
ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ 1945ರಲ್ಲಿ ಆರಂಭವಾಯಿತು. ಹಾಗಾದರೆ ಇಲ್ಲಿ ಪ್ರಶ್ನೆ ಏನೆಂದರೆ 1920ರಲ್ಲಿ, 1926ರಲ್ಲಿ, 1937ರಲ್ಲಿ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆದವು. ಆಗ ಯಾವ ಕನ್ನಡ ಸಂಘಗಳು ಇದ್ದಿಲ್ಲ. ಬ್ರಿಟೀಷರ ಆಡಳಿತ ಇದುದ್ದರಿಂದ ಯಾರು ಕನ್ನಡಕ್ಕಾಗಿ ಹೋರಾಡಿದರು ಎಂಬುವ ಪ್ರಶ್ನೆ ನನ್ನನ್ನು ಕಾಡುತಿತ್ತು. ಕರ್ನಾಟಕ ಏಕೀಕರಣ ಇತಿಹಾಸ ಡಾ.ಹೆಚ್.ಎಸ್.ಗೋಪಾಲರಾವ್ ಪುಸ್ತಕ, ಏಕೀಕರಣ ಇತಿಹಾಸ ಡಾ.ಸೂರ್ಯನಾಥ ಕಾಮತ್, ಏಕೀಕರಣ ಅಂದು ಇಂದು, ಡಾ.ಪಂಚಮುಖಿ ಏಕೀಕರಣದ ಬೆಳವಣಿಗೆ ನ್ಯಾಯಮೂರ್ತಿ ಕೋ ಚನ್ನಬಸಪ್ಪ ಮತ್ತು 1914ರಿಂದ ಇರುವ ಪತ್ರಿಕೆಗಳ ಆದಾರದ ಮೇಲೆ ಮತ್ತು ರಾಜ್ಯದಲ್ಲಿ ಮೊಟ್ಟಮೊದಲ ಕನ್ನಡ ವಾರಪತ್ರಿಕೆಯಾದ ನವಸಂದೇಶ ಇದು ವಿದ್ವಾನ್ ಟಿ.ಹೆಚ್.ಎಂ. ಹೊಳಿಬಸವಶಾಸ್ತ್ರಿಗಳ ಸಂಪಾದಕತ್ವದಲ್ಲಿ ಬಂದ ಪತ್ರಿಕೆ ತದ ನಂತರ ಟಿ.ಹೆಚ್.ಎಂ. ಚಂದ್ರಶೇಖರ್ ಶಾಸ್ತ್ರಿಗಳ ಸಂಪಾದಕ್ವತದಲ್ಲಿ ಬಂದ ಈ ಪತ್ರಿಕೆಯಲ್ಲಿ ಆಗಿನ ಕಾಲದ ಕನ್ನಡದ ಹೋರಾಟ ಏಕೀಕರಣ ಹೋರಾಟದ, ಆಮಂತ್ರಣ ಪತ್ರಿಕೆಗಳನ್ನು ನಾಡ ಹಬ್ಬದ ಆಚರಣೆಯನ್ನು ಪ್ರಕಟಿಸುತ್ತಿದ್ದರು. ಈ ಮೇಲಿನ ಆದಾರಗಳನ್ನು ಇಟ್ಟುಕೊಂಡು ಹುಡುಕುತ್ತಾ ಹೊರಟೆ, ಆಗ ನನಗೆ ಕನ್ನಡ ಸಾಹಿತ್ಯ ಪರಿಷತ್‍ನ ಹುಟ್ಟಿನ ಬಗ್ಗೆ ತಿಳಿಯಿತು.
