ಬಳ್ಳಾರಿಯಲ್ಲಿ ಶರಣ ಸಕ್ಕರೆ ಕರಡೀಶರ ಮತ್ಥಳಿ  ಸ್ಥಾಪಿಸಲು ಟಿ.ಹೆಚ್‌.ಎಂ. ಬಸವರಾಜ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ 15: ಸತ್ಕಾರ್ಯ ಪುರುಷ  ಶರಣ ಸಕ್ಕರೆ ಕರಡೀಶನವರ ಮತ್ಥಳಿಯನ್ನು ಬಳ್ಳಾರಿಯ ರೈಲ್ವೆ ನಿಲ್ದಾಣದ ಮುಂದೆ ಸ್ಥಾಪಿಸಬೇಕೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷ ಟಿ.ಹೆಚ್‌.ಎಂ. ಬಸವರಾಜ  ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ
ಅವರು ನಿನ್ನೆ ಸಂಜೆ ಇಲ್ಲಿನ  ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ ಅಭಿನಯ ಕಲಾಕೇಂದ್ರ  ಹಮ್ಮಿಕೊಂಡಿದ್ದ ಸತ್ಕಾರ್ಯ ಪುರುಷ ಸಕ್ಕರೆ ಕರಡೀಶ ನಾಟಕ ಪ್ರದರ್ಶನವನ್ನು  ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಕ್ಕರೆ ಕರಡೀಶನವರು 1805ರಲ್ಲಿ ಜನಿಸಿ ಸುಮಾರು 60 ವರ್ಷಗಳ ಕಾಲ ಬ್ರಿಟೀಷರ ಆಡಳಿತದಲ್ಲಿ ಸಮಾಜ ಸೇವೆ ಮಾಡಿ ಬಳ್ಳಾರಿಯನ್ನು ನಿರ್ಮಾಣ ಮಾಡಿದರು. 1800ನೇ ಇಸ್ವಿಯಲ್ಲಿ ಬಳ್ಳಾರಿ ಜಿಲ್ಲಾ 20 ತಾಲ್ಲೂಕುಗಳನ್ನೊಂಡಿತು. ಆಗ ಮಹಾ ತಪಸ್ವಿ ಮರಿಸ್ವಾಮಿಗಳು ಬಳ್ಳಾರಿಗೆ ಆಗಮಿಸಿ ಮರಿಸ್ವಾಮಿ ಮಠದಲ್ಲಿ ಉಳಿದುಕೊಂಡರು. ಅವರ ಪರಮ ಶಿಷ್ಯರಾಗಿದ್ದ ಕರಡೀಶರವರು ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯನ್ನು ಮುಂದುವರೆಸಿ ವ್ಯಾಪರದಲ್ಲಿ ತೊಡಗಿಕೊಂಡರು.
ಆಗಿನ ಜಿಲ್ಲಾಧಿಕಾರಿಯಾಗಿದ್ದ ಎ. ಮಿಲ್ಲರ್ ರವರೊಂದಿಗೆ ಆಪ್ತ ಸಂಬಂಧವನ್ನು ಹೊಂದಿ ಗುತ್ತಿಗೆದಾರರಾದರು. ನಂತರ 1858ರಲ್ಲಿ ಬಳ್ಳಾರಿ ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿಗಳ ಕಛೇರಿ, ಕೋಟೆಯ ಆಂಚೆ ಕಛೇರಿ, ಟೌನ್‌ಹಾಲ್ ಇನ್ನೂ ಅನೇಕ ಕಟ್ಟಡಗಳನ್ನು ನಿರ್ಮಿಸಿದರು. 200 ವರ್ಷಗಳ ಕಳೆದರೂ ಈ ಕಟ್ಟಡಗಳು ಗಟ್ಟಿ ಮುಟ್ಟಾಗಿರುವುದಕ್ಕೆ ಅವರ ಪ್ರಾಮಾಣಿಕತೆಯೇ ಸಾಕ್ಷಿಯಾಗಿದೆ, ಸರ್ಕಾರದ ಹಣವನ್ನು ಪ್ರಾಮಾಣಿಕವಾಗಿ ಬಳಸಿ ಉಳಿದ ಹಣವನ್ನು ಸರ್ಕಾರಕ್ಕೆ ವಾಪಸ್ಸು ಕೊಡುತ್ತಿದ್ದರು. ಅವರ  ಪ್ರಾಮಾಣಿಕತೆಯನ್ನು ಮೆಚ್ಚಿ ಬ್ರಿಟೀಷ್ ಸರ್ಕಾರ 1862ರಲ್ಲಿ ಗೌರವ ನ್ಯಾಯಾಧೀಶ ಪಟ್ಟವನ್ನು ನೀಡಿ ಗೌರವಿಸಿತು. ಮತ್ತು 1866ರಲ್ಲಿ ಬಳ್ಳಾರಿಯಲ್ಲಿ ಬೀಕರ ಬರಗಾಲ ಬಂದಾಗ ಸಾವಿರಾರು ಬಡವರಿಗೆ ದೀನ ದಲಿತರಿಗೆ, ಅಂಗವಿಕಲರಿಗೆ ಆಶ್ರಯ ನೀಡಿ ದಾಸೋಹದ ಸೇವೆ ಮಾಡಿದರು. ಇದನ್ನು ಮೆಚ್ಚಿ I867ರಲ್ಲಿ ಬ್ರಿಟನ್ ರಾಣಿಯಿಂದ ರಾಯ್‌ಬಹದ್ದೂರು ಗೌರವ ಲಭಿಸಿತು. 1869ರಲ್ಲಿ ಶ್ರೀಗುರು, ನಿವಾಸ ಸಂಸ್ಕೃತಿ ಪಾಠ ಶಾಲೆ ಮತ್ತು ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಇವರ ಸಂಸ್ಕೃತ ಪಾಠಶಾಲೆಯಲ್ಲಿ ಅನೇಕ ಜಗದ್ಗುರುಗಳು, ಸ್ವಾಮೀಜಿಗಳು, ವಿದ್ಯಾರ್ಥಿಗಳಾಗಿದ್ದರು. 1872ರಲ್ಲಿ ಮರಿಸ್ವಾಮಿಗಳು ಲಿಂಗೈಕ್ಯರಾದ ನಂತರ ಅವರ ಅಪ್ಪಣೆಯ ಮೇರೆಗೆ 1873ರಲ್ಲಿ ವಿಭೂತಿ ಕಣಜವನ್ನು ಮರಿಸ್ವಾಮಿ ಮಠದಲ್ಲಿ ನಿರ್ಮಾಣ ಮಾಡಿದರು, ಬಳ್ಳಾರಿಯನ್ನು ಮರಿಕಲ್ಯಾಣ ಮಾಡಿ ಬಳ್ಳಾರಿಯ ನಿರ್ಮಾತೃ ಆಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಬಳ್ಳಾರಿಯಲ್ಲಿ ರಸ್ತೆಗಳನ್ನು, ಭಾವಿಗಳನ್ನು ಇನ್ನೂ ಅನೇಕ ಲೋಕೋಪಯೋಗಿ ಕೆಲಸ ಮಾಡಿ ತಾವು ದುಡಿದ ಹಣವನ್ನನೆಲ್ಲಾ ಬಡವರಿಗೆ ಮುಡುಪ್ಪಾಗಿಟ್ಟು, 1875ರಲ್ಲಿ ಲಿಂಗೈಕರಾದರು. ಇಂತವರ ಹೆಸರನ್ನು ಬಳ್ಳಾರಿಯಲ್ಲಿ ರಸ್ತೆಗೆ, ವೃತ್ತಕ್ಕೆ, ಬಡಾವಣೆಗೆ ನಾಮಕರಣ ಮಾಡಿ ಜಿಲ್ಲಾಡಳಿತ ಕರಡೀಶ ಅವರ  ಪುತ್ಥಳಿಯನ್ನು ಬಳ್ಳಾರಿಯಲ್ಲಿ ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಂ.ಗುರುಸಿದ್ದಯ್ಯ ಅವರು ಮಾತನಾಡಿ ಇಂತಹ ಭಕ್ತಿ ಪೂರ್ವಕವಾದ ನಾಟಕಗಳು ಇನ್ನೂ ಹೆಚ್ಚಾಗಿ ಬರಬೇಕು ಮತ್ತು ಇವರ ಮತ್ಥಳಿಯನ್ನು ಸ್ಥಾಘಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆಂದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ವಿ.ಬಸವರಾಜ ಮಾತನಾಡಿ ಸಕ್ಕರೆ ಕರಡೀಶನಂತವರು ಬಳ್ಳಾರಿಯಲ್ಲಿ ಜನಿಸಿರುವುದು ನಮ್ಮ ಪುಣ್ಯ ಎಂದರು.
ಮಹಾನಗರ ಪಾಲಿಕೆಯ ಸದಸ್ಯೆ  ಸುರೇಖಾ ಮಲ್ಲನಗೌಡರು ಮಾತನಾಡಿ ಹೆಣ್ಣು ಮಕ್ಕಳ ಮೇಲೆ ಅಪಾರ ಗೌರವನ್ನು ಇಟ್ಟಿದ್ದ ಸಕ್ಕರೆ ಕರಡೀಶ ರವರನ್ನು ನೆನೆದು ಇಂತಹ ಪ್ರಾತಃಸ್ಥರಣೀಯರ ನಾಟಕಗಳು ಹೆಚ್ಚು ಹೆಚ್ಚು ಬರಲೆಂದು ಆಶಿಸಿದರು.
ಸಮಾರಂಭದಲ್ಲಿ ಮಸೀದಿಪರದ  ಚಂದ್ರಶೇಖರ್‌ಗೌಡ, ಮೇಟಿ ಪೊಂಪನಗೌಡರನ್ನು ಮತ್ತು ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ  ವಲಿಭಾಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸತ್ಕಾರ್ಯ ಪುರುಷ ಸಕ್ಕರೆ ಕರಡೀಶ ನಾಟಕವನ್ನು ನುರಿತ ಕಲಾವಿದರು ಹಾಗೂ ಸಮೂಹ ನೃತ್ಯವನ್ನು ಎಂ.ಬಿ.ಚಾರುಲತಾ ಇವರ ತಂಡ ನೇರವೇರಿಸಿತು. ನಾಟಕದ
ರಚನೆ ಮತ್ತು ನಿರ್ದೇಶನ ಮಾಡಿದ ಅಭಿನಯ ಕಲಾಕೇಂದ್ರದ ಅಧ್ಯಕ್ಷ ಕೆ.ಜಗದೀಶ್  ಸ್ವಾಗತಿಸಿ ವಂದಿಸಿದರು.
ಕುಮಾರಿ ಸುಷ್ಮಾ ಸಿ.ಡಿ, ಕಾರ್ಯಕ್ರಮ  ನಿರ್ವಹಿಸಿದರು. ವೇದಿಕೆಯ ಮೇಲೆ ಸಂಗಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾವಿನಾಳ ಬಸವರಾಜ ಉಪಸ್ಥಿತರಿದ್ದರು.