
ವಾಡಿ: ಮಾ.11:ಸುಕ್ಷೇತ್ರ ಬಳಬಡಗಿಯ ಶಕ್ತಿಪೀಠವಾದ ಶ್ರೀ ಎಲ್ಲಾಂಬಿಕಾ ದೇವಿಯ ನೂತನ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ ಹಾಗೂ ಮೂರ್ತಿ ಪುನ: ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ, ಶುಕ್ರವಾರ ವೈದಿಕರ ಆಗಮನ ಶಾಸ್ತ್ರದ ರೀತ್ಯಾ ವಿಜೃಂಭಣೆಯಿಂದ ನಡೆಯಿತು.
ಆರೋಢ ಪ್ರಶ್ನೆ ಅನ್ವಯ ಮೂಲ ದೇವಸ್ಥಾನವನ್ನು ಸಂಪೂರ್ಣ ಐಕ್ಯ ಮಾಡಿ, ಸುಮಾರು 6 ಕೋ.ರೂ. ವೆಚ್ಚದಲ್ಲಿ ಕದಂಬ, ಮಿಶ್ರ ಚಾಲೂಕ್ಯ ಶೈಲಿಯ ಶಿಲಾಮಯ ದೇವಸ್ಥಾನದಲ್ಲಿ ಮೂಲ ಮೂರ್ತಿಯನ್ನು ಪುನ: ಪ್ರತಿಷ್ಠಾಪನೆ ನಿಮಿತ್ತ ಗುರುವಾರ ಋತ್ವಿಜರಾದ ವೇದಮೂರ್ತಿ ಪ್ರಸನ್ನಾಜೀ, ರಾಜಶೇಖರ ತಂತ್ರಿ, ವಿನಾಯಕ ಭಟ್ಟ, ಶ್ರೀಪಾದ ಭಟ್ಟ, ಅವಧೂತ ಭಟ್ಟ ಹೊನಗುಂಟಾ ಸೇರಿದಂತೆ ಪಂಡಿತರ ನೇತೃತ್ವದಲ್ಲಿ ವೆಂಕಟೇಶ ಕುಲಕರ್ಣಿ ಅರ್ಚನಾ ಹಾಗೂ ದಿನಕರಾವ ಕುಲಕರ್ಣಿ ಛಾಯಾ ದಂಪತಿಗಳಿಂದ ಗುರು ಗಣಪತಿ ಪೂಜೆ, ಫಲನ್ಯಾಸ, ಪುಣ್ಯಾಹವಾಚನ, ಮಾತೃಕಾ ಪೂಜೆ, ಋತ್ವಿಜ ವರಣಿ, ಕೌತುಕ ಬಂಧನ, ಆಲಯ ಪ್ರರಿಗ್ರಹ, ಗಣಪತಿ ಹವನ, ಬಿಂಬಿ ಶುದ್ದಿ ಹವನ, ರಕ್ಷೋಘ್ನ ಹವನ, ವಾಸ್ತು ಹವನ, ವಾಸ್ತು ಬಲಿ, ದಿಶಾ ಬಲಿ, ಕುಂಡ ಮಂಡಪ ಸಂಸ್ಕಾರ, ಯಾಗ ಶಾಲಾ ಪ್ರವೇಶ, ಸ್ಥಾನಶುದ್ದಿಒಯಾದಿ ಹವನಗಳು, ಸಪ್ತಾಧಿವಾಸ ಪೂಜೆ ನಡೆಯಿತು.
ಶುಕ್ರವಾರ ಬೆಳಗ್ಗೆ ಗುರು ಗಣಪತಿ ಪೂಜೆ, ನವಗ್ರಹ ಪೂಜೆ ಗಣಪತಿ ಹವನ, ನಡೆಯಿತು. ಬೆಳಗ್ಗೆ 8.40 ಕ್ಕೆ ಮೀನ ಲಗ್ನದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಭೀಮೇಶ ಜೋಶಿ ಅವರ ಹಸ್ತದಿಂದ ಮೂರ್ತಿಯ ಪುನ: ಪ್ರತಿಷ್ಠಾನ ನಡೆಯಿತು. ನಂತರ ಬಂಧ ಲೇಪನ, ತತ್ವ ಹವನ, ಕಲಾವೃದ್ದಿ ಹವನ, ನಿರೀಕ್ಷೆ ಪೂಜೆ, ಸಂಜೆ ದಿಶಾ ಹವನ, ಅವಶಿಷ್ಠ ಹವನ, ಅಷ್ಟಾವಧಾನ ಪೂಜೆ, ಬ್ರಹ್ಮ ಕಲಶ ಸ್ಥಾಪನೆ ನಡೆಯಿತು. ನಂತರ ಮಹಾ ಪ್ರಸಾದ ವಿರತಣೆ ನಡೆಯಿತು.
ಹಲಕರ್ಟಿಯ ರಾಜಶೇಖರ ಸ್ವಾಮಿಗಳು, ಕೊಂಚೂರನ ಶ್ರೀಧರಾನಂದ ಸ್ವಾಮಿಗಳು, ದೇವಸ್ಥಾನದ ಅಧ್ಯಕ್ಷ ಮಲ್ಲಣ್ಣಗೌಡ ಪೊಲೀಸ್ ಪಾಟೀಲ, ಲಿಂಗಾರೆಡ್ಡಿ ಬಾಸರೆಡ್ಡಿ, ಬಾಬುರಾವ ಕುಲಕರ್ಣಿ, ಈಶ್ವರಪ್ಪಗೌಡ ಹಾಬಾಳ, ದಂಡಯ್ಯ ಸ್ವಾಮಿ, ಬಸವರಾಜ ಸಜ್ಜನ, ಸೇರಿದಂತೆ ದೇವಸ್ಥಾನ ಅಡಳಿತ ಮಂಡಳಿ, ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.