ಬಳ್ಳಾರಿ ಪಾಲಿಕೆ ಚುನಾವಣೆ ಬಿಜೆಪಿಗೆ 21 ಕಾಂಗ್ರೆಸ್‍ಗೆ 19

ಎನ್.ವೀರಭದ್ರಗೌಡ
ಬಳ್ಳಾರಿ, ಏ.26: ಇಲ್ಲಿನ ಮಹಾನಗರ ಪಾಲಿಕೆಯ2021-2026 ನೇ ಸಾಲಿಗೆ ಐದು ವರ್ಷಗಳ ಕಾಲ ಆಡಳಿತ ನಡೆಸಲು 39 ವಾರ್ಡುಗಳ ಕಾರ್ಪೋರೇಟರ್‍ಗಳ ಆಯ್ಕೆಗೆ ನಾಳೆ ಎ 27 ರಂದು ಮತದಾನ ನಡೆಯಲಿದೆ.
ಕಳೆದ ಬಾರಿ ಪಾಲಿಕೆಯಲ್ಲಿ 35 ವಾರ್ಡುಗಳಿದ್ದವು. ಅವನ್ನು ಈಗ ವಿಭಜನೆ ಮಾಡಿ 39 ವಾರ್ಡುಗಳನ್ನಾಗಿ ಮಾಡಿದೆ. ಈ 39 ವಾರ್ಡುಗಳಲ್ಲಿ 186 ಜನ ಸ್ಪರ್ಧಾಕಣದಲ್ಲಿದ್ದಾರೆ.ಎಲ್ಲಾ ವಾರ್ಡಿನಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರೆ, ಜೆಡಿಎಸ್ ಮತ್ತು ಜನಹಿತ ಪಕ್ಷ ತಲಾ 5ರಲ್ಲಿ, ಎನ್.ಸಿ.ಪಿ9 ರಲ್ಲಿ, ಕೆಜೆಪಿ, ಶಿವಸೇನೆ ಕರ್ನಾಟಕ ರಾಷ್ಟ್ರ ಸಮಿತಿ ತಲಾ 2 ವಾರ್ಡಿನಲ್ಲಿ ಆಮ್ ಆದ್ಮಿ 6 ರಲ್ಲಿ, ಸಮಾಜವಾದಿ ಪಕ್ಷ, ಕೆ.ಆರ್.ಎಸ್ ಹಾಗು ಎಐಎಂಎಎಂ ತಲಾ 4 ವಾರ್ಡುಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ.39 ವಾರ್ಡುಗಳ ಪೈಕಿ 2 ನೇವಾರ್ಡಿನಲ್ಲಿ ಮಾತ್ರ ಕಾಂಗ್ರೆಸ್ ಹಾಗು ಬಿಜೆಪಿ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿರುವುದರಿಂದ ಇವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಇನ್ನು 30 ನೇವಾರ್ಡುನಲ್ಲಿ ಅತಿ ಹೆಚ್ಚು ಅಂದರೆ 11 ಜನ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದರೆ. 3, 9, 13, ನೇ ವಾರ್ಡುಗಳಲ್ಲಿ ತಲಾ 9 ಜನ ಸ್ಪರ್ಧಿಗಳಿದ್ದಾರೆ.ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೂ, ವಾರ್ಡು ಸಂಖ್ಯೆ 3,17,32,35, ಮತ್ತಿತರೇ ವಾರ್ಡುಗಳಲ್ಲಿ ಪಕ್ಷೇತರರು ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ಉಳಿದ ಪಕ್ಷಗಳು ತಾವು ಗೆಲ್ಲಬೇಕೆಂಬ ಹಂಬಲದಿಂದ ಕಣದಲ್ಲಿದ್ದಾರೆ. ಮತದಾರರ ಸ್ಪಂದನೆ ಅಷ್ಟಾಗಿ ಕಾಣಬರುತ್ತಿಲ್ಲ.
