
ಅಫಜಲಪುರ:ಆ.17: ಈ ಬಾರಿ ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಭೀಮಾ ನದಿಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರೈತರು ಉತ್ತಮ ಫಸಲು ಬೆಳೆದು ಒಳ್ಳೆಯ ಆದಾಯ ಪಡೆಯಿರಿ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.
ತಾಲೂಕಿನ ಬಳೂಂಡಗಿ ಜಾಕ್ ವೆಲ್ ಹಾಗೂ ಮುಖ್ಯ ಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆದು ಹಾಕಿ ಅದರಲ್ಲಿ ಬಿದ್ದಿರುವ ಮಣ್ಣನ್ನು ಹೂಳೆತ್ತಿ ಸ್ವಚ್ಛಗೊಳಿಸಿದರೆ ನೀರು ಸುಗಮವಾಗಿ ಹರಿಯುತ್ತದೆ.
ನೀರಾವರಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರದಿಂದ ಅನುದಾನ ತರುತ್ತೇನೆ ಆದರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಮಂಜೂರಾದ ಅನುದಾನದಿಂದ ಒಳ್ಳೆಯ ಕಾಮಗಾರಿಗಳನ್ನು ಮಾಡುವ ಮೂಲಕ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ಈ ಬಾರಿ ಮಳೆಗಾಲ ಕಡಿಮೆ ಇರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಸಾಕಷ್ಟು ಕಡಿಮೆ ಇದೆ. ಮುಂದೆ ಮಳೆ ಬಾರದೆ ಇದ್ದರೆ ಬೇಸಿಗೆಯಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈತರು ಚಿಕ್ಕ ಚಿಕ್ಕ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಆದಾಯ ಪಡೆಯಲು ಪ್ರಯತ್ನಿಸಬೇಕು ಎಂದರು.
ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಲಕ್ಷ್ಮೀಕಾಂತ ಬಿರಾದಾರ ಮಾತನಾಡಿ, ಸೊನ್ನ ಬ್ಯಾರೇಜ್ ನಲ್ಲಿ ಕಳೆದ ಬಾರಿ 3.16 ಟಿಎಂಸಿ ಸಂಗ್ರಹವಾದ ನೀರಲ್ಲಿ ಸುಮಾರು 40 ಸಾವಿರ ಕ್ಯೂಸೆಕ್ ನೀರನ್ನು ನದಿ ಹಾಗೂ ಕಾಲುವೆಗಳಿಗೆ ಹರಿಬಿಡಲಾಯಿತು.
ಆದರೆ ಈ ಬಾರಿ ಮಳೆಗಾಲ ಕಡಿಮೆ ಇರುವುದರಿಂದ 2 ಟಿಎಂಸಿ ಮಾತ್ರ ನೀರು ಬ್ಯಾರೇಜ್ ನಲ್ಲಿ ಇದೆ. ಅಲ್ಲದೆ ಮಹಾರಾಷ್ಟ್ರದ ಉಜನಿ ಜಲಾಶಯದಲ್ಲಿಯೂ 30% ರಷ್ಟು ನೀರು ಇರುವುದರಿಂದ ಅಲ್ಲಿನ ಅಧಿಕಾರಿಗಳು ಹೆಚ್ಚುವರಿ ನೀರನ್ನು ಹರಿಬಿಡುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಈ ಬಾರಿ ಮಳೆ ಬರದೆ ಇದ್ದರೆ ನೀರಿನ ಅಭಾವ ಎದುರಾಗಲಿದೆ ಎಂದರು.
ಈ ವೇಳೆ ಜಿ.ಪಂ ಮಾಜಿ ಸದಸ್ಯ ಮತೀನ್ ಪಟೇಲ್, ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ಸಿದ್ದಣ್ಣಗೌಡ ಪಾಟೀಲ್, ಮಹಾಲಿಂಗ ಅಂಗಡಿ, ನಿಗಮ ಅಧಿಕಾರಿಗಳಾದ ಸಂತೋಷ ಸಜ್ಜನ್, ಸುಧೀರ ಸಂಗಾವಿ, ಸಂತೋಷ ಬಿರಾದಾರ ಅನೇಕರಿದ್ದರು.