ಬಳ್ಳಾರಿ ಜಿಲ್ಲೆಯ ಪಾಳೆಗಾರರು ವಿಜಯನಗರ ಅರಸರಿಗೆ ನೀಡಿದ ಕೊಡುಗೆ ಅನನ್ಯ :.ಸೋಮಶೇಖರರೆಡ್ಡಿ

ಬಳ್ಳಾರಿ ಮಾ.29, ಜಿಲ್ಲೆಯಲ್ಲಿ ವಿಜಯನಗರ ಸಾಮ್ರಾಜ್ಯವು ಸ್ಥಾಪಿತವಾಗಿದ್ದು, ಈ ಸಾಮ್ರಾಜ್ಯ ಅನೇಕ ಸಣ್ಣಪುಟ್ಟ ರಾಜರು ಕಪ್ಪಕಾಣಿಕೆಗಳನ್ನು ನೀಡುವ ಮೂಲಕ ದೊಡ್ಡ ಸಾಮ್ರಾಜ್ಯದ ಹಿರಿಮೆಗೆ ಕಾರಣರಾಗಿದ್ದಾರೆ. ಅಂತಹ ಪಾಳೆಗಾರರ ಇತಿಹಾಸ ತಿಳಿಯುವುದು ಇಂದಿನ ದಿನಗಳಲ್ಲಿ ಅಗತ್ಯವಿದ್ದು, ಅವರು ನೀಡಿದೆ ಕೊಡುಗೆ ಅನನ್ಯವಾಗಿದೆ ಎಂದು ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಹೇಳಿದ್ದಾರೆ.
ಅವರು ಇಂದು ಇಲ್ಲಿನ ಸರಳಾದೇವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಇತಿಹಾಸ ವಿಭಾಗ, ಎನ್.ಎಸ್.ಎಸ್. (ಎ, ಬಿ, ಮತ್ತು ಸಿ) ಘಟಕಗಳ ಸಂಯುಕ್ರಾಶ್ರಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು,
ಬಳ್ಳಾರಿ ನಗರವು ಸಹ ಹಂಡೆ ಹನುಮಪ್ಪ ನಾಯಕ ಆಳ್ವಿಕೆ ಮಾಡಿದ ಸ್ಥಳವಾಗಿದ್ದು, ಅದರಂತೆಯೇ ಕುಡಿತಿನಿ, ಸಂಡೂರು, ಕೆಂಚನಗುಡ್ಡ, ಬಾಣರಾವಿ, ಗುಡೇಕೋಟೆ, ಹರಪನಹಳ್ಳಿ ಸೇರಿದಂತೆ ಅನೇಕ ಪಾಳೆಗಾರರು ಆಗಿ ಹೋಗಿದ್ದಾರೆ. ಅವರೆಲ್ಲರೂ ಜಿಲ್ಲೆಯ ಜನತೆಗಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೆರೆ, ಬಾವಿ, ಕೋಟೆ ಸೇರಿದಂತೆ ಅನೇಕ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಅವುಗಳನ್ನು ರಕ್ಷಿಸಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಸೌಲಭ್ಯವನ್ನು ಕಲ್ಪಿಸುವುದಾಗಿ ತಿಳಿಸಿದರು.
ಅನಂತಪುರಂನ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಮಲ್ಲಿಕಾರ್ಜುನರೆಡ್ಡಿ ಅವರು ಮಾತನಾಡಿ, ಬಳ್ಳಾರಿ, ಕಡಪ, ಕನೂಲು, ಅನಂಪುರ ಇವುಗಳು ದತ್ತಕಮಂಡಲ ಜಿಲ್ಲೆಗಳಾಗಿದ್ದವು, 1829ರ ನಂತರ ಈ ಜಿಲ್ಲೆಗಳನ್ನು ರಾಯಲಸೀಮಾ ಜಿಲ್ಲೆಗಳೆಂದು ಕರೆಯಲಾಯಿತು. ಥಾಮಸ್ ಮನ್ರೋ ಅವರು ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇಲ್ಲಿನ ಪಾಳೆಗಾರರು ಆಂಧ್ರದೊಂದಿಗೆ ಸಂಬಂಧವನ್ನು ಹೊಂದಿದ್ದರು ಎಂದು ಹೇಳಿದರು.
ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಕೊಟ್ರೇಶ್ ಅವರು ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿ ಅತ್ಯಂತ ಶಕ್ತಿಶಾಲಿ ಪಾಳೆಗಾರರೆಂದರೆ ಹರಪನಹಳ್ಳಿ ಪಾಳೆಗಾರರಾಗಿದ್ದರು. ಅವರು ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಕೊಡುಗೆಗಳನ್ನು ನೀಡಿದ್ದಾರೆಂದರು
ಪ್ರಾಂಶುಪಾಲ ಪ್ರೊ.ಎಹೇಮಣ್ಣ ಅವರು ಅಧ್ಯಕ್ಷತೆ ವಹಿಸಿ, ಬಳ್ಳಾರಿ ಜಿಲ್ಲೆಯ ಪಾಳೆಯಗಾರರ ಇತಿಹಾಸವು ಪ್ರತಿ ಹಳ್ಳಿಯಲ್ಲಿ ಇದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಲ್ಲಿನ ಇತಿಹಾಸವನ್ನು ತಿಳಿದುಕೊಳ್ಳಬೇಕು. ಅದರಿಂದ ಇತಿಹಾಸ ಬಗ್ಗೆ ಆಸಕ್ತಿ ಹೆಚ್ಚುತ್ತದೆ ಎಂದು ಹೇಳಿದರು.
ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ತಿಪ್ಪೇರುದ್ರ ಸಂಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕಲಾವತಿ ಬಿ.ಜಿ, ಅವರು ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥೆ ಆರ್.ಎಂ.ಶ್ರೀದೇವಿ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಶಶಿಕಾಂತ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಶೋಧಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಕೋಶಾಧ್ಯಕ್ಷ ವೀರಶೇಖರರೆಡ್ಡಿ, ಜಿ.ಆನಂದ್‍ಕುಮಾರ್, ಹಾಜರಿದ್ದರು.