ಬಳ್ಳಾರಿ ಅಖಂಡ ಜಿಲ್ಲೆಯಲ್ಲಿ ಹತ್ತು ಸ್ಥಾನ ಗೆಲುವು;ಶಾಸಕ ಸೋಮಶೇಖರ್ ರೆಡ್ಡಿ 

ದಾವಣಗೆರೆ. ಮಾ.೧೬: ಬಳ್ಳಾರಿ ಅಖಂಡ ಜಿಲ್ಲೆಯಲ್ಲಿ ಬಿಜೆಪಿ ಹತ್ತಕ್ಕೆ ಹತ್ತು ಸ್ಥಾನ ಗೆಲುವು ನಮ್ಮದೇ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಎನ್.ಸೋಮಶೇಖರ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದು, ಆ ಕ್ಷೇತ್ರಗಳ ಮತದಾರರು, ಅಭಿಮಾನಿಗಳು ನಮ್ಮೊಂದಿಗೆ ಇದ್ದಾರೆ.ಈ ಬಾರಿಯೂ ಉತ್ತಮ ವಾತಾವಣವಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ತಿಳಿಸಿದರು.ಸಹೋದರ ಜನಾರ್ದನ್ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ, ಸಹೋದರ ಸ್ಥಾಪಿಸಿರುವ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷಕ್ಕೂ, ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಬಳ್ಳಾರಿ ನಗರ ಕ್ಷೇತ್ರದಲ್ಲಿ ತಮ್ಮನ ಪತ್ನಿ ಸ್ಪರ್ಧಿಸುವುದರಿಂದ ನನಗೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸಾರಿಗೆ ಸಚಿವ ಶ್ರೀ ರಾಮುಲು ಸ್ಪರ್ಧೆ ಮಾಡುವುದಾಗಿ ಹೇಳಿರುವುದರಿಂದ ನನಗೆ ಇನ್ನಷ್ಟು ಆನೆ ಬಲ ಬಂದಿದೆ. ಮಾತ್ರವಲ್ಲ, ಸ್ವಾತಂತ್ರ್ಯ ಬಂದ ಬಳಿಕ ಪ್ರಥಮ ಬಾರಿಗೆ  14 ರಿಂದ 16 ಸಾವಿರ ಪಟ್ಟಾಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿರುವುದರಿಂದ ನನ್ನ ಗೆಲುವಿಗೆ ಯಾವುದೇ ಅಡ್ಡಿಯಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕ ಭಾಗದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂಬ ಭಯದಿಂದ ಜನಾರ್ದನ್ ರೆಡ್ಡಿ ವಿರುದ್ಧ ಇಡಿ ದಾಳಿ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ, ಅದೊಂದು ಸ್ವತಂತ್ರ ಸಂಸ್ಥೆ. ಇಡಿ ದಾಳಿಗೂ, ಬಿಜೆಪಿ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ವಾತಾವರಣವಿದ್ದು, ಈ ಭಾಗದ ಅಭ್ಯಥಿಗಳ ಗೆಲುವಿಗೆ ಯಾವ ಅಡ್ಡಿಯೂ ಇಲ್ಲ ಎಂದು ಉತ್ತರಿಸಿದರು.