ಬಳ್ಳಾರಿ ನನ್ನ ತಾಯಿನೆಲ ನೀವೇ ನನ್ನ ಬಂಧುಗಳು;ಶ್ರೀರಾಮುಲು

ಬಳ್ಳಾರಿ, ಏ.18: ನಾನು ಇಂದು ಮೊಳಕಾಲ್ಮುರು ಶಾಸಕನಾಗಿರಬಹುದು, ಅದಕ್ಕೆ ಅನೇಕ ಕಾರಣಗಳಿವೆ. ಏನೇ ಆದರೂ ನನಗೆ ಬಳ್ಳಾರಿಯೇ ತಾಯಿ ನೆಲ ಇಲ್ಲಿನ ಜನರೆಲ್ಲ ನನ್ನ ಬಂಧುಗಳು ಎಂಬುದನ್ನು ನಾನು ಮರೆಯಲಾರೆ ಹೀಗೆಂದವರು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು.
ಅವರು ಇಂದು ಇಲ್ಲಿನ ಪಾಲಿಕೆಯ ಚುನಾವಣೆಯ ಹಿನ್ನಲೆಯಲ್ಲಿ ಒಂದು, 23 ನೇ ವಾರ್ಡಿನ ಅಭ್ಯರ್ಥಿಗಳ ಪರ ಮತ ನೀಡುವಂತೆ ಮನೆ, ಮನೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಒಂದನೇ ವಾರ್ಡಿನ ರೇಣುಕಾ ನಗರಲ್ಲಿದ್ದ ಇಬ್ಬರು ದಂಪತಿಗಳಿಗೆ ಕರ ಪತ್ರ ನೀಡಿ ಬಿಜೆಪಿ ಅಭ್ಯರ್ಥಿಗೆ ಮತನೀಡಿ ಎಂದು ಮನವಿ ಮಾಡಿದರು. ಅವರು ಗುರುತು ಹಿಡಿದು ನೀನು ಶ್ರೀರಾಮುಲು ಅಲ್ಲವೇ, ಬೇರೆ ಕಡೆ ಹೋಗಿರುವೆ ಅಂತಾರೆ ಜನ ಎಂದಾಗ ಸಚಿವ ಶ್ರೀರಾಮುಲು ಅವರು, ಇಲ್ಲ ಯಜಮಾನರೇ ನಾನು ಎಲ್ಲಿ ಹೋಗಿಲ್ಲ. ಇಲ್ಲೇ ಮೊಳಕಾಲ್ಮುರು ಶಾಸಕನಾಗಿರುವೆ, ಚಿತ್ರದುರ್ಗ ಜಿಲ್ಲೆಯ ಸಚಿವನಾಗಿರುವೆ, ಹಾಗಾಗಿ ನಿಮ್ಮನ್ನು ಹೆಚ್ಚಾಗಿ ಭೇಟಿ ಮಾಡಲು ಆಗಿಲ್ಲ. ನನಗೆ ರಾಜಕೀಯ ಜನ್ಮ ನೀಡಿದ ಈ ನೆಲವನ್ನು ಬಿಟ್ಟು ಎಲ್ಲಿ ಹೋಗಲ್ಲ, ನೀವೆಲ್ಲ ಇರುವಾಗ ನಾನು ಬೇರೆ ಕಡೆಹೋಗಲಾರೆ, ಹೋದರೂ ಅದು ತಾತ್ಕಾಲಿಕ ಅಷ್ಟೇ. ಈಗ ಪಾಲಿಕೆ ಚುನಾವಣೆ ಬಂದಿವೆ. ಮತ್ತಷ್ಟು ನಗರದ ಅಬಿವೃದ್ದಿಯಾಗಬೇಕು, ನಿಮ್ಮ ವಾರ್ಡುಗಳ ಯಾವುದೇ ಸಮಸ್ಯೆಗಳು ಬಗೆಹರಿಯಬೇಕೆಂದರೆ ಬಿಜೆಪಿ ಅಭ್ಯರ್ಥಿಗೆ ಮತನೀಡಿ, ಪಾಲಿಕೆಯಲ್ಲಿ ಬಿಜೆಪಿ ಆಡಳಿತ ತನ್ನಿ ಎಂದರು. ಅದಕ್ಕೆ ಆ ವೃದ್ದರು ನಾವು ನೀನು ಬಂದಾಗಿನಿಂದ ಬಿಜೆಪಿ ಬಿಟ್ಟರೆ ಬೇರೆಯವರಿಗೆ ಯಾಕೆ ಮತ ಹಾಕಬೇಕೆಂದಿದ್ದು ಸಚಿವರ ಮೊಗದಲ್ಲಿ ಸಂತಸ ಮೂಡಿಸಿತು.
ಪಕ್ಷದ ಅಭ್ಯರ್ಥಿ ಗುಡಿಗಂಟಿ ಹನುಮಂತ, ಗೊಲ್ಲರ ಶ್ರೀನ ಮೊದಲಾದ ಮುಖಂಡರು ಇದ್ದರು. ವಾರ್ಡಿಗೆ ಬರುತ್ತಿದ್ದಂತೆ ಜನತೆ ಪಟಾಕಿ ಬಿಟ್ಟು, ತಮಟೆ ಬಾರಿಸುತ್ತ ಶ್ರೀರಾಮುಲು ಅವರನ್ನು ಸ್ವಾಗತಿಸಿದರು.