ಬಳ್ಳಾರಿ ಉತ್ಸವದ ಅಂಗವಾಗಿ ಚಿತ್ರಕಲಾ ಶಿಬಿರ. ಚಿತ್ರಕಲೆ ವಿನ್ಯಾಸ ಮುಂದಿನ ಪೀಳಿಗೆಗೆ ಮಾದರಿಯಾಗಲಿ: ಸಹಾಯಕ ಆಯುಕ್ತ ಹೇಮಂತ್‍ಕುಮಾರ್


 
ಬಳ್ಳಾರಿ,ಜ.17- ಬಳ್ಳಾರಿ ಜಿಲ್ಲೆಯಲ್ಲಿ ಪ್ರಥಮವಾಗಿ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಅಂಗವಾಗಿ ಚಿತ್ರಕಲಾ ಶಿಬಿರವನ್ನು ಏರ್ಪಡಿಲಾಗಿದ್ದು, ಚಿತ್ರ ಕಲಾವಿದರು ರಚಿಸುವ ಕಲಾಕೃತಿಗಳು ಬಳ್ಳಾರಿ ಐತಿಹಾಸಿಕ ಹಿನ್ನಲೆ ಮತ್ತು ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು ಎಂದು ಸಹಾಯಕ ಆಯುಕ್ತರಾದ ಹೇಮಂತ್‍ಕುಮಾರ್ ಅವರು ಹೇಳಿದರು.
ಬಳ್ಳಾರಿ ಉತ್ಸವದ ಅಂಗವಾಗಿ ಡಾ.ರಾಜ್‍ಕುಮಾರ್ ರಸ್ತೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಚಿತ್ರಕಲಾ ಶಿಬಿರದಲ್ಲಿ ಬಳ್ಳಾರಿ ಐತಿಹಾಸಿಕತೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸ್ಥಳಗಳಾದ ಬಳ್ಳಾರಿ ದುರ್ಗಮ್ಮ ದೇವಸ್ಥಾನ, ಐತಿಹಾಸಿಕ ಏಕಶಿಲಾ ಬೆಟ್ಟ, ಸಂಗನಕಲ್ಲು ಗುಡ್ಡ, ಸಂಡೂರಿನ ಪ್ರಸಿದ್ಧ ಕುಮಾರಸ್ವಾಮಿ ದೇವಸ್ಥಾನ, ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನ, ಮಿಂಚೇರಿಯ ಐತಿಹಾಸಿಕ ಬಂಗಲೆ, ನೂತನ ಜಿಲ್ಲಾಡಳಿತ ಭವನ ಸೇರಿದಂತೆ ನಮ್ಮ ಜಿಲ್ಲೆಯ ಸ್ಥಳಗಳನ್ನು ಚಿತ್ರಣ ಒಳಗೊಂಡಿರಬೇಕು ಎಂದರು.
ಶಿಬಿರಾರ್ಥಿಗಳು ಜಿಲ್ಲೆಯ ಯಾವುದಾದರೂ ಐತಿಹಾಸಿಕ ಸ್ಥಳ ಆಯ್ಕೆ ಮಾಡಿಕೊಂಡು ಚಿತ್ರ ರಚಿಸಬಹುದು. ಶಿಬಿರದಲ್ಲಿ ಆಯ್ಕೆಯಾದ ಕಲಾಕೃತಿಗಳನ್ನು ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಣೆ ಮಾಡುವಂತೆ ಮತ್ತು ಸಾರ್ವಜನಿಕರ ವೀಕ್ಷಣೆಗೆ ವಿವಿಧ ಇಲಾಖೆಗಳಲ್ಲಿ ಆಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಾರುತಿ ಪ್ರಸಾದ್ ಅವರು ಹಲಗೆಯ ಮೇಲೆ ಚಿತ್ರ ಬಿಡಿಸುವುದರ ಮೂಲಕ ಶಿಬಿರಾರ್ಥಿಗಳಿಗೆ ಶುಭಾಷಯ ತಿಳಿಸಿದರು.
ಐದು ದಿನಗಳ ಕಾಲ ಚಿತ್ರಕಲಾ ಶಿಬಿರ ನಡೆಯಲಿದ್ದು ಭಾಗವಹಿಸಿದ ಎಲ್ಲಾ ಚಿತ್ರ ಕಲಾವಿದರಿದರಿಗೆ ಬಳ್ಳಾರಿ ಉತ್ಸವದಲ್ಲಿ ಗೌರವಧನ ರೂ.15ಸಾವಿರ ಮತ್ತು ನೆನಪಿನ ಕಾಣಿಕೆಗಳನ್ನು ಹಾಗೂ  ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ. ಶಿಬಿರಾರ್ಥಿಗಳಿಗೆ 3*3 ಅಳತೆಯ ಕ್ಯಾನ್ವಸ್ ಬೋರ್ಡ್, ಬ್ರಶ್ ಸೇರಿದಂತೆ ಬಣ್ಣದ ಸಾಮಾಗ್ರಿಗಳನ್ನು ವಿತರಿಸಲಾಯಿತು.
ರಾಜ್ಯದ ವಿವಿಧೆಡೆಯಿಂದ ಸುಮಾರು 20 ಚಿತ್ರಕಲಾವಿದರು ಶಿಬಿರದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ ವಿಶ್ವನಾಥ, ಹವ್ಯಾಸಿ ಚಿತ್ರಕಲಾವಿದರಾದ ಎಂ.ಮೊಹಮ್ಮದ್ ರಫಿ ಅವರು ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.