
ಬಳ್ಳಾರಿ:ಮಾ.೧೫- ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಅಸ್ಸಾಂ ಸಿಎಂ ಡಾ. ಹಿಮಂತ ಬಿಸ್ವಾ ಶರ್ಮ ಸೂಚನೆ ನೀಡಿರುವ ಹಿನ್ನಲೆಯಲ್ಲಿ. ಅವರ ಸೂಚನೆಯಂತೆ ನನಗೆ ರಾಜಕೀಯ ಪುನರ್‌ಜನ್ಮ ನೀಡಿದ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಸಚಿವ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.
ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು ಈವರಗೆ ನಾನು ಪಕ್ಷದ ಹೈಕಮಾಂಡ್ ಹೇಳುವ ಕ್ಷೇತ್ರದಲ್ಲಿ ಸ್ಪರ್ಧಿಸುವೆ ಎಂದು ಹೇಳುತ್ತಿದ್ದೆ. ಬಳ್ಳಾರಿ ಜಿಲ್ಲೆಯ ಸಂಡೂರು ಇಲ್ಲ ಗ್ರಾಮೀಣ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವ ಬಯಕೆ ನನ್ನದಾಗಿತ್ತು.
ಆದರೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿರುವ ಆಸ್ಸಾಂ ರಾಜ್ಯದ ಮುಖ್ಯ ಮಂತ್ರಿಗಳು ಶ್ರೀರಾಮುಲು ಅವರೇ ನೀವು ಬಳ್ಳಾರಿ ಗ್ರಾಮಿಣ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಅದು ಎರ್ರಿತಾತನ ಸನ್ನಿಧಿಯಲ್ಲಿ ಹೇಳಿದ್ದಾರೆ. ಅವರ ಸೂಚನೆಯನ್ನು ಪಾಲಿಸುವೆ. ಇದಕ್ಕಾಗಿ ಅವರಿಗೆ ಅಭಿನಂಧನೆ ಸಲ್ಲಿಸುವೆ ಎಂದು ಪರೋಕ್ಷವಾಗಿ ಪಕ್ಷ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಶ್ರೀರಾಮುಲು ತಮ್ಮ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿಕೊಂಡಂತಾಗಿದೆ.
ಈ ಶ್ರೀರಾಮುಲು ರಾಜ್ಯ ಮಟ್ಟದಲ್ಲಿ ಬೆಳೆದಿದ್ದಾನೆ. ಇದಕ್ಕೆ ಕಾರಣ ನನಗೆ ರಾಜಕೀಯವಾಗಿ ಪುನರ್‌ಜನ್ಮ ನೀಡಿದ ಈ ಗ್ರಾಮೀಣ ಕ್ಷೇತ್ರದ ಜನತೆ ನೀವು ಎಂದರು.
ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಲ್ಯಾಣ ಕರ್ನಾಟಕದ ೪೦ ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಕೈಗೊಂಡು ೨೮ ಕ್ಷೇತ್ರಗಳಲ್ಲಿ ಮುಗಿದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಸ್ಸಾಂ ಸಿಎಂ ಡಾ.ಹಿಮಂತ್ ಬಿಸ್ವಾಸ್ ಶರ್ಮ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಗರಗೌಡ ಮೊದಲಾದವರು ಇದ್ದರು.