ ಪುಡ್ ಕೋರ್ಟ್ ಗಳ ನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಲಾಗುವುದು. ನಗರದ ಎಲ್ಲ ಸ್ಮಶಾನಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪಾಲಿಕೆಯಿಂದ ವಿಶೇಷ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಶವಸಂಸ್ಕಾರಕ್ಕಾಗಿ ವಿದ್ಯುತ್ ಚಿತಾಗಾರ ಅಳವಡಿಕೆ ಕ್ರಮಕೈಗೊಳ್ಳಲಾಗುವುದು.
  ನೀರಿನ ಕಾರಂಜಿ:
  ಮಿನಿ ವಾಟರ್ ಸಪ್ಲೈ ಸ್ಕೀಮ್ ಯೋಜನೆಯಡಿಯಲ್ಲಿ ನಗರದ ಹಳೆಯ ಪ್ರದೇಶಗಳಲ್ಲಿ ಬೋರ್ ವೆಲ್ ಗಳನ್ನು ಕೊರೆದು, ಪೈಪ್ ಲೈನ್ ಅಳವಡಿಸಿ ಸಾರ್ವಜನಿಕರಿಗೆ ನೀರು ಒದಗಿಸಲಿದೆ. ನಗರದ ಪ್ರಮುಖ ವೃತ್ತಗಳಲ್ಲಿ ನಗರ ಸುಂದರೀಕರಣ ಭಾಗವಾಗಿ ವಿದ್ಯುತ್ ದೀಪಾಲಂಕಾರ ಹಾಗೂ ನೀರಿನ ಕಾರಂಜಿಗಳನ್ನು ನಿರ್ಮಿಸಲಿದೆ. ರಾಜ್ ಕುಮಾರ್ ಪಾರ್ಕನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ದಿಪಡಿಸುವುದಾಗಿ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ತಿಳಿಸಿದರು.
  ಈ ಸಂಧರ್ಭದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ, ಮಾಜಿ ಸಂಸದೆ ಜೆ.ಶಾಂತ, ಬಿಜೆಪಿ ಪಕ್ಷದ ಮುಖಂಡರುಗಳಾದ ಎಸ್.ಗುರುಲಿಂಗನಗೌಡ, ಕೌಲ್ ಬಜಾರ್ ಮಂಡಲ್ ಅಧ್ಯಕ್ಷ ಗೌಳಿ ಶಂಕ್ರಪ್ಪ, ಅನಿಲ್ ನಾಯ್ಡು ಅಲ್ಲಬಕಾಷ್, ವೀರಶೇಖರ ರೆಡ್ಡಿ, ರಾಜೀವ್ ತೊಗರಿ, ಓಬಳೇಶ್, ಕೃಷ್ಣಾರೆಡ್ಡಿ ಮೊಲಾದವರು ಇದ್ದರು.