ಬಳ್ಳಾರಿ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ಭುವನೇಶ್ವರಿ -ಅಧ್ಯಕ್ಷರ  ಮೆರವಣಿಗೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,1- ನಗರದಲ್ಲಿ ಇಂದು ಮತ್ತು ನಾಳೆ ನಡೆಯುತ್ತಿರುವ  ಬಳ್ಳಾರಿ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ  ಕನ್ನಡ ನಾಡ ತಾಯಿ ಭುವನೇಶ್ವರಿಯ ಭಾವ ಚಿತ್ರ, ಸಮ್ಮೇಳನದ ಅಧ್ಯಕ್ಷ ಡಾ.ಅರವಿಂದ ಪಾಟೀಲ್ ಅವರ ಮೆರವಣಿಗೆ ನಗರದ ಪ್ರಮುಖ‌ ರಸ್ತೆಗಳಲ್ಲಿ ನಡೆಯಿತು.
ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿ, ಡೊಳ್ಳು ಬಾರಿಸುವ ಮೂಲಕ‌ ಮೆರವಣಿಗೆಯಲ್ಲಿ ಪಾಲ್ಗೊಂಡ ಕನ್ನಡಾಭಿಮಾನಿಗಳಿಗೆ ಉತ್ಸಾಹ ತುಂಬಿದರು.
ನಗರದ ಸತ್ಯನಾರಾಯಣ ಪೇಟೆಯ ವೆಂಕಟೇಶ್ವರ ದೇವಸ್ಥಾನದಿಂದ  ಆರಂಭಗೊಂಡ ಮೆರವಣಿಗೆಯಲ್ಲಿ ಸಾರೋಟ ಮಾದರಿಯ ಅಲಂಕೃತ ವಾಹನದಲ್ಲಿ ಸಮ್ಮೇಳನ ಅಧ್ಯಕ್ಷ ದಂಪತಿಗಳ ಮೆರವಣಿಗೆ   ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ, ಕಾಳಮ್ಮ ಸರ್ಕಲ್, ಗೋಲ್ಡ್ ಸ್ಮಿತ್ ರೋಡ್, ವಡ್ಡರ ಬಂಡೆ, ಬಾಲಾಜಿ ರಾವ್ ರಸ್ತೆ, ಕೆ.ಸಿ.ರಸ್ತೆ, ಮೂಲಕ ಮತ್ತೆ ರಾಘವ ಕಲಾ ಮಂದಿರಕ್ಕೆ ಬಂದು ತಲುಪಿತು.
ವೀರಗಾಸೆ, ಡೊಳ್ಳು, ಗೊಂಬೆ ಕುಣಿತ, ತಮಟೆವಾದನ,  ನಂದಿಕೋಲು ಮೊದಲಾದ ಜನಪದ ಕಲಾ ತಂಡಗಳ ಕಲಾ ಪ್ರದರ್ಶನ ಮೆರವಣಿಗೆಗೆ ಮೆರಗು ನೀಡಿತ್ತು. 
ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು  ಪರಿಷತ್ತಿನ ಮುಖಂಡರುಗಳಾದ ಡಾ.ಶಿವಲಿಂಗಪ್ಪ ಹಂದ್ಯಾಳ್, ಚೋರನೂರು ಕೊಟ್ರಪ್ಪ, ಸಿದ್ರಾಮೇಶ್ವರಗೌಡ, ಮೀನಳ್ಳಿ ಚಂದ್ರಶೇಖರ್,   ಎಸ್. ಪನ್ನರಾಜ್, ಡ.ಗದಗಿನ, ಬಸವರಾಜ್ ಬಿಸಿಲಹಳ್ಳಿ, ಎಸ್.ಮಲ್ಲನಗೌಡ, ಲಕ್ಷ್ಮೀ ಪವನ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು