ಬಳ್ಳಾರಿಯಲ್ಲಿ ಕಮಲದ ಕಲರವ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.19: ನಾಳೆ ನಗರದ ಟಿ.ಬಿ.ಸ್ಯಾನಿಟೋರಿಯಂ ಬಳಿಯ ಮೈದಾನದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ ನಡೆಯಲಿರುವ ಬಿಜೆಪಿ ಎಸ್ಪಿ ಮೋರ್ಚಾದ ನವಶಕ್ತಿ ಸಮಾವೇಶಕ್ಕೆ ಬಳ್ಳಾರಿ ನಗರ ಬಿಜೆಪಿಯ ಬ್ಯಾನರ್, ಬಾಪುಟ, ಪ್ಲೆಕ್ಸ್ ಗಳಿಂದ ಕಮಲದ ಕಲರವ ಕಂಗೊಳಿಸುತ್ತಿದೆ.
ಸಮಾವೇಶದ ಸ್ಥಳವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳ ಇಕ್ಕೆಲಗಳಲ್ಲಿ ಬಿಜೆಪಿಯ ಬಾಪುಟಗಳು ರಾರಾಜಿಸುತ್ತಿವೆ. ರಾಜ್ಯದ ಎಲ್ಲೆಡೆಯಿಂದ ಬರುವ ಜನತೆಯನ್ನು ಸ್ವಾಗತಿಸುವಂತೆ ಹೊಸಪೇಟೆ, ಬೆಂಗಳೂರು, ಮೋಕಾ, ಸಿರುಗುಪ್ಪ, ಅನಂತಪುರಂ, ಕೊಳಗಲ್ಲು ಮೊದಲ ರಸ್ತೆಗಳು, ಅದೇ ರೀತಿ ನಗರದ ಬಹುತೇಕ ಪ್ರಮುಖ ರಸ್ತೆಗಳು, ಸರ್ಕಲ್ ಗಳಲ್ಲಿ ಬಿಜೆಪಿ ಬಾಪುಟ, ರಾಜ್ಯ, ರಾಷ್ಟ್ರ, ಮತ್ತು ಸ್ಥಳೀಯ ನಾಯಕರುಗಳ ಭಾವಚಿತ್ರದ ಪ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ.
ಸಮಾವೇಶದ ಸ್ಥಳದಲ್ಲಿ ಒಂದು ಕಡೆ ಬೃಹತ್ ವೇದಿಕೆ ಅದರ ಹಿಂದೆ ಡಿಜಿಟಲ್ ಪರದೆ ಸಿದ್ಧವಾಗಿದೆ. ಸಾವಿರಾರು ಜನತೆ ಕುಳಿತು ನೋಡಲು ಚೇರ್ ಗಳ ವ್ಯವಸ್ಥೆಯನ್ನು ಈಗಾಗಲೇ ಮಾಡಿದೆ.
ಮತ್ತೊಂದು ಕಡೆ ಇಂದು ಸಂಜೆ ಬರುವ ಕಾರ್ಯಕರ್ತರಿಗೆ ಮತ್ತು ನಾಳೆ ಬರುವವರಿಗೆ ಹುಗ್ಗಿ, ಫಲಾವ್, ಚೆಟ್ನಿ ತಯಾರಿಗೂ ಭರ್ಜರಿ ಸಿದ್ಧತೆ ನಡೆದಿದೆ.
 ಪಾರ್ಕಿಂಗ್
ಲಕ್ಷಾಂತರ ಜನರನ್ನು ಕರೆದುಕೊಂಡು ರಾಜ್ಯದ ವಿವಿಧೆಡೆಯಿಂದ ಬರುವ ಬಸ್, ಕ್ರುಸರ್, ಬೈಕ್ ಗಳ ಆಯಾ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ.
 ಬಿಗಿ ಬಂದೋಬಸ್ತ್
ಸಮಾವೇಶಕ್ಕೆ ಬರುವ ಜನತೆಗೆ ಟ್ರಾಫಿಕ್ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸಮಾವೇಶದ ಬಳಿ ನಗರದಲ್ಲಿ ಜನರನ್ನು ನಿಯಂತ್ರಿಸಲು ಜಿಲ್ಲೆಯ ಮತ್ತು ಇತರೇ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿ ಬಿಗಿ ಬಂದೋಬಸ್ತಿಗೆ ವ್ಯವಸ್ಥೆ ಮಾಡಿದೆ.
 ರಾಷ್ಟ್ರೀಯ ಅಧ್ಯಕ್ಷರು
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿವಿಧ ಸಚಿವರುಗಳು, ಪಕ್ಷದ ಮುಖಂಡರು ಭಾಗವಹಿಸಿ ಎಸ್ಟಿ ಸಮುದಾಯಕ್ಕೆ ಪಕ್ಷ ನೀಡಿದ ಕೊಡುಗೆ ಬಗ್ಗೆ ತಿಳಿಸಲಿದ್ದಾರೆ.