1868ರಿಂದ 1928ರವರೆಗೆ ಕಡಪ ರಾಘವೇಂದ್ರ ರಾವ್ ಅವರು ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿರುವ ಏಕೀಕರಣ ಚಳುವಳಿಗೆ ನಾಂದಿ ಹಾಡಿದರು 1928ರಲ್ಲೆ ಕಡಪ ರಾಘವೇಂದ್ರ ರಾಯರು ತೀರಿ ಹೊದ ನಂತರ 1935ರವರೆಗೂ ಕನ್ನಡದ ಹೋರಾಟ ಕಡಿಮೆಯಾಯಿತು. ತದ ನಂತರ ಏಕೀಕರಣ ಹೋರಾಟದಲ್ಲಿ ಮೊದಲಿಗರಾಗಿದ್ದ ಸರ್ವದರ್ಶನ ತೀರ್ಥ ವೈ.ನಾಗೇಶ್‍ಶಾಸ್ತ್ರಿಯವರು ನ್ಯಾಯವಾದಿ ಟಿ.ಹೆಚ್.ಎಂ. ಸದಾಶಿವಯ್ಯನವರು, ಅಳವಂಡಿ ಶಿವಮೂರ್ತಿಸ್ವಾಮಿಗಳು, ವ್ಯಾಕರಣ ತೀರ್ಥ ಚಂದ್ರಶೇಖರ್‍ಶಾಸ್ತ್ರಿಗಳು, ಹರಗಿನಡೋಣಿ ದೊಡ್ಡನಗೌಡ್ರು, ಅಲ್ಲಂ ಸುಮಂಗಳಮ್ಮ ನವರು, ರೆವರೆಡ್ ಉತ್ತಂಗಿ ಚನ್ನಪ್ಪನವರು, ಉರವಕೊಂಡ ಜಗದ್ಗುರುಗಳು, ಜೋಳದರಾಶಿ ದೊಡ್ಡನಗೌಡ್ರು, ಕೋ. ಚನ್ನಬಸಪ್ಪನವರು, ಜಂತಕಲ್ ಗಾದಿಲಿಂಗಪ್ಪನವರು, ಡಾ.ಆರ್.ನಾಗನಗೌಡ್ರು, ಬೀಚಿಯವರು, ಎಂ. ಸತ್ಯವಂತರಾವ್, ಟೆಕೂರ್ ಸುಬ್ರಮಣ್ಯಂ, ರಂಜಾನ್ ಸಾಬ್ ಇವರೆಲ್ಲ ಕನ್ನಡಕ್ಕಾಗಿ ಹೋರಾಡಿದ ಮಹನೀಯರು. ದಿ:13.01.1935ರಲ್ಲಿ ವೈ.ನಾಗೇಶ್‍ಶಾಸ್ತ್ರಿಗಳ ಸಾರಥ್ಯದಲ್ಲಿ ಕರ್ನಾಟಕ ಸಂಘ ಸ್ಥಾಪನೆಯಾಯಿತು. ಆಗ ಈ ಸಂಘದ ಅಧ್ಯಕ್ಷರಾಗಿ ಕನ್ನಡಿಗ ವೈ.ಮಹಾಬಳೇಶಪ್ಪ ನವರನ್ನು ಆರಿಸಲಾಯಿತು. ಆಗ ಇವರು ವೀರಶೈವ ವಿದ್ಯಾವರ್ದಕ ಸಂಘದ ಅಧ್ಯಕ್ಷರು ವರ್ತಕರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಬೋರ್ಡ್ ಅಧ್ಯಕ್ಷರು ಆಗಿದ್ದರು. ವೀರಶೈವ ಶಾಲೆಯಲ್ಲಿ ಶಿಕ್ಷಕರಾಗಿದ್ದ ಟಿ.ಹೆಚ್.ಎಂ.ಶಿವಯ್ಯನವರು ಸಂಘದ ಕಾರ್ಯದರ್ಶಿಗಳಾದರು. ಎಸ್.ಆರ್.ವಟ್ಟಂ ಹಾಗೂ ಕೆ.ಗುರುರಾಜರಾವ್‍ರವರು ಉಪಾಧ್ಯಕ್ಷರಾಗಿ, ಎಸ್.ಗೋವಿಂದಚಾರ್ ಸಹ ಕಾರ್ಯದರ್ಶಿಯಾಗಿ ಆರಿಸಲಾಯಿತು. ಮುಂದೆ ಕರ್ನಾಟಕ ಸಂಘ ಕನ್ನಡದ ಕೆಲಸಗಳನ್ನು ಬ್ರಿಟೀಷರ ಭಯದಲ್ಲೇ ಮಾಡುತ್ತಾ ಬಂತು. 24.02.1935 ಭಾನುವಾರ ಸಂಜೆ 6.10ಗಂಟೆಗೆ ಇಲ್ಲಿಯ ವೀರಶೈವ ಶಾಲೆಯಲ್ಲಿ ಸಾರ್ವಜನಿಕ ಸಭೆ ಸೇರಿ ಬಳ್ಳಾರಿಯಲ್ಲಿ ಕರ್ನಾಟಕ ಸಮ್ಮೇಳನವನ್ನು ಜರುಗಿಸುವ ಬಗ್ಗೆ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್‍ನ ಬಂದ ಪತ್ರವನ್ನು ಚರ್ಚಿಸಿ ತೀರ್ಮಾನಿಸಲಾಯಿತು. ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ನವದೆಹಲಿಯಲ್ಲಿಯವರು ವೈಸರಾಯರ ಆಪ್ತ ಕಾರ್ಯದರ್ಶಿಗೆ ಪತ್ರಬರೆದು ಕರ್ನಾಟಕ ಪ್ರಾಂತ ರಚನೆಗೆ ಒಪ್ಪಿಗೆ ಕೊಡಬೇಕೆಂದು ಮನವಿ ಮಾಡಿದರು. ಬಳ್ಳಾರಿ ಜಿಲ್ಲಾ ಕರ್ನಾಟಕ ಸಂಘದವರು, ಕರ್ನಾಟಕ ಸಪ್ತಾಹದ ಸಾಹಿತೋತ್ಸವವನ್ನು ದಿ:22.06.1935ರಿಂದ 28.06.1935ರವರೆಗೆ ಪೂರ್ತಿಯಾಗಿ ಬಳ್ಳಾರಿ ಪುರ ಭವನದಲ್ಲಿ ಅತ್ಯಂತ ಉತ್ಸಾಹದಿಂದಲು ಅಭಿಮಾನದಿಂದಲು, ನಡೆಸಿದ್ದರು. ದಿನಾಂಕ:07.08.1935ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಂ.ವಿ.ಸೀತರಾಮಯ್ಯನವರು ಬಳ್ಳಾರಿಯ ಕರ್ನಾಟಕ ಸಂಘದ ಕಾರ್ಯದರ್ಶಿಗಳಿಗೆ ಪತ್ರ ಬರೆದು ತಾವು ಅಭಿಮಾನವಿಟ್ಟು ಕಳುಹಿಸಿಕೊಟ್ಟ ಸಂಘದ ಕರ್ನಾಟಕ ಸಪ್ತ್ತಾಹ ವರದಿ ತಲುಪಿದೆ. ಇದು ಅಖಿಲ ಕರ್ನಾಟಕಕ್ಕೆ ಸಂಬಂಧಿಸಿದ್ದರಿಂದ ಇದನ್ನು ಪರಿಷತ್‍ನ ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಕೇಳಿ ತರಿಸಿಕೊಂಡಿದ್ದೇವೆ. ಕಾರಣ ತಮ್ಮ ಸಂಘವನ್ನು ನಮ್ಮ ಕನ್ನಡ ಸಾಹಿತ್ಯ ಪರಿಷತ್ ಅಂಗ ಸಂಸ್ಥೆಯನ್ನಾಗಿ ಸೇರಿಸಿ ಎರಡು ಸಂಘಗಳು ಪರಸ್ಪರ ಕಲಿತು ಕನ್ನಡ ತಾಯಿಯ ಸೇವೆಯನ್ನು ಮಾಡಲೆಂದು ಆಶಿಸುತ್ತೇನೆ.
22.12.1937ರಂದು ಹೊಸಪೇಟೆಯಲ್ಲಿ ವೈ.ಮಹಾಬಲೇಶ್ವರಪ್ಪ ನವರ ಅಧ್ಯಕ್ಷತೆಯಲ್ಲಿ ಸಭೆ ಜಮಖಂಡಿಯ ಸಾಹಿತ್ಯ ಸಮ್ಮೇಳನಕ್ಕೆ ಮತ್ತು ಬರುವ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ಚರ್ಚಿಸಲಾಯಿತು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‍ಗೆ ಪ್ರತಿನಿಧಿಗಳನ್ನಾಗಿ ವೈ.ಮಹಬಲೇಶ್ವರಪ್ಪ ಬೆಲ್ಲದ ಚನ್ನಪ್ಪ, ಗುಗ್ಗರಿ ದೊಡ್ಡಪ್ಪ, ಇಜಾರಿ ಟಾಕಪ್ಪ, ಸುಬ್ರಮಣ್ಯ ಶಾಸ್ತ್ರಿ, ಹೆಚ್.ರಾಮರಾಯ, ವೈ.ತಿರುಮಲಚಾರ್ಯರನ್ನು ಪ್ರತಿನಿಧಿಗಳನ್ನಾಗಿ ಆಚರಿಸಲಾಯಿತು. ಕರ್ನಾಟಕ ಸಂಘದ ಪರಿಶ್ರಮದ ಫಲವಾಗಿ 07.05.1947ರಂದು ಹರಪನಹಳ್ಳಿನಲ್ಲಿ ಮೈಸೂರಿನ ರಾಜಸೇವಾಸಕ್ತ ಸಿ.ಕೆ.ವೆಂಕಟರಾಮಯ್ಯ ಇವರ ಅಧ್ಯಕ್ಷತೆಯಲ್ಲಿ ಜರುಗಿರುವುದು ಸಾಧನೆಯ ಪ್ರತೀಕವಾಗಿದೆ. ತದ ನಂತರ ಬಳ್ಳಾರಿ ಕರ್ನಾಟಕ ಸಂಘ 1946ರಲ್ಲಿ ಆದೋನಿಯಲ್ಲಿ ನಡೆದ ಬಳ್ಳಾರಿ ಜಿಲ್ಲೆಯ ದ್ವೀತಿಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹರಪ್ಪನಹಳ್ಳಿಯ ಖ್ಯಾತ ನ್ಯಾಯದೀಶರಾದ ಟಿ.ಹೆಚ್.ಎಂ. ಸದಾಶಿವಯ್ಯನವರು ಸರ್ವಧ್ಯಕ್ಷರಾಗಿದ್ದರು. ಹೊಸಪೇಟೆಯಲ್ಲಿಯ 1920ರಲ್ಲಿ 6ನೇ ಅಖಿಲ ಭಾರತ ಸಮ್ಮೇಳನ ಧಾರವಾಡದ ದಿವಾನ್ ಬಹದ್ದೂರು, ರೊದ್ದ ಶ್ರೀನಿವಾಸರಾವ್ ಇವರ ಅಧ್ಯಕ್ಷತೆಯಲ್ಲಿ ಜರುಗಿದೆ. ಬಳ್ಳಾರಿಯಲ್ಲಿ 1926ರಲ್ಲಿ 12ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು, ಅದರ ಅಧ್ಯಕ್ಷತೆಯನ್ನು ಧಾರವಾಡದ ವಚನ ಪಿತಮಹಾ ರಾಹಬದ್ದೂರು, ಫಗು ಅಳ್ಳುಕಟ್ಟಿಯವರು ವಹಿಸಿದ್ದರು. ಇದು ಸಾಹಿತ್ಯ ಕ್ಷೇತ್ರಕ್ಕೆ ಬಳ್ಳಾರಿ ಜಿಲ್ಲೆಯ ಮಾಡಿದ ಅಪಾರ ಕೊಡುಗೆ ಎಂದು ಹೇಳಿದರೆ ಅತಿಶೋದಯೊಕ್ತಿ ಆಗಲಾರದು.
