ಬಳ್ಳಾರಿ ಪಾಲಿಕೆಗೆ ಶಾಂತಿಯುತ ಮತದಾನ

ಬಳ್ಳಾರಿ,ಏ.೨೭: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಜಿದ್ದಾಜಿದ್ದಿನ ಕಣವಾಗಿರುವ ಇಲ್ಲಿನ ಮಹಾನಗರ ಪಾಲಿಕೆಯ ೩೯ ವಾರ್ಡುಗಳ ಸದಸ್ಯರ ಆಯ್ಕೆಯ ಚುನಾವಣೆ ಅಗಂವಾಗಿ ಇಂದು ಬೆಳಿಗ್ಗೆ ೭ ರಿಂದ ಮತದಾನ ೩೩೮ ಮತಗಟ್ಟೆಗಳಲ್ಲಿ ಚುರುಕಿನಿಂದ ಸಾಗಿದೆ.
ಕೋವಿಡ್‌ನಿಂದಾಗಿ ಸಂಜೆ ೫ ರವರೆಗೆ ಇದ್ದ ಮತದಾನವನ್ನು ಸಂಜೆ ೫ ರಿಂದ ೬ ವರೆಗೆ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಕೋವಿಡ್ ಮತ್ತು ಬಿಸಿಲಿನ ತಾಪ ಹೆಚ್ಚಿರುವ ಹಿನ್ನಲೆಯಲ್ಲಿ ಮತದಾನ ಹೆಚ್ಚಾಗುವ ಸಾಧ್ಯತೆ ಕಡಿಮೆ ಇದೆ.
ಮತದಾನ ಮಾಡಲು ೧,೬೬,೨೯೮ ಪುರುಷರು,೧,೭೪,೫೩೮ ಮಹಿಳೆಯರು ಹಾಗೂ ೩೬ ಇತರೇ ಸೇರಿದಂತೆ ಒಟ್ಟು ೩ಲಕ್ಷದ ೪೦ ಸಾವಿರದ ೮೮೨ ಮತದಾರರು ಅರ್ಹರಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ೬ ಜನ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಗನವಾಡಿ ಅಥವಾ ಆಶಾ ಕಾರ್ಯಕರ್ತೆಯರನ್ನು ಮತದಾನ ಮಾಡಲು ಆಗಮಿಸುವ ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್ ಮತ್ತು ಪಲ್ಸ್ ಆಕ್ಸಿಮಿಟರ್ ಪರಿಶೀಲಿಸಿ ಮತಗಟ್ಟೆಯೊಳಕ್ಕೆ ಬಿಡುತ್ತಿದ್ದಾರೆ. ಮತದಾರರು ಬಹುತೇಕವಾಗಿ ಮಾಸ್ಕಧರಿಸಿಕೊಂಡು ಬರುತ್ತಿದ್ದಾರೆ, ಹಾಗೆ ಬಂದವರಿಗೆ ಮಾಸ್ಕ್ ಅನ್ನು ನೀಡಲಾಗುತ್ತಿತ್ತು. ಆದರೂ ಅನೇಕ ಕಡೆಗಳಲ್ಲಿ ಕೋವಿಡ್ ನಿಯಮಗಳನ್ನು ಬರೀ ಜನಪ್ರತಿನಿಧಿಗಳಲ್ಲದೆ ಜನರೂ ಕೂಡ ಮತದಾನದ ವೇಳೆ ಗಾಳಿಗೆ ತೂರಿದ್ದು ಮತಗಟ್ಟೆ ಹೊರಗೆ ಕಂಡು ಬಂತು. ಸಾಮಾಜಿಕ ಅಂತರ ಇಲ್ಲವೇ ಇಲ್ಲ. ಮತಗಟ್ಟೆ ಬಳಿ ಚುನಾವಣೆ ಅಧಿಕಾರಿಗಳ ಮಾತಿಗೆ ಬೆಲೆ ಕೊಡದ ಜನ ಮತದಾನ ಮಾಡಲು ಮುಗಿಬಿದ್ದಿದ್ದರು.
ಬೆಳಿಗ್ಗೆ ಮತದಾರರು ಬಹುತೇಕ ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಿಸಿಲು ನೆತ್ತಿಗೇರುವುದನ್ನು ತಪ್ಪಿಸಲು ಮತಗಟ್ಟೆಗಳ ಮುಂದೆ ಷಾಮೀಯಾನ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.
ಗಣ್ಯರ ಮತದಾನ:
ಬಳ್ಳಾರಿ ಮಹಾನಗರ ಪಾಲಿಕೆಗೆ ಇಂದು ನಡೆದ ಮತದಾನದಲ್ಲಿ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಸಂತಜಾನ್ ಶಾಲೆಯಲ್ಲಿ ಮತಹಾಕಿ ಬಂದು ಕೊರೋನಾ ನಿಯಮ ಪಾಲನೆ ಮಾಡಿ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಕಾಂಗ್ರೆಸ್ ದುರಾಡಳಿತಕ್ಕೆ ಜನರು ಈ ಬಾರಿ ಬಿಜೆಪಿ ಬೆಂಬಲಿಸಲಿದ್ದಾರೆ. ಹಳ್ಳಿಯಿಂದ ಡಿಲ್ಲಿವರೆಗೂ ಜನರು ಕಾಂಗ್ರೆಸ್ ಧಿಕ್ಕರಿಸಲಿದ್ದಾರೆ. ಕಳೆದ ಬಾರಿ ಕೈತಪ್ಪಿದ ಪಾಲಿಕೆ ಗದ್ದುಗೆ ಈ ಬಾರಿ ಬಿಜೆಪಿಗೆ ಒಲಿಯಲಿದೆ. ಎಂದರು. ಅವರ ಮಗಳು ಉಮಾದೇವಿ ೩೯ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.
ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರು ಗಾಂಧೀನಗರದಲ್ಲಿರುವ ಬಾಲ ಭಾರತಿ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರೆ. ಮಾಜಿ ಮೇಯರ ಹಾಗು ೧೩ ವಾರ್ಡಿನ ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಿ. ಇಬ್ರಾಹಿಂ ಬಾಬು ಅವರ ಪತ್ನಿ ಸಮೇತ ಮಿಲ್ಲರ್ ಪೇಟೆಯ ಉರ್ದು ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.
ಇನ್ನು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಮಹಿಳಾ ಮತ್ತು ಮಕ್ಕಳ ಇಲಾಖೆ ಕಚೇರಿಯಲ್ಲಿನ ಬೂತ್‌ನಲ್ಲಿ, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವಂಬಾವಿಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಪತ್ನಿ ಪುತ್ರರ ಸಮೇತ ಮತಚಲಾಯಿಸಿದರು.
ಅದೇ ರೀತಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ ಅವರು ಮಿಲ್ಲರ್ ಪೇಟೆಯ ಕಮ್ಮಿಂಗ್ ರಸ್ತೆಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ, ಕೆ.ಸಿ.ಕೊಂಡಯ್ಯ ಅವರು ಮತದಾನ ಮಾಡಿದ್ದಾರೆ.