ಬಳ್ಳಾರಿ ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ


ಬಳ್ಳಾರಿ,ಜು.17: ಬಳ್ಳಾರಿ ಮಹಾನಗರ ಪಾಲಿಕೆಯ ಶ್ರೀ ಕೃಷ್ಣದೇವರಾಯ ಸಭಾಂಗಣದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ಸಂಜೆ ಜರುಗಿತು.
14 ಮತ್ತು 15ನೇ ಹಣಕಾಸು ಯೋಜನೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ,ಎಂಜೆಎನ್‍ವಿವೈ, 100 ಕೋಟಿ ರೂ.ಗಳ ವಿಶೇಷ ಅನುದಾನದ 3ನೇ ಹಂತ ಹಾಗೂ ಜಿಲ್ಲಾ ಖನಿಜ ನಿಧಿ ಅಡಿ ಪ್ರಗತಿಯಲ್ಲಿರುವ ಕಾಮಗಾರಿಗಳು, ಟೆಂಡರ್ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳು ಹಾಗೂ ಟೆಂಡರ್ ಕರೆಯಬೇಕಾದ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಸೋಮಶೇಖರರೆಡ್ಡಿ ಅವರು ಟೆಂಡರ್ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆದೇಶ ನೀಡುವಂತೆ ಸೂಚನೆ ನೀಡಿದರು.
ಬಳ್ಳಾರಿ ನಗರದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಕೆ.ಯು.ಡಬ್ಲ್ಯೂ.ಎಸ್ ಮತ್ತು ಡಿ.ಬಿ. ಹಾಗೂ ಕೆ.ಯು.ಐ.ಡಿ.ಎಫ್.ಸಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇದೇ ಸಂದರ್ಭದಲ್ಲಿ 24*7 ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ನಗರದ ಒಳ ಚರಂಡಿ ವೆಟ್‍ವೆಲ್‍ಗಳ ದುರಸ್ತಿ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು.
2022-23ನೇ ಸಾಲಿನ 15ನೇ ಹಣಕಾಸು ಮತ್ತು (ಉಳಿತಾಯದ ಮೊತ್ತ) 14ನೇ ಹಣಕಾಸು ಯೋಜನೆಗಳ ಕ್ರಿಯಾ ಯೋಜನೆಗೆ ಮಾನ್ಯ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದ ತಕ್ಷಣವೇ ಟೆಂಡರ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ್ ಎಸ್.ಎನ್ ಅವರು ಸಭೆಗೆ ತಿಳಿಸಿದರು.
ತಾಂತ್ರಿಕ ಶಾಖೆಯ ಸಿಬ್ಬಂದಿಗಳಿಗೆ ಸದರಿ ಕಾಮಗಾರಿಗಳ ಕುರಿತು ಕೂಡಲೆ ಟೆಂಡರ್ ಕರೆದು ಕ್ರಮ ವಹಿಸಲು ಶಾಸಕರು ಹಾಗೂ ಆಯುಕ್ತರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಈ ಸಭೆಯಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ರಾಜೇಶ್ವರಿ, ಉಪಮಹಾಪೌರರಾದ ಮಾಲನ್ ಬೀ, ಆಯುಕ್ತರಾದ ರುದ್ರೇಶ್.ಎಸ್.ಎನ್, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶ್ರೀನಿವಾಸ ಮೋತ್ಕರ್, ರಾಮಾಂಜಿನೇಯಲು, ರಾಜಶೇಖರ್, ಸಭಾಧ್ಯಕ್ಷರಾದ ಗಾದೆಪ್ಪ ಸೇರಿದಂತೆ ತಾಂತ್ರಿಕ ಶಾಖೆ, ಆರೋಗ್ಯ ಶಾಖೆ, ಲೆಕ್ಕಪತ್ರ ಶಾಖೆ, ಆಡಳಿತ ಶಾಖೆಗಳ ಅಧಿಕಾರಿ/ಸಿಬ್ಬಂದಿ ವರ್ಗದವರು, ಕೆ.ಯು.ಡಬ್ಲ್ಯೂ.ಎಸ್ ಮತ್ತು ಡಿ.ಬಿ. ಹಾಗೂ ಕೆ.ಯು.ಐ.ಡಿ.ಎಫ್.ಸಿ ಅಧಿಕಾರಿಗಳು ಹಾಜರಿದ್ದರು.