ಬಳ್ಳಾರಿಯಲ್ಲಿ ಸಂಭ್ರಮದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತ್ಯೋತ್ಸವ


ಬಳ್ಳಾರಿ,ಜು.04 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಸೋಮವಾರ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಪುಟ್‍ಬಾಲ್ ಮೈದಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.
ಶರಣ ಸಾಹಿತ್ಯ ಪರಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಕೆ.ಬಿ.ಸಿದ್ದಲಿಂಗಪ್ಪ ಅವರು ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಕುರಿತು ವಿಶೇಷ ಉಪನ್ಯಾಸ ನೀಡಿ, ಹನ್ನೆರಡನೇ ಶತಮಾನದ ಅಸಮ ಸಮಾಜದ ಶೋಷಣೆಯನ್ನು ವಿರೋಧಿಸಿ ಹೊಸ ಸಮಾಜದ ಸ್ಥಾಪನೆಗೆ ಹೋರಾಡಿದ ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾಚಿದೇವ ಮುಂತಾದ ಶರಣರಂತೆಯೇ ಅಪ್ಪಣ್ಣನವರೂ ಪೂಜ್ಯನೀಯರಾಗಿದ್ದರು ಎಂದು ಹೇಳಿದರು.
 ಅಪ್ಪಣ್ಣನವರು 1134 ರಲ್ಲಿ ಜನಿಸಿದವರು. ಅವರ ಜನ್ಮಸ್ಥಳ ಬಸವನಬಾಗೇವಾಡಿ ಸಮೀಪದ ಮಸಬಿನಾಳ ಎಂಬ ಗ್ರಾಮ. ತಂದೆ ಚೆನ್ನವೀರಪ್ಪ, ತಾಯಿ ದೇವಕಮ್ಮ. ಅವರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ಅಂದಾಜು 243 ವಚನಗಳನ್ನು ಬರೆದಿದ್ದಾರೆ. ಅವರ ಕಾಯಕನಿಷ್ಠೆ ಭಕ್ತಿ, ವೈರಾಗ್ಯ ಮತ್ತು ದಾಸೋಹಗಳು ದಾರಿದೀಪಗಳಾಗಿವೆ ಎಂದು ತಿಳಿಸಿದರು.
ಅಪ್ಪಣ್ಣನವರು ಅನುಭವ ಮಂಟಪದ ಕಾರ್ಯದರ್ಶಿಯಾಗಿ ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾಯಕ ನಿರ್ವಹಿಸಿದ್ದರು. ಅವರ ಬಹುತೇಕ ವಚನಗಳು ಬೆಡಗಿನ ವಚನಗಳಾಗಿವೆ. ಇವರು ವಚನಗಳಲ್ಲಿ ಶರಣರಿಗಿರಬೇಕಾದ ಕಾಯಕನಿಷ್ಠೆ, ದಾಸೋಹ, ವೈರಾಗ್ಯ, ಭಕ್ತಿ, ಆಚಾರ-ವಿಚಾರಗಳನ್ನು ವಿಡಂಬಿಸಿ ಅಜ್ಞಾನಿಗಳನ್ನು ಸುಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಂಗಮ ಹೊಸಳ್ಳಿಯ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಜಾನಕಿ, ಹಿರಿಯ ಸಾಹಿತಿ ಮತ್ತು ಡಾ.ಬಾಬು ಜಗಜೀವನರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತೆ ಎಂ.ಡಿ.ವೆಂಕಮ್ಮ, ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ್, ಕನ್ನಡ ಉಪನ್ಯಾಸಕ ಶಿವಾನಂದ ಹೊಂಬಳ್ಕರ್, ರಂಗಭೂಮಿ ಕಲಾವಿದೆ ವೀಣಾ ಕುಮಾರಿ, ಲತಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್.ಸುರೇಶ್ ಬಾಬು, ಹಡಪದ ಸಮಾಜದ ಜಿಲ್ಲಾಧ್ಯಕ್ಷ ರುದ್ರಪ್ಪ ಎಮ್ಮಿಗನೂರು, ಜಿಲ್ಲಾ ಗೌರವಾಧ್ಯಕ್ಷ ಕೊಟ್ರಪ್ಪ, ಬಳ್ಳಾರಿ ತಾಲೂಕು ಘಟಕದ ಸದಾಶಿವ, ಕಂಪ್ಲಿ ತಾಲೂಕು ಘಟಕದ ಲಿಂಗೇಶ್, ಕುರುಗೋಡು ತಾಲೂಕು ಘಟಕದ ಮಂಜುನಾಥ, ಸಂಡೂರು ತಾಲೂಕಿನ ಬಸವರಾಜ ಸೇರಿದಂತೆ ಸಮುದಾಯದ ಭಾಂದವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು