
ಕಲಬುರಗಿ:ಮಾ.06: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬಳವಡಿಗಿಯಲ್ಲಿ ಇದೇ ಮಾರ್ಚ್ 10ರಂದು ಶ್ರೀ ಎಲ್ಲಾಂಬಿಕಾ ದೇವಿ ಮೂರ್ತಿ ಪುನರ್ ಪ್ರತಿಷ್ಠಾಪನೆ ಹಾಗೂ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಗೂರಿನ ಚನ್ನರುದ್ರಮುನಿ ಶಿವಾಚಾರ್ಯರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 9ರಂದು ಆಧ್ಯಾತ್ಮಿಕ ಪ್ರವಚನ ಆರಂಭಗೊಳ್ಳಲಿದ್ದು, ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಸಂಜೀವಕುಮಾರ್ ಹಂಚಾಟೆ ಅವರು ಉದ್ಘಾಟಿಸುವರು. ಶಹಾಪುರದ ಗಂಗಾಧರ್ ಜಿ. ಹಿರೇಮಠ್ ಶಾಸ್ತ್ರೀಗಳು ಪುರಾಣ ಪ್ರವಚನ ಮಾಡುವರು. ಮಲ್ಲಿಕಾರ್ಜುನ್ ಫರತಾಬಾದ್ ಹಾಗೂ ಈರಮ್ಮ ಗುರುಸ್ವಾಮಿ ಕಲಬುರ್ಗಿಮಠ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.
ಮಾರ್ಚ್ 10ರಂದು 700 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ದೇವಸ್ಥಾನದ ಮೂರ್ತಿ ಪುನರ್ ಪ್ರತಿಷ್ಠಾಪನೆಯನ್ನು ನಾಲವಾರದ ಸಿದ್ಧ ತೋಟೇಂದ್ರ ಶಿವಾಚಾರ್ಯರು ಹಾಗೂ ಹೊರನಾಡಿನ ಜಿ. ಭೀಮೇಶ್ವರ್ ಜೋಶಿ ಅವರು ಮಾಡುವರು. ಮಧ್ಯಾಹ್ನ ಧರ್ಮ ಸಭೆ ಆಯೋಜಿಸಲಾಗಿದೆ. ವಿವಿಧ ಮಠಾಧೀಶರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಬ್ರಹ್ಮ ಕುಂಭಾಭಿಷೇಕವನ್ನು ಶೃಂಗೇರಿಯ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ನೆರವೇರಿಸುವರು. 508 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಲಕರ್ಟಿಯ ರಾಜಶೇಖರ್ ಮಹಾಸ್ವಾಮಿಗಳು, ಮುಗುಳನಾಗಾಂವಿಯ ಸಿದ್ದಲಿಂಗ್ ಶಿವಾಚಾರ್ಯರು, ಮಲ್ಲಣ್ಣಗೌಡ ಬಳವಡಗಿ, ಶರಣಗೌಡ ಪಾಳಾ, ಶಿವಶರಣಯ್ಯಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.