ಬಳ್ಳಾರಿ ಬುಡಾ ಅಧ್ಯಕ್ಷರಾಗಲು ಭಾರಿ ಪೈಪೋಟಿ


ಎನ್.ವೀರಭದ್ರಗೌಡ
ಬಳ್ಳಾರಿ, ಜೂ.30: ಸಧ್ಯಕ್ಕೆ ಹಿಂಡುವ ಎಮ್ಮೆ ಎಂದೇ ಕರೆಸಿಕೊಳ್ಳುತ್ತಿರುವ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಲು ತೀವ್ರ ಪೈಪೋಟಿ ನಡೆದಿದ್ದು, ಪ್ರಬಲ ಕುರುಬ ಮತ್ತು ಲಿಂಗಾಯತ ಸಮುದಾಯಗಳ ಮುಖಂಡರ ಪ್ರಯತ್ನ ಜೋರಾಗಿದೆ.
ಪಕ್ಷಕ್ಕಾಗಿ ದುಡಿದ ಇಲ್ಲಾ ಪ್ರಭಾವಿ ನಾಯಕರ ಕೃಪಾಕಟಾಕ ಇರುವವರು. ತಮ್ಮ ಪಕ್ಷ ಆಡಳಿತಕ್ಕೆ ಬಂದಾಗ  ತಾವೂ ಸಹ ಒಂದಿಷ್ಟು ಅಧಿಕಾರದ ರುಚಿ ನೋಡಲು, ಮೆರೆಯಲು ನಿಗಮ,ಮಂಡಳಿ ಇಲ್ಲಾ ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರಾಗಲು ಬಯಸುವುದು ಸಹಜ.
ಈಗ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಇನ್ನೂ ನಿಗಮ , ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಪ್ರಕ್ರಿಯೆ ಆರಂಭವಾಗದಿದ್ದರೂ, ಗ್ರೌಂಡ ರೆಡೆಯಾಗತೊಡಗಿದೆ. ಅದಕ್ಕಾಗಿ ಆಕಾಂಕ್ಷಿಗಳು ತಮ್ಮ‌, ತಮ್ಮ ನಾಯಕರ ಮೂಲಕ, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸು ಪಡೆಯಲು ಮುಂದಾಗಿದ್ದಾರೆ.
ಈಗಾಗಲೇ ಕೆಲವರು ತಮ್ಮ ನೂರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ವಿಧಾನಸೌಧ ತಾಕಿ ಬಂದಿದ್ದಾರೆ. ಇನ್ನು ಕೆಲವರು ಗಣಪ್ಪನಂತೆ ನೀವಿದ್ದ ಮೇಲೆ ಆಯ್ತು ಎಂದು ಪ್ರಭಾವಿ ನಾಯಕರ ಸುತ್ತ ಅಷ್ಟೇ ಸುತ್ತುತ್ತಿದ್ದಾರಂತೆ.
ಶಾಸಕರು, ಸಂಸದರ ಸ್ಥಾನಗಳು ಹೆಚ್ಚಾಗಿ  ಎಸ್ಟಿಗೆ ಮೀಸಲಿರುವುದರಿಂದ ಆ ಸಮುದಾಯಕ್ಕಿಲ್ಲ. ಈಗಾಗಲೇ ಮುಸ್ಲಿಂ ಸಮುದಾಯ ಪಕ್ಷದ ಜಿಲ್ಲಾಧ್ಯಕ್ಷರು, ರಾಜ್ಯ ಸಭಾ ಸದಸ್ಯರು ಇದ್ದಾರೆ. ಈ ಮೊದಲು ಈ ಸಮುದಾಯಕ್ಕೆ ಮತ್ತು ಕಮ್ಮ ಸಮುದಾಯಕ್ಕೆ ನೀಡಿದೆ. ಹೀಗಾಗಿ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಕುರುಬ ಸಮುದಾಯದವರ ಪ್ರಯತ್ನ ಹೆಚ್ಚಿದೆಯಂತೆ.
ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಅಪ್ಪಟ ಬೆಂಬಲಿಗ ಕಟ್ಟೆಮನೆ ನಾಗೇಂದ್ರ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕರತಪಾ ಕಟಾಕ್ಷ ಹೊಂದಿರುವ ಬೆಣಕಲ್ ಬಸವರಾಜಗೌಡ ಕುರುಬ ಸಮುದಾಯದಲ್ಲಿ, ಅದೇ ರೀತಿ  ರಸಗೊಬ್ಬರ, ಕ್ರಮಿನಾಸಕ ವ್ಯಾಪಾರಿ, ವೀರಶೈವ ಮಹಾಸಭಾದ ಸಿದ್ದಮ್ಮನಹಳ್ಳಿ ತಿಮ್ಮನಗೌಡ ಮತ್ತು ಜಾನೆಕುಂಟೆ ಬಸವರಾಜ್ (ಕುಮ್ಮಿ)  ಲಿಂಗಾಯತ ಸಮುದಾಯದಲ್ಲಿ ತಮ್ಮದೇ ರೀತಿಯಲ್ಲಿ ಪ್ರಯತ್ನ ನಡೆಸಿದ್ದಾರಂತೆ.
ಆದರೆ ಪಕ್ಷ ಪ್ರಭಾವಿ ಮುಖಂಡ ಈ ವರಗೆ ಆಧ್ಯತೆ ದೊರೆಯದ ಸಮುದಾಯಗಳಾದ ಜೈನರು ಸೇರಿದಂತೆ ವಿವಿಧ ಸಮುದಾಯಗಳಿಗೆ ಅವಕಾಶ ನೀಡಬೇಕು, ವರ್ಷಕ್ಕೆ ಒಬ್ಬರಂತೆ ಐದು ವರ್ಷದಲ್ಲಿ ಐದು ಸಮುದಾಯಗಳಿಗೆ ಸೇರಿದವರನ್ನು ಬುಡಾ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಪ್ರಸ್ತಾವ ಹೊಂದಿದ್ದಾರಂತೆ.
ಒಟ್ಟಾರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮತ್ತು ನಗರ ಶಾಸಕ ಭರತ ರೆಡ್ಡಿ ಶಿಫಾರಸು, ಕೃಪೆ ಯಾರಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.