ಬಳ್ಳಾರಿ ನಗರದಿಂದ ಜೆಡಿಎಸ್ ದೂರಾ..ದೂರಾ..ದೂರಾ…

 • ಪಾಲಿಕೆ ಚುನಾವಣೆಯಲ್ಲಿ ಶೂನ್ಯ ಸಂಪಾದನೆ
 • ಸ್ಪರ್ಧಿಸಿದ್ದ 5 ಕ್ಷೇತ್ರಗಳಲ್ಲಿ ಡೆಪಾಸಿಟ್ ಲಾಸ್
 • 100 ಮತಗಳನ್ನು ಪಡೆಯದ ಅಭ್ಯರ್ಥಿಗಳು
  ಎನ್.ವೀರಭದ್ರಗೌಡ

  ಬಳ್ಳಾರಿ:ಮೇ.4- ಈ ವರಗೆ ಜನತಾ ಪರಿವಾರದ ಸದಸ್ಯರಿಲ್ಲದೆ. ಇಲ್ಲಿನ ನಗರಸಭೆ, ನಗರಪಾಲಿಕೆ ಈವರೆಗೆ ಇರಲಿಲ್ಲ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸದಸ್ಯರಿಲ್ಲದೇ ಇದ್ದ ಸಂದರ್ಭದಲ್ಲೂ ಜನತಾ ಪರಿವಾರದ ಸದಸ್ಯರಿರುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಇಲ್ಲಿನ‌ ಪಾಲಿಕೆಯಲ್ಲಿ ಜನತಾ ಪರಿವಾರ(ಜೆಡಿಎಸ್) ಸದಸ್ಯರಿಲ್ಲದಂತಾಗಿದೆ.
  ನಗರಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ 2001 ರಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದೇ ಜನತಾದಳ. ಕಳೆದ 2007 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 35 ವಾರ್ಡುಗಳ ಪೈಕಿ ಒಬ್ಬೇ ಒಬ್ಬ ಸದಸ್ಯರನ್ನು ಗೆಲ್ಲಿಸಿಕೊಳ್ಳಲು ಆಗದಿದ್ದಾಗಲು ಮೂರು ಜನ‌ ಜೆಡಿಎಸ್ ಸದಸ್ಯರು ಆಯ್ಕೆಯಾಗಿದ್ದರು.
  ಇಂತಹ ಬಳ್ಳಾರಿ‌ ನಗರದಿಂದ ಎಲ್ಲಾ ವಾರ್ಡುಗಳಲ್ಲಿ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ಸಹ ದೊರೆತಿಲ್ಲ ಎಂದರೆ ಈ ಪಕ್ಷ ನಗರದಲ್ಲಿ ತನ್ನ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಲು ಸಾಧ್ಯ.
  ಇನ್ನು ಕಾಂಗ್ರೆಸ್ ಮತ್ತು‌ ಬಿಜೆಪಿ ದೊರೆಯದೇ ಇದ್ದು ಪಕ್ಷೇತರರಾಗಿ ಸ್ಪರ್ಧೆ ಮಾಡಲು ಮುಂದಾದವರನ್ನು‌ ಕರೆದು ಟಿಕೆಟ್ ಕೊಡುವುದಾಗಿ ಹೇಳಿದರೂ ಒಲ್ಲೆ ಎಂದು ಪಕ್ಷೇತರರಾಗಿ ಗೆದ್ದಿದ್ದಾರೆ. ಹೀಗಾದರೆ ಪಕ್ಷ ನಗರದಿಂದ ಸಂಪೂರ್ಣ ದೂರವಾದಂತೆ ಕಾಣುತ್ತಿದೆ.
  ಸಧ್ಯ ನಡೆದ ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಂದೆರಡು ಸ್ಥಾನಗಳಲ್ಲಾದರೂ ಜಯಗಳಿಸುತ್ತಿದೆಂಬ‌ ನಿರೀಕ್ಷೆ ಸುಳ್ಳಾಗಿದೆ.
  ಕನಿಷ್ಠ ಒಂದು ಸ್ಥಾನದಲ್ಲೂ ಗೆಲ್ಲದೇ, ಸ್ಪರ್ಧೇ ಮಾಡಿದ್ದ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ ನೂರು ಮತಗಳು ಸಹ ಲಭಿಸದೆ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
