ಬಳ್ಳಾರಿ ಪತ್ರಕರ್ತರ ಸಾಂಸ್ಕೃತಿಕ ಒಕ್ಕೂಟ ಅಸ್ತಿತ್ವಕ್ಕೆ
 ಪತ್ರಕರ್ತರು ಅಪ್ ಡೇಟ್ ಆಗಬೇಕು: ಮಾಲಪಾಟಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.10: ಒಂದು ವೃತ್ತಿಗೆ ಬಂದ ಮೇಲೆ ಬದಲಾವಣೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯವಶ್ಯ‌ ಆ ಉದ್ದೇಶದಿಂದ ಒಕ್ಕೂಟ ರಚನೆ ಸೂಕ್ತವಾದುದು ಎಂದು.
ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹೇಳಿದರು.
ಅವರು ಇಂದು ಇಲ್ಲಿನ ವಾರ್ತಾ ಇಲಾಖೆಯ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಪತ್ರಕರ್ತರ ಸಾಂಸ್ಕೃತಿಕ ಒಕ್ಕೂಟ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ನಮಗೂ ಅಕಾಡೆಮಿಗಳಲ್ಲಿ ತರಬೇತಿ ಕೊಟ್ಟರೂ, ನಂತರದ ದಿನಗಳಲ್ಲಿ ಆಗಾಗ್ಗೆ ಬದಲಾವಣೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಅದರಂತೆ ಮಾಧ್ಯಮ ಪ್ರತಿನಿಧಿ ಗಳೂ ಇಂದಿನ  ಸ್ಪರ್ಧೆ ಹೆಚ್ಚಿದ ದಿನಗಳಲ್ಲಿ‌ ತಂತ್ರಜ್ಞಾನ ಬಳಸಿಕೊಂಡು ಸುದ್ದಿಯನ್ನು ನಿಖರತೆಯಿಂದ ನೀಡಲು ಅಗತ್ಯವಾದ ತರಬೇತಿ ಬೇಕು ಎಂದರು.
ಯುವ ಮಾಧ್ಯಮ ಪ್ರತಿನಿಧಿಗಳಿಗೆ ಹಿರಿಯ ಪ್ರತಿನಿಧಿಗಳು ತಮ್ಮ ಅನುಭವ ಪತ್ರಕರ್ತರಿಗೆ ಇರುವಷ್ಟು ಅನುಭವ ಯಾರಿಗೂ ಇರಲ್ಲ. ಅವರು ಎಲ್ಲಾ ವಿಚಾರಗಳ ಬಗ್ಗೆ ಅರಿತುಕೊಂಡಿರುತ್ತಾರೆ. ಹೆಚ್ಚಿನ ಜನರನ್ನು ಸಂಪರ್ಕದಲ್ಲಿರುತ್ತಾರೆ. ಹಿಂದಿನ ಮಾಹಿತಿಗಳನ್ನು ಇಂದಿನ ಜನತೆಗೆ ನೀಡುವುದು ಜ್ಞಾನಕ್ಕೆ ಸಹಕಾರಿಯಾಗಲಿದೆ.
ವರ್ಷಕ್ಕೆ ಒಂದು ಎರೆಡು ತರಬೇತಿ ರೀತಿಯ ಕಾರ್ಯಕ್ರಮ ಮಾಡಿ. ಜ್ಞಾನ ವೃದ್ದಿಗೆ ಗ್ರಂಥಾಲಯ ಮಾಡಿ ಜಿಲ್ಲಾಡಳಿತ ಸಹಕಾರ ಮಾಡಲಿದೆಂದರು.
ಎಸ್ಪಿ ರಂಜಿತ್ ಕುಮಾರ್ ಅವರು ಮಾತನಾಡಿ, ಯಾವುದೇ ವೃತ್ತಿಯಾಗಲಿ ದಿನ ನಿತ್ಯ ಒಂದೇ ರೀತಿಯ ಕೆಲಸ ಕಾರ್ಯಗಳಿಂದ, ಏಕತಾನತೆ ಇರುತ್ತೆ. ವೃತ್ತಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಹೊಂದಲು   ಒಕ್ಕೂಟದ ಕಾರ್ಯಕ್ರಮಗಳು ಸಹಕಾರಿಯಾಗಲಿ ಎಂದರು.
ಪಾಲಿಕೆಯ ಆಯುಕ್ತ ಎಂ.ಎನ್.ರಯದ್ರೇಶ್ ಮಾತನಾಡಿ. ನಿಮ್ಮ ಮತ್ತು ಕುಟುಂಬದ ಸದಸ್ಯರ ಪ್ರತಿಭೆಗಳ ಅನಾವರಣಕ್ಕೆ ಒಕ್ಕೂಟ ಸಹಕಾರಿಯಾಗಲಿ. ಪಾಲಿಕೆಯಲ್ಲಿನ ಅನುದಾನದಿಂದ ನೀವು ಹಮ್ಮಿಕೊಳ್ಳುವ ವಿಚಾರ ಸಂಕಿರಣಕ್ಕೆ ನೆರವನ್ನು ನೀಡಲಿದೆಂದು ಭರವಶೆ ನೀಡಿದರು. 
ವಾರ್ತಾಧಿಕಾರಿ  ಧನಂಜಯ್ ಅವರು ಮಾತನಾಡಿ, ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣ ಆಗಿವೆ. ಸಾಂಸ್ಕ್ರತಿಕವಾಗಿ ನಿಮ್ಮ ವೇದಿಕೆ ನಾಟಕ, ಗಾಯನ ಮೊದಲಾದ ಕಾರ್ಯಕ್ರಮಗಳನ್ನು ಮಾಡಿ, ಸಾಂಸ್ಕೃತಿಕ ಲೋಕದಿಂದ ದೂರವಾಗುವುದನ್ನು ತಪ್ಪಿಸಿ. ಮಾಧ್ಯಮ ಅಕಾಡೆಮಿಯಿಂದ ಪತ್ರಕರ್ತರ ತರಬೇತಿಗೆ ಅಗತ್ಯ ಸಹಕಾರ ನೀಡಲಿದೆಂದರು.
ಸಂಯುಕ್ತ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ವೀರನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳೆಯುತ್ತಿರುವ, ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ನಾವೆಲ್ಲ ಅಪ್ ಡೇಟ್ ಆಗಲು ಸೇರಿದಂತೆ ವಿವಿಧ
ರೀತಿಯ ಕಾರ್ಯಕ್ರಮಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ  ಆಯೋಜಿಸುವ ಉದ್ದೇಶದಿಂದ ಒಕ್ಕೂಟವನ್ನು ಅಸ್ತಿತ್ವಕ್ಕೆ ತಂದಿದೆ ಎಂದರು.
ಒಕ್ಕೂಟದ ಅಧ್ಯಕ್ಷ  ಶಶಿಧರ ಮೇಟಿ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಗಂಗಾಧರ ಬಂಡಿಹಾಳ್,  ಒಕ್ಕೂಟದ ಗೌರವ ಅಧ್ಯಕ್ಷ ನಂಜುಂಡೇಗೌಡ, 
ಎಮ್ಮಿಗನೂರು ಜಡೇಶ್ ಪ್ರಾರ್ಥನೆ. ಡಾ.ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೆಂಕೋಬಿ ಸಂಗನಕಲ್ಲು ವಂದನಾರ್ಪಣೆ ಮಾಡಿದರು.