ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ  ಮೂಲಭೂತ ಸೌಲಭ್ಯಗಳಿಗಾಗಿ ಮನವಿ.


ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ,6-ಎಐಡಿಎಸ್‍ಓ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸವಂತೆ ಡಿಡಿಪಿಐ ಕಛೇರಿಯ  ಉಪನಿರ್ದೆಶಕರಿಗೆ ಮನವಿ ಸಲ್ಲಿಸಲಾಯಿತು.
ಎಐಡಿಎಸ್‍ಓ ಜಿಲ್ಲಾ ಅಧ್ಯಕ್ಷರು ರವಿಕಿರಣ್.ಜೆ.ಪಿ ಅವರು ಮಾತನಾಡಿ… ಬಳ್ಳಾರಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳು 2023-24 ಶೈಕ್ಷಣಿಕ ವರ್ಷಕ್ಕೆ ಪ್ರಾರಂಭವಾಗಿದ್ದು, ಹಲವು ಹಳ್ಳಿಗಳ ನೂರಾರು ಸರ್ಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಒಂದೆಡೆ ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯೇ ಇಲ್ಲವಾಗಿದೆ. ಮತ್ತೊಂದೆಡೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿಯಾಗದೆ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲವಾಗಿದೆ.
ಮಳೆ ಸುರಿದು ಶಾಲೆಗಳಲ್ಲಿ ನೀರು ಸೋರಿ, ನೀರು ತುಂಬಿಕೊಂಡ, ಕಟ್ಟಡ ಕುಸಿದ ದುರಂತಗಳ ಕಳದ ವರ್ಷವಷ್ಟೇ ನಡೆದಿದ್ದು ವಿದ್ಯಾರ್ಥಿಗಳು, ಪೋಷಕರ ಮನಸ್ಸುಗಳಿಂದ ಇನ್ನೂ ಮಾಸಿಲ್ಲ. ಕುರುಗೋಡು ತಾಲ್ಲೂಕಿನ ಚಿಟಿಗಿನಹಾಳು ಗ್ರಾಮದ ಸರ್ಕಾರಿ ಶಾಲೆಯೊಂದು ಬೀಳುವ ಹಂತದಲ್ಲಿದೆ. ಅಲ್ಲದೆ ಜಿಲ್ಲೆಯ ಹತ್ತಾರು ಶಾಲೆಗಳ ಪರಿಸ್ಥಿತಿಯು ಹೀಗೇ ಇದೆ. ಇದರಿಂದ ಎಚ್ಚೆತ್ತುಕೊಂಡು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಮತ್ತೆ ಈ ರೀತಿಯ ಘಟನೆಗಳು ಆಗದಂತೆ ತಡೆಯಬೇಕಾದ ಹೊಣೆ ಸಾರ್ವಜನಿಕ ಶಿಕ್ಷಣ ಇಲಾಖೆಯದ್ದಾಗಿದೆ.
ಜೊತೆಗೆ ಇತ್ತೀಚೆಗೆ ವಿವಿದ ಪತ್ರಿಕೆಯಲ್ಲಿ ವರದಿಯಾಗಿರುವಂತೆ ಸಂಡೂರು ತಾಲೂಕಿನಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ 33 ಶಾಲೆಗಳಲ್ಲಿ ಏಕೋಪಾಧ್ಯಾಯ ಶಿಕ್ಷಕರು ಇದ್ದಾರೆ. ತಾಲೂಕಿನ 8 ಶಾಲೆಗಳಲ್ಲಿ ಶಿಕ್ಷಕರೆ ಇಲ್ಲ.  ಸಂಡೂರು ತಾಲೂಕಿನಲ್ಲಿ ಶಾಲಾ ವಿಭಾಗಕ್ಕೆ 1004 ಶಿಕ್ಷಕರ ಹುದ್ದೆಗಳು ಮಂಜುರಾಗಿದ್ದರು, 539 ಜನ ಶಿಕ್ಷಕರು ಮಾತ್ರ ಕರ್ತವ್ಯದಲ್ಲಿದ್ದಾರೆ. ಇನ್ನು  ಉಳಿದ 465 ಹುದ್ದೆಗಳಲ್ಲಿ ಅತಿಥಿ ಶಿಕ್ಷಕರ ಆಧಾರದಲ್ಲಿ ಶಾಲೆಗಳನ್ನು ನಡೆಸಲಾಗುತ್ತಿದೆ. 23 ಸರ್ಕಾರಿ ಪ್ರೌಢಶಾಲೆಗಳಿಗೆ 227 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ, ಆದರೆ 136ಜನ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ 91 ಖಾಲಿ ಹುದ್ದೆಗಳು ಖಾಲಿ ಇವೆ. ಇದು ಸಂಡೂರು ತಾಲ್ಲೂಕಿನ ವಿವರವಾದರೆ ಇನ್ನುಳಿದ ಕುರುಗೋಡು, ಸಿರುಗುಪ್ಪ, ಕಂಪ್ಲಿ ತಾಲ್ಲೂಕುಗಳ ಪರೀಸ್ಥಿತಿಯೂ ಹೀಗೇ ಇದೆ. ಈ ಸಮಸ್ಯೆಯಿಂದ ಮಕ್ಕಳು ಅತಂತ್ರ ಸ್ಥಿತಿಯಲ್ಲಿದ್ದಾರೆ ಮತ್ತು ಪೆÇೀಷಕರು ಆತಂಕದಲ್ಲಿದ್ದಾರೆ. ಶಿಕ್ಷಕರಿಲ್ಲದೆ, ಕಟ್ಟಡ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದೆ ಮಕ್ಕಳ ಭವಿಷ್ಯ ಏನಾಗಬಹುದು ಎಂಬ ಪ್ರಶ್ನೆ ಏಳುತ್ತದೆ.
ಆದ್ದರಿಂದ ಈ ಕೂಡಲೇ ಬಳ್ಳಾರಿ ಜಿಲ್ಲೆಯ ಎಲ್ಲಾ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕ್ರಮವನ್ನು ಕೈಗೊಳ್ಳಬೇಕು. ಮತ್ತು ಮೂಲಭೂತ ಸೌಲಭ್ಯಗಳಾದ ಕಟ್ಟಡ, ಶುದ್ಧ ಕುಡಿಯುವ ನೀರು, ಶೌಚಾಲಯ ನಿರ್ಮಾಣ ಕಾಮಗಾರಿ ಕೂಡಲೇ ಆಗಬೇಕು ಎಂದು ಎಐಡಿಎಸ್‍ಓ ಮನವಿ ಮಾಡುತ್ತೆದೆ ಎಂದರು.
ಈ ಸಂದರ್ಭದಲ್ಲಿ ಎಐಡಿಎಸ್‍ಓ ಜಿಲ್ಲಾ ಉಪಾಧ್ಯಕ್ಷರಾದ ಕೆ.ಈರಣ್ಣ, ಜಿಲ್ಲಾ ಸೆಕ್ರಟರಿಯೇಟ್ ಸದಸ್ಯರಾದ ಉಮಾ, ಪ್ರಮೋದ್ ಮತ್ತಿತರರು ಭಾಗವಹಿಸಿದ್ದರು.