ಬಳ್ಳಾರಿಯಲ್ಲಿ ತೊಗರಿ ಬೀಜಕ್ಕೆ ಮುಗಿಬಿದ್ದ ರೈತರು

ಬಳ್ಳಾರಿ,ಮೇ.೨೭- ಹೀಗೆ ನೂರಾರು ಜನ ಸಾಲಾಗಿ ನಿಂತು ಮುಗಿ ಬಿದ್ದಿರುವುದು ಯಾವುದೇ ಸಿನಿಮಾದ ಟಿಕೆಟ್ ಗಾಗಿ ಅಲ್ಲ. ಉತ್ತಮ ಮಳೆ ಬಿದ್ದಿರುವುದರಿಂದ ತೊಗರಿ ಬೀಜಕ್ಕಾಗಿ ರೈತರು ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಕಳೆದ ಹಲವು ದಿನಗಳಿಂದ ಮಳೆ ಬೀಳುತ್ತಿದ್ದು ಮುಂಗಾರು ಹಂಗಾಮಿನ ಬಿತ್ತನೆಗೆ ಸಹಕಾರಿಯಾಗಿದೆ. ಇದರಿಂದ ರೈತರು ತೊಗರಿ ಬಿತ್ತನೆಗೆ ಮುಂದಾಗಿದ್ದಾರೆ. ಬಹುತೇಕ ರೈತರು ತೊಗರಿ ಬಿತ್ತನೆಗೆ ಆಸಕ್ತಿ ತೋರಿದ್ದಾರೆ.
ನೆರೆಯ ಆಂಧ್ರಪ್ರದೇಶದ ಆಲೂರು, ಉರವಕೊಂಡ, ಗುಂತಕಲ್ಲು, ರಾಯದುರ್ಗಂ, ಆದೋನಿ ತಾಲೂಕುಗಳ ರೈತರಿಗೆ ಅಗತ್ಯವಾದ ತೊಗರಿ ಬೀಜ ದೊರೆಯದೇ ಇರುವುದು ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ. ಅಲ್ಲಿನ ರೈತರು ಬಳ್ಳಾರಿ ನಗರಕ್ಕೆ ತೊಗರಿ ಬೀಜ ಖರೀದಿಗೆ ಬಂದಿದ್ದಾರೆ.
ನಗರದ ಕೆ.ಸಿ.ರಸ್ತೆಯಲ್ಲಿರುವ ಬೀಜ ಮಾರಾಟದ ಅಂಗಡಿಗಳ ಮುಂದೆ ಇಂದು ಬೆಳಿಗ್ಗೆ ಆರು ಗಂಟೆ ವೇಳೆಗೆ ಬಂದು ಕುಳಿತಿದ್ದರು. ಅಂಗಡಿ ಬಾಗಿಲು ತೆರೆಯುವ ವೇಳೆಗೆ ನೂರಾರು ರೈತರು ಸೇರಿದ್ದಾರೆ.
ಒಂದು ಕಿಲೋ ತೊಗರಿ ಬೀಜವನ್ನು ಎರಡು ನೂರು ರೂನಂತೆ ಮಾರಾಟ ಮಾಡಲಾಗುತ್ತಿದೆಯಂತೆ.
ನಾಮುಂದು ತಾಮುಂದು ಎಂದು ಮುಗಿ ಬಿದ್ದಿದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗಿದ್ದರಿಂದ ಪೊಲೀಸರು ಆಗಮಿಸಿ ರೈತರನ್ನು ಸಾಲಾಗಿ ನಿಲ್ಲಿಸಿದರು.
ನಮ್ಮ ಜಿಲ್ಲೆಯವರಗಿಂತ ಆಂಧ್ರಪ್ರದೇಶದ ರೈತರೇ ಹೆಚ್ಚಾಗಿ ಬೀಜ ಖರೀದಿ ಮಾಡುತ್ತಿದ್ದಾರೆ. ಬೆಳೆಯ ನಂತರ ಫಸಲನ್ನು ಸಹ ಆಂಧ್ರದ ರೈತರು ಮಾಲನ್ನು ಬಳ್ಳಾರಿ ಮಾರುಕಟ್ಟೆಗೆ ತರುವುದು ಸಹ ಸಹಜವಾಗಿದೆ.
ನಮ್ಮ ಜಿಲ್ಲೆಯಲ್ಲಿ ಈವರಗೆ ೫೬ ಎಂ.ಎಂ. ಮಳೆ ಆಗಿದೆ. ಜಿಲ್ಲೆಯಲ್ಲಿ ೧.೭೩ ಹೆಕ್ಟೇರ ಜಮೀನಿನಲ್ಲಿ ಬಿತ್ತನೆ ಗುರಿ ಇದ್ದು ಬಿತ್ತನೆ ಆರಂಭವಾಗಬೇಕಿದೆ.
ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಸದ್ಯ ೬೯೮೭ ಕ್ವಿಂಟಲ್ ಬೀಜ ವಿತರಿಸುವ ಪ್ರಮಾಣ ಹೊಂದಿದೆ. ಜಿಲ್ಲೆಯಲ್ಲಿ ೩೨ ಸಾವಿರ ಕ್ವಿಂಟಲ್ ಬೀಜ ದಾಸ್ತಾನಿದೆ.
ಇನ್ನು ಜಿಲ್ಲೆಯಲ್ಲಿ ೧೨ ಸಾವಿರ ಕ್ವಿಂಟಲ್ ತೊಗರಿ ಬೀಜ ದಾಸ್ತಾನಿದೆ. ಒಂದು ಕಿಲೋ ತೊಗರಿ ಬೀಜ ಖರೀದಿಗೆ ಇಲಾಖೆಯು ೨೫ ರೂ ಸಹಾಯ ಧನ ನೀಡಲಿದೆ. ಓರ್ವ ರೈತನಿಗೆ ಕನಿಷ್ಟ ೧೦ ಕಿಲೋ ವರೆಗೆ ಮಾತ್ರ ಸಹಾಯಧನ ನೀಡಲಿದೆಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಶ್ರಿತ ೬೪ ಸಾವಿರ ಹೆಕ್ಟೇರ್ ಪ್ರದೇಶವಿದೆ.