  ರಾಜ್ಯ ರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ, ರಾಜ್ಯದ ಪ್ರಾದೇಶಿಕ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೆಡಿಎಸ್ ಪಕ್ಷದ ಹೀನಾಯ ಸ್ಥಿತಿ ನೋಡಿ ಪಕ್ಷದ ಮುಖಂಡರು,ಕಾರ್ಯಕರ್ತರಲ್ಲಿ ಮುಜುಗರ ತಂದಿದೆ.
  ಡೆಪಾಸಿಟ್ ಇಲ್ಲ:
  ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆನಾಮಪತ್ರ ಸಲ್ಲಿಕೆಗೂ ಮುನ್ನ ಎಲ್ಲವಾರ್ಡ್‍ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, 10-12 ಸ್ಥಾನಗಳಲ್ಲಿ ಗೆಲ್ಲುವುದಾಗಿ ಪಕ್ಷದ ಮುಖಂಡರು ಹೇಳಿಕೆ ನೀಡಿದ್ದರು. ಆದರೆ,ಚುನಾವಣೆಯಲ್ಲಿ 5 ವಾರ್ಡ್‍ಗಳಲ್ಲಿ ಮಾತ್ರ ಅಭ್ಯರ್ಥಿಗಳು ಸ್ಪರ್ಧಿಸಿದರು. ಅವರು ಕನಿಷ್ಠ ನೂರು ಮತಗಳನ್ನು ಗಳಿಸುವಲ್ಲಿಯೂ ವಿಫಲರಾಗಿ ಡೆಪಾಸಿಟ್ ಪಡೆಯಲಾಗಿಲ್ಲ.
  10ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದಗೌಸಿಯಾ ಬೀ 77 ಮತಗಳು, 16ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ಕೃಷ್ಣವೇಣಿ 35, 18ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ವೈ.ಗೋಪಾಲ್ 30, 26ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ಜೆ.ಪುಷ್ಪಾ 55, 30ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ಬಿ.ಎಂ.ದೊಡ್ಡತಿಪ್ಪಯ್ಯ 61ಮತಗಳನ್ನು ಮಾತ್ರ ಗಳಿಸಿದ್ದಾರೆ. ಪಕ್ಷೇತರರಿಂತಲೂ ಕಡಿಮೆ ಮತ ಲಭಿಸಿರುವುದು ಪಕ್ಷದ ಕಾರ್ಯಕರ್ತರು ಮುಜುಗರಕ್ಕೀಡಾಗುವಂತೆ ಮಾಡಿದೆ.
  ನಾಯಕತ್ವದ ಕೊರತೆ:
  ಈ ಹಿಂದೆ ಎಂ.ಪಿ.ಪ್ರಕಾಶ್ ಅವರು ಈ‌ಪಕ್ಷದಲ್ಲಿ ಇರುವರೆಗೆ ಇದಕ್ಕೆ ತನ್ನದೇ ವರ್ಚಸ್ಸು ಜಿಲ್ಲೆಯಲ್ಲಿ‌ ಇತ್ತು. ಅವರು ಹೋದ ಮೇಲೆ ಇಲ್ಲದಾಯಿತು.
  ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಒಂದಿಷ್ಟು ಮತಬ್ಯಾಂಕ್ ಇದೆ. ಹಾಗಾಗಿ ಜಿಲ್ಲಾ ತಾಲೂಕು ಪಂಚಾಯ್ತಿಗಳಲ್ಲಿ ಒಂದಿಷ್ಟು ಸ್ಥಾನ‌ಸಿಗುತ್ತವೆ. ಆದರೆ ನಗರ ಪ್ರದೇಶದಿಂದ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

  ಮುಖ್ಯವಾಗಿ ರಾಜ್ಯ ನಾಯಕರಿಗೆ ಈ‌ ಜಿಲ್ಲೆ ಬಗ್ಗೆ ಆಸಕ್ತಿ‌ ಇಲ್ಲ. ಸಂಪನ್ಮೂಲದ ಕೊರತೆ. ಪ್ರಬಲ‌ ನಾಯಕತ್ವ ಇಲ್ಲದಿರುವುದು ಪಕ್ಷದ ಈ ಸ್ಥಿತಿಗೆ ಕಾರಣ
  ಮೀನಳ್ಳಿ ತಾಯಣ್ಣ
  ಪ್ರಧಾನ ಕಾರ್ಯದರ್ಶಿ
  ಬಳ್ಳಾರಿ‌ ಜಿಲ್ಲೆ ಜೆಡಿಎಸ್.