
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.15: ನಗರ ಕ್ಷೇತ್ರದಿಂದ ಹಾಲಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಇಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದೇ ರೀತಿ ಜಿಲ್ಲೆಯ ಹಲವಡೆ ಅನೇಕರು ನಾಮಪತ್ರ ಸಲ್ಲಿಸಿದ್ದಾರೆ.
ಕಂಪ್ಲಿಯಲ್ಲಿ ತಮ್ಮ ನೂರಾರು ಬೆಂಲಿಗರಿಂದ ಸುರೇಶ್ ಬಾಬು ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ಇತ್ತ ಬಳ್ಳಾರಿಯಲ್ಲಿ ನಗರ ದೇವತೆ ಕನಕ ದುರ್ಗಮ್ಮಗೆ ಪೂಜೆ ಸಲ್ಲಿಸಿದ ಜಿ. ಸೋಮಶೇಖರ ರೆಡ್ಡಿ ಅವರು. ತಮ್ಮಸಾವಿರಾರು ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಪಾದಯಾತ್ರೆ ಮೂಲಕ ಪಾಲಿಕೆ ಕಚೇರಿಗೆ ತೆರಳಿ ಚುನಾವಣಾಧಿಕಾರಿ, ಪಾಲಿಕೆ ಆಯುಕ್ತ ಎಂ.ಎನ್, ರುದ್ರೇಶ್ ಅವರಿಗೆ ನಾಮ ಪತ್ರ ಸಲ್ಲಿಸಿದರು.
ಸೋಮಶೇಖರ ರೆಡ್ಡಿ ಅವರು ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ಮೂರನೇ ಬಾರಿಗೆ ಶಾಸಕರಾಗಲು ಬಯಸಿ ಕಣಕ್ಕಿಳಿದಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ಸಂಜೆವಾಣಿಯೊಂದಿಗೆ ಮಾತನಾಡಿದ ಸೋಮಶೇಖರ ರೆಡ್ಡಿ ಅವರು ಈ ಬಾರಿ ತಮ್ಮ ಗೆಲುವು ಖಚಿತ ಎಂದು. ಎದುರಾಳಿ ಯಾರೆಂದು ನಾನು ಚುನಾವಣೆ ಎದುರಿಸಲ್ಲ. ನನ್ನ ಗೆಲುವಿನ ಹೋರಾಟ ನಾನು ಮಾಡುವೆ. ಸಚಿವ ಶ್ರೀರಾಮುಲು, ಪಕ್ಷದ ಎಲ್ಲ ಮುಖಂಡರು, ಬೃಹತ್ ಕಾರ್ಯಕರ್ತರ ಪಡೆ, ಬೆಂಬಲಿಗರು, ಹಿತೈಷಿಗಳ ಆಶಿರ್ವಾದ ಇದೆ. ಗೆಲುವು ಖಚಿತ ಮಾರ್ಜಿನ ಬಗ್ಗೆ ಅಷ್ಟೇ ಮತದಾರ ತೀರ್ಮಾನ ಮಾಡಬೇಕು ಎಂದರು.
ಕೆ.ಆರ್.ಪಿ ಪಕ್ಷ ನಿಮ್ಮ ಗೆಲುವಿಗೆ ಅಡ್ಡಿಯಾಗಲ್ಲವೇ ಎಂಬ ಪ್ರಶ್ನೆಗೆ ಇದು ಪ್ರಜಾ ಪ್ರಭುತ್ವ, ಸೊಸೆ ಸ್ಪರ್ಧಿಸುತ್ತಿದ್ದಾರಂತೆ. ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ತೀರ್ಪು ಮತದಾರರದು ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ಮೂಲಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವುದು ಜನತೆಗೆ ಗೊತ್ತಿದೆ. 12 ಸಾವಿರ ಕುಟುಂಬಗಳಿಗೆ ಪಟ್ಟಾ ಹಂಚಿದೆ, ರಸ್ತೆಗಳ ಅಗಲೀಕರಣ ಅಭಿವೃದ್ಧಿ, ಕುಡಿಯುವ ನೀರು, ಕ್ರೀಡಾಂಗಣ ನಲ್ಲ ಚೆರುವು ಕೆರೆ ಅಭಿವೃದ್ಧಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಸರಮಾಲೆಯನ್ನೇ ಬಿಚ್ಚಿಟ್ಟರು.