ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ

•ಎ. 8 ರಿಂದ ನಾಮಪತ್ರ ಸಲ್ಲಿಕೆ ಆರಂಭ
•ಎ. 15 ವರೆಗೆ ನಾಮಪತ್ರ ಸಲ್ಲಿಕೆ
• ಎ. 16 ನಾಮಪತ್ರಗಳ ಪರಿಶೀಲನೆ
• ಎ 19 ನಾಮಪತ್ರ ಹಿಂದಕ್ಕೆ ಕೊನೆ ದಿನ
•ಎ. 27 ಮತದಾನ
•ಎ. 30 ಮತಗಳ ಎಣಿಕೆ
•39 ವಾರ್ಡುಗಳಿಗೆ ಚುನಾವಣೆ

ಬಳ್ಳಾರಿ:ಮಾ.29- ಕಳೆದ ಎರಡು ವರ್ಷದಿಂದ ನಿರೀಕ್ಷಿಸಲಾಗಿದ್ದ ಇಲ್ಲಿನ ಮಹಾನಗರ ಪಾಲಿಕೆಗೆ ಕೊನೆಗೂ ಚುನಾವಣೆ ಘೋಷಣೆ ಆಗಿದೆ. ಎ 8 ರಂದು ಅಧಿಚೂಚನೆ ಹೊರ ಬೀಳಲಿದೆ.
ನಗರದಲ್ಲಿನ 35 ವಾರ್ಡುಗಳನ್ನು 39 ವಾರ್ಡುಗಳನ್ನಾಗಿ ವಿಂಗಡಿಸಿ ಅವುಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಎ 8 ರಿಂದ 15 ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಎ 16 ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಏಪ್ರಿಲ್ 19 ರ ವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಬಹುದಾಗಿದೆ. ಸ್ಪರ್ಧೆ ಏರ್ಪಟ್ಟ ವಾರ್ಡಗಳಲ್ಲಿ ಏಪ್ರಿಲ್ 27 ರಂದು ಮತದಾನ ಬೆಳಗ್ಗೆ ಏಳರಿಂದ ಸಂಜೆ 5 ರವರೆಗೆ ನಡೆಯಲಿದೆ. ಏಪ್ರಿಲ್ 30 ರಂದು ಮತಗಳ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಆರ್.ನಾಗರಾಜ ಇಂದು ಆದೇಶ ಹೊರಡಿಸಿದ್ದಾರೆ . ಬಿರುಗಾಳಿ ಬೀಸಿದಂತೆ ಈ ಆದೇಶ ಹೊರ ಬಿದ್ದಿದ್ದು ರಾಜಕೀಯ ಪಕ್ಷಗಳ ಮುಖಂಡರಿಗೆ, ಸ್ಪರ್ಧಾಕಾಂಕ್ಷಿಗಳಲ್ಲಿ ತಲ್ಲಣ ಮೂಡಿಸಿದೆ ವಾರ್ಡ್ ಮೀಸಲಾತಿ ಕುರಿತ ವಿವಾದ ಇನ್ನು ಧಾರವಾಡ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಏಪ್ರಿಲ್ 5ರಂದು ವಿಚಾರಣೆಗೆ ಬರುತ್ತಿದೆ. ಈ ಹಿನ್ನಲೆಯಲ್ಲಿ ಸ್ಪರ್ಧಾಕಾಂಕ್ಷಿಗಳು ಅಷ್ಟೊಂದು ಚುರುಕುತನಕೊಂಡಿರಲಿಲ್ಲ ಆದರೂ ಕೆಲ ಆಕಾಂಕ್ಷಿಗಳು ಈಗಾಗಲೇ ತಮ್ಮ ತಮ್ಮ ವಾರ್ಡಗಳಲ್ಲಿ ಸಮಾಜ ಸೇವಾ ಕಾರ್ಯ ಚಟುವಟಿಕೆಗಳ ಮೂಲಕ ಮತದಾರರ ಗಮನ ಸೆಳೆಯಲು ತೊಡಗಿದ್ದಾರೆ.