ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್‍ನ ವಾರ್ಷಿಕ ಸರ್ವ ಸದಸ್ಯರ ಸಭೆ

ಬಳ್ಳಾರಿ, ಡಿ.29: 2019-20ನೇ ಸಾಲಿನ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ನಗರದ ಬಿಪಿಎಸ್‍ಸಿ ಶಾಲಾ ಅವರಣದಲ್ಲಿರುವ “ಶರಣರ” ಸಭಾಂಗಣದಲ್ಲಿ ‌ಡಿ.27 ರಂದು ಆಯೋಜಿಸಲಾಗಿತ್ತು.
ಪ್ರಾರಂಭದಲ್ಲಿ ಶ್ರೀಮತಿ ಜಿ.ನಳಿನಿ ಪ್ರಾರ್ಥಿಸಿದರು. ನಂತರ ನಾಡಿನ ಸಾಂಸ್ಕೃತಿಕ ಹಾಗೂ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ನಮ್ಮನ್ನಗಲಿದ ಮಹನೀಯರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷರಾದ ಶೀಲಾ ಬ್ರಹ್ಮಯ್ಯನವರು ಸಭೆಗೆ ಸರ್ವರನ್ನು ಸ್ವಾಗತಿಸಿ ಸ್ವಾಗತಿಸಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. 2021-22ನೇ ಸಾಲಿನಿಂದ ಸಂಘದ ವತಿಯಿಂದ ಯುಗಾದಿ ಪುರಸ್ಕಾರಗಳು ಮತ್ತು ಬಳ್ಳಾರಿ ರಾಘವರ ಪುಣ್ಯಸ್ಮರಣೆ ಸಂದರ್ಭದಲ್ಲಿ ರಾಘವ ಸ್ಮಾರಕ ರಾಷ್ಟ್ರೀಯ ಮತ್ತು ಜಿಲ್ಲಾ ಮಟ್ಟದ ಪುರಸ್ಕಾರಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ರಂಗಭೂಮಿ ಮತ್ತು ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಹೆಸರಾಂತ ಗಣ್ಯರ ಹೆಸರಿನಲ್ಲೂ ಪುರಸ್ಕಾರ ನೀಡಲಾಗುತ್ತದೆ ಎಂದರು. ಶಿಕ್ಷಣ ರಂಗದಲ್ಲಿ ರಾಜ್ಯಮಟ್ಟದಲ್ಲಿ ಉಪಾಧ್ಯಾಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಬಳ್ಳಾರಿ ಜಿಲ್ಲಾ, ತಾಲ್ಲೂಕು, ನಗರ ಮಟ್ಟದಲ್ಲಿ 3 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಗ್ರಾಮೀಣ ಪ್ರದೇಶದಲ್ಲಿ ಮೂವರು ವಿದ್ಯಾರ್ಥಿ-ವಿದ್ಯಾಥಿನಿಯರನ್ನು ಆಯ್ಕೆ ಮಾಡಿ ಮುಂದಿನ ದಿನಗಳಲ್ಲಿ ಪುರಸ್ಕರಿಸಲಾಗುತ್ತದೆ. ಮತ್ತು ಬಳ್ಳಾರಿ ಜಿಲ್ಲಾ ಉತ್ತಮ ಉಪಾಧ್ಯಾಯರಿಗೆ ಪ್ರತಿಭಾ ಪುರಸ್ಕಾರವನ್ನೂ ಸಹ 4 ಜನರಿಗೆ ನೀಡಲು ಸಂಸ್ಥೆ ತೀರ್ಮಾನಿಸಲಾಗಿದೆ ಎಂದರು.
ಸಂಸ್ಥೆಯ ಖಜಾಂಚಿಗಳಾದ ಡಾ. ಯಶ್ವಂತ್ ಭೂಪಾಲ್ ಅವರು ಮಾತನಾಡುತ್ತಾ, ಸಂಸ್ಥೆಯು ನಿರಂತರವಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಉತ್ತಮ ಸಂಸ್ಥೆಯಾಗಿ ಹೆಸರು ಗಳಿಸಿದೆ ಎಂದು ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಾಜಿರಾವ್ ಅವರು 2019-20ನೇ ಸಾಲಿನ ವಾರ್ಷಿಕ ವರದಿಯನ್ನು ಸಮಗ್ರವಾಗಿ ಮಂಡಿಸಿದರು. ನಂತರ ಹಲವಾರು ಅಂಶಗಳ ಬಗ್ಗೆ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ಸದಸ್ಯರನ್ನು ಪರಿಚಯಿಸಿ ಸ್ವಾಗತ ಕೋರಲಾಯಿತು. ಜೊತೆಗೆ ಸಂಘಕ್ಕೆ ಪ್ರತ್ಯೇಕವಾದ ಸ್ವಂತ ಸ್ಥಳ ಅಥವಾ ನಿವೇಶನ ಹೊಂದಲು ಪ್ರಯತ್ನ ಪಡೆಯಲು ತೀರ್ಮಾನ ಮಾಡಲಾಯಿತು. ಸಲಹೆ ಸೂಚನೆಗಳನ್ನು ಪಡೆಯಲಾಯಿತು. 2020-21ನೇ ಸಾಲಿಗೆ ಪಿ.ಕೆ.ಬಸವರಾಜ್ ಅವರನ್ನು ಸಂಘದ ಲೆಕ್ಕಪತ್ರಗಳ ತಪಾಸಣೆ ಮಾಡಲು ಆಡಿಟರನ್ನಾಗಿ ಮುಂದುವರೆಸಲು ತೀರ್ಮಾನಿಸಲಾಯಿತು. ಶ್ರೀರಾಮ ಟ್ರಾನ್ಸ್‍ಪೋರ್ಟ್ ಪೈನಾನ್ಸ್ ಕಂಪನಿಯ ಅಧ್ಯಕ್ಷರಾದ ಶ್ರೀಧರ್ ಮಠಂ ಭಾಗವಹಿಸಿದ್ದರು. ಡಾ. ಯಶ್ವಂತ ಭೂಪಾಲ್ ವಂದನಾರ್ಪಣೆ ಸಲ್ಲಿಸಿದರು. ವೇದಿಕೆಯ ಮೇಲೆ ಅಧ್ಯಕ್ಷರಾದ ಶೀಲಾ ಬ್ರಹ್ಮಯ್ಯ, ಉಪಾಧ್ಯಕ್ಷರಾದ ಶ್ರೀ ವಿ.ರವಿಕುಮಾರ್, ಜಂಟಿ ಕಾರ್ಯದರ್ಶಿಗಳಾದ ಎನ್.ಪ್ರಕಾಶ್, ವಿ.ರಾಮಚಂದ್ರ ಮತ್ತು ಸಿಎ ಪಿ.ಕೆ.ಬಸವರಾಜ್ ರವರು ಹಾಗೂ ಸದಸ್ಯರು ಹಾಜರಿದ್ದರು.