ಬಳ್ಳಾರಿಯ  ಅಭಿವೃದ್ಧಿಗಾಗಿ ನನಗೆ ಅವಕಾಶ ಕೊಡಿ:ಭರತ್ ರೆಡ್ಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.20: ಮೊದಲ ಬಾರಿಗೆ  ವಿಧಾನಸಭಾ ಚುನಾವಣೆಗೆ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವೆ. ಬಳ್ಳಾರಿ ಅಭಿವೃದ್ಧಿಗೆ ಸಂಬಂಧಿಸಿ ನನಗೆ ನೂರಾರು ಕನಸುಗಳಿವೆ. ಮತ ನೀಡಿ ನನಗೊಂದು  ಅವಕಾಶ ಕೊಡಿ ಎಂದು  ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ತಂದೆ ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಅವರ ಜೊತೆ ವಕೀಲರಲ್ಲಿ ಮನವಿ ಮಾಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘಕ್ಕೆ ಇಂದು ಭೇಟಿ ನೀಡಿ ಮತಯಾಚನೆ ಮಾಡಿದರು.
ನಾನು ನಿಮ್ಮೆಲ್ಲರ ಮುಂದೆ ಬೆಳೆದ ಹುಡುಗ, ನಿಮ್ಮ ಆಶೀರ್ವಾದ ಬಯಸಿ ಸ್ಪರ್ಧೆ ಮಾಡಿರುವೆ.  ವಯಸ್ಸಿನಲ್ಲಿ ಚಿಕ್ಕವನಾದರೂ ನಗರವನ್ನು ಗ್ರೀನ್ ಅಂಡ್ ಕ್ಲಿನ್ ಸಿಟಿ ಮಾಡುವಂತಹ ಯೋಜನೆಗಳನ್ನು  ಹೊಂದಿರುವೆ. ಬಳ್ಳಾರಿ ಈ ಹಿಂದೆ ಹೇಗಿತ್ತೋ ಈಗಲೂ ಹಾಗೇ ಇದೆ ಎನ್ನುತ್ತಾರೆ ಹೊರಗಿನಿಂದ ಬಂದ ಜನ. ನಗರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗದಿರುವ ಬಗ್ಗೆ ಖೇದವೆನಿಸುತ್ತದೆ.
2023 ಆದರೂ ಕೂಡ ಇನ್ನೂ ನಾವು ಚರಂಡಿ, ರಸ್ತೆ ಬಗ್ಗೆಯೇ ಮಾತಾಡುವಂತ ಸ್ಥಿತಿ ನಗರದಲ್ಲಿದೆ.  ನನಗೆ ಅವಕಾಶ ಕೊಡಿ ಅಂತಹ ಮಾತುಗಳಿಗೆ ಅವಕಾಶ ಇಲ್ಲದಂತೆ ನಗರವನ್ನು ಅಭಿವೃದ್ದಿ ಪಡಿಸುವೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಯರೇಗೌಡ, ಹಿರಿಯ ವಕೀಲರಾದ  ಪಟೇಲ್ ಸಿದ್ಧಾರೆಡ್ಡಿ, ಉಡೇದ ಬಸವರಾಜ, ಜನಾರ್ಧನ, ಕೊಟ್ರೇಶ್, ಮಿಂಚೇರಿ ನರೇಂದ್ರಬಾಬು, ಬಂಡ್ರಾಳ ಮೃತ್ಯುಂಜಯ ಸ್ವಾಮಿ, ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಇನ್ನಿತರೇ ವಕೀಲರು, ಬೆಂಬಲಿಗರಾದ ಚಾನಾಳ್ ಶೇಖರ್, ಅಭಿ ಮೊದಲಾದವರು  ಇದ್ದರು.