ಬಳ್ಳಾರಿ ನಗರಕ್ಕೆ ಎಸ್ ಯುಸಿಐ ಪಕ್ಷದಿಂದ ನಾಮಪತ್ರ ಸಲ್ಲಿಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.13: ಜಿಲ್ಲೆಯ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಎಸ್ ಯು ಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಇಂದು  ಆರ್.ಸೋಮಶೇಖರಗೌಡ  ನಾಮಪತ್ರ ಸಲ್ಲಿಸಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಆಯುಕ್ತ ಎಂ.ಎನ್.ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ಅವರು ವಡ್ಡರ ಬಂಡೆ ಯಲ್ಲಿರುವ ಪಕ್ಷದ ಜಿಲ್ಲಾ ಕಛೇರಿಯಿಂದ ಪಕ್ಷದ ಬೆಂಬಲಿಗರು, ಕಾರ್ಯಕರ್ತರು, ಮೆರವಣಿಗೆಯಲ್ಲಿ ಬಂದು ಮಹಾನಗರ ಪಾಲಿಕೆಯಲ್ಲಿ ಆರ್. ಸೋಮಶೇಖರ್ ಗೌಡ ಅವರು ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಅವರು ಮತ್ತು ಅವರ ಬೆಂಬಲಿಗರು ಪಕ್ಷದ ಕಛೇರಿಯ ಮುಂಭಗದಲ್ಲಿ,  ಜಲಿಯಾನ್ ವಾಲಾಬಾಗ್ ಹತ್ಯಾಕಾಂಡದ 104ನೇ ಸ್ಮರಣ ದಿನದ ಅಂಗವಾಗಿ, ಮಡಿದ ಹುತಾತ್ಮರಿಗೆ ಹೂ ಗುಚ್ಚ ಇರಿಸಿ ನಮನ ಸಲ್ಲಿಸಿದರು. 
ಪಕ್ಷದ ಜಿಲ್ಲಾ ಕಾರ್ಯದರ್ಶಿ  ಕೆ.ರಾಧಾಕೃಷ್ಣ ಉಪಾಧ್ಯರು ಈ ಸಂದರ್ಭದಲ್ಲಿ  ಮಾತನಾಡಿ “ಜಲಿಯಾನ್ ವಾಲಾಬಾಗ್ ಭಗತ್ ಸಿಂಗ್ ಅವರ ಹೋರಾಟಕ್ಕೆ ಗಾಡ ಪ್ರಭಾವ ಬೀರಿದ ಘಟನೆ.  ಭಗತ್ ಸಿಂಗ್, ನೇತಾಜಿರವರು ಮಾಡಿದ ಮಹಾನ್ ರಾಜಕೀಯ ಇಂದು  ನಾವು ಮಾಡಬೇಕಿದೆ. ದಮನಿತರ, ಶೋಷಿತರ, ಪರವಾಗಿ ಧ್ವನಿ ಎತ್ತುವ, ಜನಸಾಮಾನ್ಯರ ಬದುಕು  ಕಟ್ಟುವ, ಅನ್ಯಾಯ, ದಬ್ಬಾಳಿಕೆ, ಶೋಷಣೆಗಳನ್ನು ಕೊನೆ ಗಾಣಿಸುವಂತಹ ಕ್ರಾಂತಿಕಾರಿ ರಾಜಕೀಯ ಅಗತ್ಯವಿದೆ. 
ಸ್ವಾತಂತ್ರ್ಯ ಬಂದಾಗಿನಿಂದ ನಮ್ಮನ್ನಾಳಿದ ಎಲ್ಲಾ ಪಕ್ಷಗಳು ದೇಶವನ್ನು ಲೂಟಿ ಮಾಡುವ ನೀತಿಗಳನ್ನೇ ಜಾರಿಗೊಳಿಸುತ್ತಿದೆ. ಬಂಡವಾಳಗಾರರ ಹಿತಕಾಯಲು ಕಟಿಬದ್ದರಾಗಿ ನಾ ಮುಂದು ತಾ ಮುಂದು ಎಂದು ಪೈಪೋಟಿಗಿಳಿದಿವೆ.  ಜನ ಸಾಮಾನ್ಯರ ಅಗತ್ಯಗಳೇನು ಎಂಬುದು ಇವರಿಗೆ ಚುನಾವಣೆಯ ಮುಖ್ಯ ಅಂಶವೇ ಅಲ್ಲ. ಜಾತಿ ಧರ್ಮಗಳ ಹೆಸರಲ್ಲಿ ಜನರ ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಹಣ ಆಮಿಷಗಳನ್ನು ಒಡ್ಡಿ , ಹೇಗಾದರೂ ಮಾಡಿ ಅಧಿಕಾರ ಹಿಡಿದು ,ಲೂಟಿ ಹೊಡೆಯುವುದೇ ಇವರ ಚುನಾವಣೆಯ ಧ್ಯೇಯ ವಾಗಿದೆ.
 ಈ ಹಿನ್ನೆಲೆಯಲ್ಲಿ  ಹಣ ಅಂತಸ್ತುಗಿಂತ, ಜನತೆಯ ಹೋರಾಟಕ್ಕೆ ಇರುವ ಬದ್ದತೆಯಿಂದ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿ ಸೋಮಶೇಖರಗೌಡ. ಹಾಗಾಗಿ ಇವರಿಗೆ  ಸತ್ಯದ ಪರ, ನ್ಯಾಯದ ಪರ, ಹೋರಾಟದ ಪರ ಮತ ನೀಡಿ ಗೆಲ್ಲಿಸಬೇಕೆಂದು ಕೋರಿದರು.
ಈ ವೇಳೆ ಪಕ್ಷದ ಮುಖಂಡರುಗಳಾದ  ಎ.ದೇವದಾಸ್,  ಎಮ್.ಎನ್.ಮಂಜುಳ, ಡಾ.ಪ್ರಮೋದ್, ಡಿ.ನಾಗಲಕ್ಷ್ಮೀ, ಎ.ಶಾಂತ, ಗೋವಿಂದ್, ಹಾಗು ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಸಾರ್ವಜನಿಕರು ಇದ್ದರು.
ನಂತರ ಇಲ್ಲಿಂದ ಪಾಲಿಕೆ ಕಚೇರಿಗೆ  ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಸಾಗಿ ಬಂತು.