ಬಳ್ಳಾರಿ ನಗರ ಜೆಡಿಎಸ್ ಅಭ್ಯರ್ಥಿಯಾಗಿ ಅನಿಲ್  ಲಾಡ್ ನಾಮಪತ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.20: ಬದಲಾದ ಸನ್ನಿವೇಶದಲ್ಲಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣ. ನಗರದ ಮಾಜಿ ಶಾಸಕ ಅನಿಲ್ ಹೆಚ್.ಲಾಡ್ ಇಂದು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ  ನೇರವಾಗಿ ಪಾಲಿಕೆ ಕಚೇರಿಗೆ  ಆಗಮಿಸಿ ಚುನಾವಣಾಧಿಕಾರಿ ಎಂ.ಎನ್.ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಲಾಡ್, ರೆಡ್ಡಿಗಳ ವಿರುದ್ದ ಸೆಡ್ಡು ಹೊಡೆದು ನಿಲ್ಲಲು ಯಾರು ಇಲ್ಲದಾಗ ಕಾಂಗ್ರೆಸ್ ನನ್ನನ್ನು ಅಪ್ಪಿಕೊಂಡಿತ್ತು. ಈಗ ದುಡ್ಡಿದ್ದವರು ಬಂದಿದ್ದರಿಂದ ಟಿಕೆಟ್ ತಪ್ಪಿಸಿದೆ.
ಆದರೆ ನಾನು ಕಳೆದ 15 ವರ್ಷದಲ್ಲಿ ಒಮ್ಮೆ ಶಾಸಕನಾಗಿ, ರಾಜ್ಯ ಸಭಾ ಸದಸ್ಯನಾಗಿ ಸಲ್ಲಿಸಿರುವೆ ಸೇವೆಯನ್ನು ಬಳ್ಳಾರಿ ನಗರದ ಜನತೆ ಮರೆತಿಲ್ಲ. ಕಳೆದ ಚುನಾವಣೆಯಲ್ಲಿ ಮಾಡಿದ ಕೆಲ ತಪ್ಪುಗಳಿಂದ ಗೆಲುವು ಕಾಣಲಿಲ್ಲ. ಈ ಬಾರಿ ಮನೆ ಮನೆಗೆ ತೆರಳಿ ಮತದಾರರಿಗೆ ಮನವಿ ಮಾಡಿ. ನಗರದಲ್ಲಿ  ನೀರು ಸಮಸ್ಯೆ ಇದ್ದ ಕಡೆ ಈ ಹಿಂದೆ ಪ್ರತಿ ವಾರ್ಡ್ನಲ್ಲಿ ಮಾಡಿದ ನೀರಿನ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆ ಸೇರಿದಂತೆ ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿ ಮತ ಪಡೆದು ಗೆಲುವು ಸಾಧಿಸುವೆ ಎಂದರು.
ನಾನು ಬಳ್ಳಾರಿ ಬಂದಾಗ ಜೆಡಿಎಸ್ ನಲ್ಲಿದ್ದವರು, ಈಗ ಕಾಂಗ್ರೆಸ್ ನಲ್ಲಿದ್ದಾರೆ. ಕಾಂಗ್ರೆಸ್ ನಲ್ಲಿದ್ದ ನಾನು ಜೆಡಿಎಸ್ ಗೆ ಬಂದಿರುವೆ. ಪಕ್ಷದ ಮುಖಂಡರೆಲ್ಲರ ಸಹಕಾರದಿಂದ ಪ್ರಚಾರ ಕಾರ್ಯವನ್ನು ನಾಳೆಯಿಂದಲೇ ಆರಂಭಿಸುವುದಾಗಿ ಹೇಳಿದರು.
ನಿಮ್ಮ ಗುರಿ ಕಾಂಗ್ರೆಸ್ ಸೋಲಿಸುವುದಾಗಿದೆಯಾ ಎಂಬ ಪ್ರಶ್ನೆಗೆ, ಫಲಿತಾಂಶವನ್ನು ಕಾದು ನೋಡಿ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಪಿ.ಎಸ್.ಸೋಮಲಿಂಗನಗೌಡ, ಮೀನಳ್ಳಿ ತಾಯಣ್ಣ, ಬ್ರೂಸ್ ಪೇಟೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹರ್ಷದ್ ಗನಿ ಮೊದಲಾದವರು ಇದ್ದರು.