ಬಳ್ಳಾರಿಯಲ್ಲಿ 1938ರಲ್ಲಿ 23ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಅದರ ಅಧ್ಯಕ್ಷತೆಯನ್ನು ಧಾರವಾಡದ ಹೆಸರಾಂತ ಸಾಹಿತಿಯು, ಕೇಂದ್ರ ಸಮಾಚಾರ ಇಲಾಖೆಯ ಸಚಿವರಾಗಿಯೂ, ಬಿಹಾರದ ಅಂದಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ, ರಂಗನಾಥ ಆರ್.ದಿವಾಕರ್ ರವರ ವಹಿಸಿದ್ದರು. ಇಷ್ಟೆ ಅಲ್ಲದೆ ಬಳ್ಳಾರಿ ಜಿಲ್ಲೆಯ ಏಳುಬೆಂಚಿ ಗ್ರಾಮದವರಾದ ಆಸ್ಥಾನ ವಿಧ್ವಾನ್ ಸರ್ವದರ್ಶನ ತೀರ್ಥ ಪಂಡಿತ್ ವೈ.ನಾಗೇಶ್ ಶಾಸ್ತ್ರಿಗಳು 1933ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ 19ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. 1940ರಲ್ಲಿ ಧಾರವಾಡದಲ್ಲಿ ನಡೆದ 25ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಮ್ಮ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಮಾಗಳ ಗ್ರಾಮದವರಾದ ವ್ಯಾಕರಣ ತೀರ್ಥ ವೈ.ಚಂದ್ರಶೇಖರ್ ಶಾಸ್ತ್ರಿಗಳು ವಹಿಸಿದ್ದರು. 1949ರಲ್ಲಿ ಕಲಬುರ್ಗಿಯಲ್ಲಿ ನಡೆದ 32ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಮ್ಮ ಜಿಲ್ಲೆಯ ಹಡಗಲಿ ತಾಲ್ಲೂಕಿನ ಉತ್ತಂಗಿ ಗ್ರಾಮದವರಾದ ರೆವರೆಂಡ್ ಉತ್ತಂಗಿ ಚನ್ನಪ್ಪರವರು ವಹಿಸಿದ್ದರು. 1958ರಲ್ಲಿ ಬಳ್ಳಾರಿಯಲ್ಲಿ ನಡೆದ 40ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆಯನ್ನು ಹಾವೇರಿ ಜಿಲ್ಲೆಯ ಸವಣೂರಿನವರಾದ ಪದ್ಮಶ್ರೀ ಡಾ.ವಿ.ಕೆ. ಗೋಕಾಕ್ ರವರು ವಹಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯದೇ ಇರುವುದು ವಿಷಾದನೀಯ.
ಕೊನೆಗೆ 1945ರವರೆಗೂ ಕರ್ನಾಟಕ ಸಂಘ ಮತ್ತು 1914ರಲ್ಲಿ ಸ್ಥಾಪಿತವಾದ ವೀರಶೈವ ವಿದ್ಯಾವರ್ಧಕ ಸಂಘ ಎರಡು ಸೇರಿ ಕನ್ನಡದ ಕೆಲಸವನ್ನು ಮಾಡಿರುವುದನ್ನು ನೋಡಿ 1914ರಲ್ಲೇ ಬೆಂಗಳೂರಿನಲ್ಲಿ ಸ್ಥಾಪಿತವಾದ ಕರ್ನಾಟಕ ಸಾಹಿತ್ಯ ಪರಿಷತ್ (ಈಗಿನ ಕನ್ನಡ ಸಾಹಿತ್ಯ ಪರಿಷತ್) 1945ರಲ್ಲಿ ಬಳ್ಳಾರಿ ಕರ್ನಾಟಕ ಸಂಘಕ್ಕೆ ವಿನೀತ ಭಾವದಿಂದ ಪತ್ರಬರೆದು ನಿಮ್ಮ ಸಂಘವನ್ನು ನಮ್ಮ ಸಾಹಿತ್ಯ ಪರಿಷತ್‍ನಲ್ಲಿ ವಿಲೀನಗೊಳಿಸಬೇಕೆಂದು ಅದಕ್ಕೆ ಸರ್ವಾನುಮತದಿಂದ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ತೀರ್ಮಾನ ಮಾಡಿ ಕರ್ನಾಟಕ ಸಂಘವನ್ನು ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ವಿಲೀನಗೊಳಿಸಿದರು. ಈ ರೀತಿಯಾಗಿ ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ 1945ರಿಂದ ತನ್ನ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತು.