ಈ ಬಾರಿ 39 ವಾರ್ಡು ಸದಸ್ಯರ ಜೊತೆ ಪಾಲಿಕೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಅವರನ್ನು ಆಯ್ಕೆ ಮಾಡಲು, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಲೋಕಸಭಾ ಸದಸ್ಯ ದೇವೇಂದ್ರಪ್ಪ ಬಿಜೆಪಿಯಿಂದ. ಗ್ರಾಮೀಣ ಶಾಸಕ ಬಿ.ನಾಗೇಂದ್ರ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ ಮತ್ತು ಕೆ.ಸಿಕೊಂಡಯ್ಯ ಅವರು ಕಾಂಗ್ರೆಸ್‍ನಿಂದ ಮತ ಚಲಾಯಿಸಬಹುದಾಗಿದೆ.
ಇದರಿಂದಾಗಿ ಪಾಲಿಕೆಯಲ್ಲಿ ಆಡಳಿತ ಪಡೆಯಲು ಪಾಲಿಕೆಯ 39 ಸದಸ್ಯರು ಮತ್ತು ಬಿಜೆಪಿ ಇಬ್ಬರು, ಕಾಂಗ್ರೆಸ್‍ನ ನಾಲ್ವರು ಶಾಸಕ, ಸಂಸದರು ಸೇರಿ ಒಟ್ಟಾರೆ ಸಂಖ್ಯೆ 45 ಜನ ಮತನೀಡಿ ಮೇಯರ್, ಉಪ ಮೇಯರ್ ಅವರನ್ನು ಆಯ್ಕೆ ಮಾಡಬೇಕಾಗುತ್ತದೆ. ಇದಕ್ಕಾಗಿ 45 ರಲ್ಲಿ ಅರ್ಧ ಎಂದರೆ 23 ಮತಗಳು ಬೇಕಾಗುತ್ತದೆ. ಅದಕ್ಕಾಗಿ ಬಿಜೆಪಿಗೆ ಕನಿಷ್ಟ 21 ಮತ್ತು ಕಾಂಗ್ರೆಸ್‍ಗೆ 19 ವಾರ್ಡುಗಳಲ್ಲಿ ತನ್ನ ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಅನಿವಾರ್ಯತೆ ಇದೆ. ಮತದಾರ ಯಾರಿಗೆ ಎಷ್ಟು ಆಶೀರ್ವಾದ ಮಾಡುತ್ತಾನೆ ಎಂಬುದನ್ನು ಎ.30 ರಂದು ಅರಿಯಬಾಹುದಾಗಿದೆ.
ಗುಪ್ತ ವಾರ್ತೆ
ಸಾಮಾಜಿಕ ಜಾಲತಾಣದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗುಪ್ತ ಇಲಾಖೆ ಮಾಹಿತಿ ಪ್ರಕಾರ ಕಾಂಗ್ರೆಸ್ 15ರಲ್ಲಿ, ಬಿಜೆಪಿ 18ರಲ್ಲಿ 3 ವಾರ್ಡಿನಲ್ಲಿ ಪಕ್ಷೇತರರು ಹಾಗೂ 3 ವಾರ್ಡಿನಲ್ಲಿ ನೇರಾ ನೇರಾ ಸ್ಪರ್ಧೆ ಇದೆ ಎಂದು ಹೇಳಿರುವ ಕಾಪಿ ಹರಿದಾಡುತ್ತಿದೆ.


