ಬಳ್ಳಾರಿ ಉತ್ಸವಕ್ಕೆ ಸಾಂಸ್ಕೃತಿಕ ಸಮುಚ್ಛಯದಲ್ಲಿ
 ಕಲಾವಿದರ ಕುಂಚದ ನರ್ತನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.17: ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಳ್ಳಾರಿ ಉತ್ಸವದ ಅಂಗವಾಗಿ ನಗರದ ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿ ಹಮ್ಮಿಕೊಂಡಿರುವ ಚಿತ್ರಕಲಾ ಶಿಬಿರದಲ್ಲಿ ಕಲಾವಿದರ ಕುಂಚಗಳ ನರ್ತನ ನಡೆದಿವೆ.
ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಂದಿರುವ ಕಲಾವಿದರಾದ ಬಳ್ಳಾರಿ ಜಿಲ್ಲೆಯ ನರಸಿಂಹ ಮೂರ್ತಿ, ನಾಗೇಶ್ವರ ರಾವ್, ಮಲ್ಲಿಕಾರ್ಜುನ ಅಪ್ಪುಗುಂಡಿ, ಹುಲುಗಪ್ಪ, ಮಲ್ಲಿಕಾರ್ಜುನ, ಐಶ್ವರ್ಯ, ಮಲ್ಲು, ಸುದರ್ಶನ, ಶಮೀನಾ ಬೇಗಂ, ಕುಸುಮ ಕುಮಾರಿ, ಮಲ್ಲನಗೌಡ ಕಿತ್ತೂರ, ಗೋವಿಂದಪ್ಪ, ರಾಜಶೇಖರ, ಉಮಾದೇವಿ ಕಂಪ್ಲಿ, ಕೊಪ್ಪಳದ ವಿರುಪಾಕ್ಷಿ ಹೆಚ್., ಸಿರುಪುರದ ಜಯರಾಮ್, ಹಗರಿಬೊಮ್ಮನಹಳ್ಳಿಯ ಕೊಟ್ರೇಶ್ ತಳವಾರ್, ವಿಜಾಪುರದ ರಮೇಶ್, ಸಾಸನೂರು, ಸಿಂಧನೂರಿನ ಉಸ್ಮಾನ್ ಅಲಿ, ಹಂಪಿಯ ರಂಜು ಪಾಲ್ಗೊಂಡಿದ್ದಾರೆ.
ಇವರೆಲ್ಲ ಸಾಂಸ್ಕೃತಿಕ ಸಮುಚ್ಛಯದ ಆವರಣದ ಗಿಡದ ಕೆಳಗೆ, ಹೊಂಗಿರಣ ಸಭಾಂಗಣದಲ್ಲಿ ಕ್ಯಾನ್ ವಾಸ್ ಮೇಲೆ ಬಳ್ಳಾರಿ ಜಿಲ್ಲೆಯ ಪ್ರಕೃತಿ, ಇತಿಹಾಸ, ಸಾಂಸ್ಕೃತಿಕ ವಿಷಯವನ್ನು ಪ್ರತಿ ಬಿಂಬಿಸುವ ಚಿತ್ರಗಳ ರಚನೆಯಲ್ಲಿ ನಿನ್ನೆಯಿಂದ ತೊಡಗಿದ್ದಾರೆ. ವಿವಿಧ ವರ್ಣಗಳಿಂದ ಬಳ್ಳಾರಿ ಕೋಟೆ, ನಾರಿಹಳ್ಳ, ಸಂಡೂರಿನ ಬೆಟ್ಟ ಪ್ರದೇಶ, ಮಲ್ಲೇಶ್ವರ, ದುರ್ಗಮ್ಮ ದೇವಸ್ಥಾನ, ಉಬ್ಬಳಗಂಡಿಯ ಏಕಶಿಲಾ ಶಿಖರಗಳು, ಲಂಬಾಣಿ ಕಲೆ, ಮೊದಲಾದ ಕಲಾಕೃತಿಗಳು ರಚನೆಯಾಗುತ್ತಿವೆ.
ತದೇಕ ಚಿತ್ತದಿಂದ ಕಲಾವಿದರು ತಮ್ಮ ಕಲ್ಪನೆಯ ಮೂಲಕ ಚಿತ್ರಗಳ ರಚನೆಗೆ ಕುಂಚದ ನರ್ತನೆಯಲ್ಲಿ ತೊಡಗಿದ್ದಾರೆ.
ನಗರದ ಕಲಾವಿದ ರಫಿ ಅವರು ಶಿಬಿರದ ಸಂಚಾಲಕರಾಗಿದ್ದಾರೆ. ಅವರು ಸಂಜೆವಾಣಿಯೊಂದಿಗೆ ಮಾತನಾಡಿ, 5 ದಿನಗಳಲ್ಲಿ ಪ್ರತಿಯೊಬ್ಬ ಕಲಾವಿದರು 3 ಚಿತ್ರಕಲೆಗಳನ್ನು ರಚಿಸಿ ಜಿಲ್ಲಾಡಳಿತಕ್ಕೆ ನೀಡಲಿದ್ದಾರೆಂದು ತಿಳಿಸಿದರು.
ಈ ರೀತಿ ಉತ್ಸವಗಳ ಮೂಲಕ ಚಿತ್ರಕಲಾ ಶಿಬಿರದಿಂದ ಕಲಾವಿದರ ಬದುಕಿಗೆ ಸಹಕಾರಿಯಾಗಲಿದೆಂದು ಕಲಾವಿದರು ಹೇಳಿದರು.
ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆವರೆಗೆ ಚಿತ್ರಕಲಾವಿದರಿಂದ ರಚನೆಯಾಗುವ ಚಿತ್ರಗಳನ್ನು ಮಕ್ಕಳು ದೊಡ್ಡವರು ಬಂದು ವೀಕ್ಷಿಸಬಹುದಾಗಿದೆ. ರಚನೆಯಾದ ಚಿತ್ರಗಳ ಪ್ರದರ್ಶನ ಉತ್ಸವದ ವೇಳೆ ನಡೆಸಲಿದ್ದು ನಂತರ ಇವುಗಳನ್ನು ಸರ್ಕಾರದ ವಿವಿಧ ಕಛೇರಿಗಳಲ್ಲಿ ಅಳವಡಿಸಲಿದೆ.