ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ 2,36,277 ಮತದಾರರು, 234 ಮತಗಟ್ಟೆ ಚುನಾವಣೆ


ಬಳ್ಳಾರಿ, ಏ.01: ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಆಕ್ರಮಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು 6 ಕಡೆ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಹೇಮಂತ್‍ಕುಮಾರ್.ಎನ್ ಅವರು ಮಾಹಿತಿ ನೀಡಿದರು.
ಅವರು, ಶುಕ್ರವಾರ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಚುನಾವಣೆಯ ಮಾಹಿತಿ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,277 ಮತದಾರರು: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,277 ಮತದಾರರಿದ್ದಾರೆ. ಅದರಲ್ಲಿ 1,15,074 ಪುರುಷ ಮತದಾರರು ಹಾಗೂ 1,21,155 ಮಹಿಳಾ ಮತದಾರರು ಮತ್ತು ಇತರೆ 48 ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದ್ದಾರೆ. ಕ್ಷೇತ್ರದಲ್ಲಿ 234 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಆಕ್ರಮಕ್ಕೆ ಕಡಿವಾಣ ಹಾಕಲು ಚೆಕ್‍ಪೋಸ್ಟ್: ಚುನಾವಣೆ ಹಿನ್ನಲೆಯಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಆಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಲಕುಂದಿಕ್ರಾಸ್, ಎತ್ತಿನ ಬೂದಿಹಾಳ್ ಕ್ರಾಸ್, ರೂಪನಗುಡಿ ಕ್ರಾಸ್, ಜೋಳದರಾಶಿ ಗ್ರಾಮ, ಕಾರೇಕಲ್ಲು ಗ್ರಾಮ, ಸಿಂಧವಾಳ ಗ್ರಾಮ ಒಳಗೊಂಡಂತೆ 6 ಕಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಚೆಕ್‍ಪೋಸ್ಟ್‍ಗಳಲ್ಲಿ ಎಫ್‍ಎಸ್‍ಟಿ, ಎಸ್‍ಎಸ್‍ಟಿ ತಂಡ ಮತ್ತು ಫ್ಲೈಯಿಂಗ್ ಸ್ವಕ್ಯಡ್ ತಂಡಗಳನ್ನು ನಿಯೋಜಿಸಿ ಪರಿಶೀಲಿಸಲಾಗುತ್ತಿದೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.
ಮಾದರಿ ಮತಗಟ್ಟೆ ಕೇಂದ್ರ ಸ್ಥಾಪನೆ: ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ ಅತಿಹೆಚ್ಚು ಯುವ ಮತದಾರರನ್ನು ನೊಂದಾಯಿಸಿದ ಪ್ರಥಮ ಜಿಲ್ಲೆಯಾಗಿದೆ. ಏ.11 ರವರೆಗೆ ಮತದಾರರ ಪಟ್ಟಿಗೆ ನೊಂದಾಯಿಸಿಕೊಳ್ಳಲು ಅವಕಾಶವಿದೆ. ಹೊಸದಾಗಿ ನೊಂದಾಯಿಸಿಕೊಂಡವರು ಹೆಚ್ಚಾದಲ್ಲಿ ಮತ್ತು ಒಂದು ಮತಗಟ್ಟೆಗೆ 1,500 ಕ್ಕಿಂತ ಹೆಚ್ಚು ಮತದಾರರಾದಲ್ಲಿ ಮಾದರಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 10 ಮಾದರಿ ಮತಗಟ್ಟೆ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಸಹಾಯವಾಣಿ ಆರಂಭ: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ದೂರು ಇದ್ದಲ್ಲಿ ದೂ.08392-277800, ಮೊ.6362565615ಗೆ ಕರೆ ಮಾಡಬಹುದಾಗಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ರೀತಿಯ ದೂರುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1950 ಟೋಲ್ ಫ್ರೀ ಸಂಖ್ಯೆಯೊಂದಿಗೆ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಈಗಾಗಲೇ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಮೋಕಾ ಹತ್ತಿರ 18 ಲಕ್ಷ ಮತ್ತು ಎತ್ತಿನಬೂದಿಹಾಳ್ ಚೆಕ್‍ಪೋಸ್ಟ್ ಹತ್ತಿರ 12 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ. ಚುನಾವಣೆ ನಿಮಿತ್ತ ದಾಖಲೆ ಇಲ್ಲದ ಹಣ, ಮದ್ಯ, ಆಭರಣ, ಇತರೆ ಉಡುಗೊರೆಗಳನ್ನು ಸಾಗಿಸುವಂತಿಲ್ಲ ಮತ್ತು ಹಂಚುವಂತಿಲ್ಲ ಎಂದು ಹೇಳಿದರು.
ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ ಅಂತವರ ವಿರುದ್ಧ ಯಾವುದೇ ನಿರ್ದಾಕ್ಷ್ಯ ಇಲ್ಲದೇ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಆರ್‍ಒ ಬಲರಾಮ ಹಾಗೂ ಕಚೇರಿ ಸಿಬ್ಬಂದಿಗಳು ಇದ್ದರು.