ಬಳ್ಳಾರಿಯಲ್ಲಿ ಕೋವಿಡ್ ತುರ್ತುಪರಿಸ್ಥಿತಿ ಸಭೆ ಬಿಗಿಯಾದ ಕ್ರಮಕ್ಕೆ ಆನಂದ್ ಸಿಂಗ್ ಸೂಚನೆ

ಬಳ್ಳಾರಿ, ಏ.19: ಕೋವಿಡ್ 2ನೇ ಅಲೆಯ ಸೊಂಕು ಅತ್ಯಂತ ತೀವ್ರಗತಿಯಲ್ಲಿ ಪಸರಿಸುತ್ತಿದ್ದು. ಸೊಂಕಿಗೆ ಒಳಗಾಗಿ ಹೋಂ ಐಸೋಲೇಶನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ತೀವ್ರ ನಿಗಾವಹಿಸಿ ಅವರನ್ನು ಹೊರಗೆ ತಿರುಗಾಡದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೇ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಸೂಚನೆ ನೀಡಿದರು.
ಅವರು ಇಂದು ನಗರದ
ವಿಮ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ತುರ್ತು ಪರಿಸ್ಥಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೋಂಕಿತರನ್ನು ಹೊರಗಡೆ ಬಿಡುವುದರಿಂದ ಸೊಂಕು ಮತ್ತಷ್ಟು ಹರಡುವ ಸಾಧ್ಯತೆ ಇರುತ್ತದೆ;ಈ ಹಿನ್ನೆಲೆಯಲ್ಲಿ ಇದರ ಮೇಲ್ವಿಚಾರಣೆ ಹೊಣೆ ಹೊತ್ತುಕೊಂಡ ತಾಲೂಕು ಆರೋಗ್ಯ ಅಧಿಕಾರಿಗಳು,ರ‌್ಯಾಪಿಡ್ ರೆಸ್ಪಾನ್ಸ್ ಟೀಂ,ಸಂಬಂಧಿಸಿದ ವೈದ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನಿಗಾವಹಿಸಿ ಕ್ರಮವಹಿಸಬೇಕು ಎಂದರು.
ಕಟ್ಟೆಚ್ಚರ ವಹಿಸಿ:
ಜಿಲ್ಲೆಯು ಆಂದ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ರಾಜ್ಯವಾಗಿದ್ದು, ಆ ಕಡೆಯಿಂದ ಬರುವ ಮಾರ್ಗಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ. ಆ ರಾಜ್ಯದಿಂದ ಬರುವ ಜನರಿಗೆ ತೀವ್ರ ತಪಾಸಣೆ ನಡೆಸಬೇಕು. ಸೋಂಕಿನ ಸ್ವಲ್ಪ ಲಕ್ಷಣಗಳು ಕಂಡುಬಂದರೂ ಸಹ ಅಂತರವನ್ನು ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸಬೇಕು.
15ದಿನಗಳ ಕಾಲ ಪರಿಣಾಮಕಾರಿಯಾಗಿ ತಪಾಸಣೆ ನಡೆಸಿ ಎಂದು ಹೇಳಿದರು.
ಕಳೆದ ಬಾರಿ 9 ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿತ್ತು; ಈ ಬಾರಿ 6 ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ;ಅಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೂಲಕ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಡಿಸಿ ಮಾಲಪಾಟಿ ಅವರು ಸಭೆಯಲ್ಲಿ ತಿಳಿಸಿದರು.
ಇದುವರೆಗೆ ಜಿಲ್ಲೆಯಲ್ಲಿ 2.64ಲಕ್ಷ ಜನರಿಗೆ ಲಸಿಕೆ ಹಾಕಿಸಲಾಗಿದೆ. 40 ಸಾವಿರ ಜನ ಕೋವಿಡ್ ವಾರಿಯರ್ಸ್ ಗಳಿಗೂ ಲಸಿಕೆ ಹಾಕಲಾಗಿದೆ ಎಂದರು ಕರೋನಾ ನಿಯಂತ್ರಿಸುವುದರ ಜೊತೆ ವಿವಿಧ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವಿದಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಶಾಸಕ ಸೋಮಲಿಂಗಪ್ಪ, ಸಂಬಂಧಿಸಿದ ಅಧಿಕಾರುಗಳು ಮತ್ತಿತರರು ಇದ್ದರು.