ಬಳ್ಳಾರಿ ಉತ್ಸವಕ್ಕೆ ಕರೆ


ಬಳ್ಳಾರಿ,ಜ.12: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜನವರಿ 21 ಮತ್ತು 22 ರಂದು ಬಳ್ಳಾರಿ ಉತ್ಸವವನ್ನು ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನ ಮತ್ತು ನಗರದ ಕೋಟೆ ಮಲ್ಲೇಶ್ವರ ದೇವಸ್ಥಾನದ ಎರಡು ವೇದಿಕೆಗಳಲ್ಲಿ ನಡೆಯುತ್ತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಉತ್ಸವದಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ಕರೆ ನೀಡಿದರು.
ಉತ್ಸವಕ್ಕೆ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಆಟೋಗಳಿಗೆ ಪೋಸ್ಟರ್ ಅಂಟಿಸುವ ಮೂಲಕ ಬಳ್ಳಾರಿ ಉತ್ಸವಕ್ಕೆ ಕರೆ ನೀಡಿದರು.
ಜಿಲ್ಲೆಯ ಪ್ರಥಮ ಉತ್ಸವ ಇದಾಗಿರಲಿದ್ದು, ಬಳ್ಳಾರಿಯ ಇತಿಹಾಸ, ಸಾಂಸ್ಕೃತಿಕ ಗತವೈಭವ ಮತ್ತು ಕ್ರೀಡೆಗಳು, ಗ್ರಾಮೀಣ ಸೊಗಡು ಬಿಂಬಿಸುವ ಉತ್ಸವ ನೋಡಲು  ನೀವು ಬನ್ನಿ ಜೊತೆಗೆ ನಿಮ್ಮವರನ್ನೂ ಕರೆ ತರುವುದರ ಮೂಲಕ ಉತ್ಸಾಹದಿಂದ ಭಾಗವಹಿಸಿ ಚೊಚ್ಚಲ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ  ಸಹಾಯಕ ನಿರ್ದೇಶಕರಾದ ಬಿ.ಧನಂಜಯ ಅವರು ಸೇರಿದಂತೆ ಆಟೋ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.