ಬಳ್ಳಾರಿ ಜಿಲ್ಲಾ ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನ 1945ರಲ್ಲಿ ಬಳ್ಳಾರಿಯಲ್ಲಿ ಮೈದೂರು ತಿರುಮಲಚಾರ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳ್ಳಾರಿ ಜಿಲ್ಲಾ 2ನೇ ಕನ್ನಡ ಸಾಹಿತ್ಯ ಸಮ್ಮೇಳನ 1946ರಲ್ಲಿ ಆದೋನಿಯಲ್ಲಿ ಹರಪನಹಳ್ಳಿಯ ಹೆಸರಾಂತ ನ್ಯಾಯದೀಶರು, ಸಾಹಿತಿಗಳು ಆದ ಟಿ.ಹೆಚ್.ಎಂ. ಸದಾಶಿವಯ್ಯನವರ ಅಧ್ಯಕ್ಷತೆಯಲ್ಲಿ ಜರುಗಿತು. ಬಳ್ಳಾರಿ ಜಿಲ್ಲಾ 3ನೇ ಕನ್ನಡ ಸಾಹಿತ್ಯ ಸಮ್ಮೇಳನ 1969ರಲ್ಲಿ ಬಳ್ಳಾರಿಯಲ್ಲಿ ಸರ್ವದರ್ಶನ ತೀರ್ಥ ವೈ.ನಾಗೇಶ್‍ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿತು. ಬಳ್ಳಾರಿ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನ 1970ರಲ್ಲಿ ಸಿರಗುಪ್ಪ ಟಿ.ನಾರಾಯಣ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಬಳ್ಳಾರಿ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನ 1981ರಲ್ಲಿ ಬಳ್ಳಾರಿಯಲ್ಲಿ ಗಮಕ ಕಲಾನಿಧಿ, ಡಾ.ಜೋಳದರಾಶಿ ದೊಡ್ಡನಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಬಳ್ಳಾರಿ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ 1984ರಲ್ಲಿ ಹಡಗಲಿಯಲ್ಲಿ ಮುದೇನೂರು ಸಂಗಣ್ಣನವರ ಅಧ್ಯಕ್ಷತೆಯಲ್ಲಿ ಜರುಗಿತು.
ಬಳ್ಳಾರಿ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ 1991ರಲ್ಲಿ ಸಂಡೂರಿನಲ್ಲಿ ಹಿ.ಮ.ನಾಗಯ್ಯ ನವರ ಅಧ್ಯಕ್ಷತೆಯಲ್ಲಿ ಜರುಗಿತು, ಬಳ್ಳಾರಿ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ 1993ರಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ನ್ಯಾಯದೀಶರಾದ ಕೋ.ಚನ್ನಬಸಪ್ಪ ನವರ ಅಧ್ಯಕ್ಷತೆಯಲ್ಲಿ ಜರುಗಿತು. 9ನೇ ಕನ್ನಡ ಸಾಹಿತ್ಯ ಸಮ್ಮೇಳನ 1995ರಲ್ಲಿ ಡಾ.ಎಸ್.ಎಂ.ವೃಷಬೇಂದ್ರ ಸ್ವಾಮಿಯವರ ಅಧ್ಯಕ್ಷತೆಯಲ್ಲಿ ಕೂಡ್ಲಿಗಿ ತಾಲ್ಲೂಕು ಉಜ್ಜಯನಿಯಲ್ಲಿನ ಜರುಗಿತು. ಬಳ್ಳಾರಿ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ 1996ರಲ್ಲಿ ಸಾಹಿತಿ ಗುರುಮೂರ್ತಿಪೆಂಡಕೂರು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಬಳ್ಳಾರಿ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ 1999ರಲ್ಲಿ ಹಡಗಲಿಯಲ್ಲಿ ಕುಂ. ವೀರಭದ್ರಪ್ಪ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಮೇಲೆ ತಿಳಿಸಿದ ಪ್ರಾರ್ಥಸ್ಮರಣೀಯರು ಪ್ರಕಾಂಡ ಪಂಡಿತರು, ದಾರ್ಶನಿಕರು, ಕವಿಗಳೂ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು, ಕನ್ನಡದ ನೆಲದ ಪುಣ್ಯ ಈ ರೀತಿಯಾಗಿ 1945ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತನ್ನ ಕಾರ್ಯಚಟುವಟಿಕೆಯನ್ನು ಮುಂದುವರೆಸಿಕೊಂಡು ಬಂದಿದೆ.
ನಾಳೆಯಿಂದ ಬಳ್ಳಾರಿ ನಗರದಲ್ಲಿ 22 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.
ಟಿ.ಹೆಚ್.ಎಂ. ಬಸವರಾಜ
ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು. ಬಳ್ಳಾರಿ ಜಿಲ್ಲಾಧ್ಯಕ್ಷರು
ಕರ್ನಾಟಕ ಇತಿಹಾಸ ಅಕಾಡೆಮಿ