ಹಿಂದಿನ ಫಲಿತಾಂಶಗಳು
2001 ರಲ್ಲಿ ನಡೆದ ಚುನಾವಣೆಯಲ್ಲಿ 35 ಸ್ಥಾನಗಳ ಪೈಕಿ ಬಿಜೆಪಿಗೆ 18, ಕಾಂಗ್ರೆಸ್‍ಗೆ 14, ಎರೆಡು ಜೆಡಿಯು, ಮತ್ತು ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು.
2007 ರಲ್ಲಿ ನಡೆದ ಚುನಾವಣೆಯಲ್ಲಿ 35 ವಾರ್ಡುಗಳ ಪೈಕಿ 30 ರಲ್ಲಿ ಬಿಜೆಪಿ ಎರಡರಲ್ಲಿ ಬಿಎಸ್ಪಿ ಮೂವರು ಪಕ್ಷೇತರರು ಆಯ್ಕೆಯಾಗಿದ್ದರು.
ಕಳೆದ ಬಾರಿ 2013 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-26, ಜೆಡಿಎಸ್-01, ಬಿಎಸ್‍ಅರ್-06, ಸ್ವತಂತ್ರರು-02 ಆಯ್ಕೆಯಾಗಿದ್ದರು.

ಚುನಾವಣೆ ಬಗ್ಗೆ ಮುಖಂಡರ ಅನಿಸಿಕೆ
ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮನೆ, ನೀರಿನ ತೆರಿಗೆ ಕಡಿತಗೊಳಿಸಲಿದೆ. ನೀರಿನ ಸಮಸ್ಯೆ ನಿವಾರಣೆಗೆ ತುಂಗಭದ್ರ ಮತ್ತು ಕೆಪಿಟಿಸಿಎಲ್‍ನಿಂದ ನೀರು ತರುವುದು, ಒಳ ಚರಂಡಿಗೆ 220 ಕೋಟಿ ಯೋಜನೆ, ಕೇಂದ್ರ ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಟಾನ ನಮ್ಮದಾಗಿದೆ.
ಜಿ..ಸೊಮಶೇಖರೆಡ್ಡಿ ನಗರ ಶಾಸಕರು ಬಳ್ಳಾರಿ

ಬಿಜೆಪಿಯಿಂದ ಮಾತ್ರ ಅಭಿವೃದ್ದಿ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿರುವುದರಿಂದ. ನಗರ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಇರಬೇಕೆಂಬುದು ನಗರದ ಜನತೆಯ ಆಶಯ
ಬಿ.ಶ್ರೀರಾಮುಲು ಸಮಾಜ ಕಲ್ಯಾಣ ಸಚಿವರು

ಎರೆಡು ಬಾರಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಗರದ ರಸ್ತೆಗಳ ಅಗಲೀಕರಣ, ಉದ್ಯಾನವನಗಳ ಅಭಿವೃದ್ದಿ, ಉತ್ತಮ ಆಡಳಿತ ನೋಡಿದ್ದ ಜನ, ಕಳೆದ ಬಾರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಏನು ಅಭಿವೃದ್ದಿ ಮಾಡದಿರುವುದನ್ನು ನೋಡಿದ್ದಾರೆ. ಹಾಗಾಗಿ ಬಿಜೆಪಿಗೆ ಮತ ನೀಡಲಿದ್ದಾರೆ.
ಸಣ್ಣ.ಪಕ್ಕೀರಪ್ಪ. ಮಾಜಿ ಸಂಸದರು

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಸಹಜವಾಗಿ ಅದೇ ಪಕ್ಷದ ಆಡಳಿತ ಬಂದರೆ ನಗರದ ಅಭೀವೃದ್ದಿಗೆ ಸಹಕಾರಿಯಾಗಲಿದೆ. ಈ ಬಗ್ಗೆ ಮತದಾರರಿಗೂ ತಿಳಿಸಿದ್ದು ಬಳ್ಳಾರಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ
ಆನಂದ್ ಸಿಂಗ್. ಜಿಲ್ಲಾ ಉಸ್ತುವಾರಿ ಸಚಿವರು.

ಕಳೆದ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕೇತ್ರದ ವ್ಯಾಪ್ತಿಯ ವಾರ್ಡುಗಳಲ್ಲಿ ಮತದಾರ ಯಾವ ಪಕ್ಷಕ್ಕೆ ಹೆಚ್ಚು ಓಟು ನೀಡಿದ್ದಾರೆ ಎಂಬುದನ್ನು ಅವಲೋಕಿಸಿದರೆ ತಿಳಿಯುತ್ತೆ. ನನ್ನ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಕಾಂಗ್ರೆಸ್ ಜಯಸುತ್ತೆ ಎಂಬ ವಿಶ್ವಾಸವಿದೆ
ಬಿ.ನಾಗೇಂದ್ರ. ಶಾಸಕರು ಗ್ರಾಮೀಣ ಕ್ಷೇತ್ರ.

ಬಿಜೆಪಿಯವರೂ ಏನೇ ಹೇಳಲಿ ಮತದಾರರು ನಮ್ಮ ಪರವಾಗಿದ್ದಾರೆ. ಕಳೆದ ಬಾರಿಯೂ ಪಾಲಿಕೆಯಲ್ಲಿ ಉತ್ತಮ ಆಡಳಿತ ನೀಡುವ ನಡೆದಿದೆ. ಮತ್ತೆ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ
ಮಹಮ್ಮದ್ ರಫೀಕ್ ಅಧ್ಯಕ್ಷರು ನಗರ ಜಿಲ್ಲಾ ಕಾಂಗ್ರೆಸ್ ಬಳ್ಳಾರಿ.

ಚುನಾವಣೆ ಎಂದ ಮೇಲೆ ಗೆಲುವು ಸೋಲು ಇದ್ದೇ ಇರುತ್ತೆ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಒಂದೆರೆಡು ಕಡೆ ಬಿಟ್ಟರೆ ಉಳಿದಂತೆ ಎಲ್ಲಾ ವಾರ್ಡುಗಳಲ್ಲಿ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮತದಾರ ಪ್ರಭುಗಳ ನಿರ್ಧಾರವೇ ಅಂತಿಮ. ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ.
ಕೆ.ಸಿ.ಕೊಂಡಯ್ಯ. ವಿಧಾನ ಪರಿಷತ್ ಸದಸ್ಯರು.