ಎನ್.ವೀರಭದ್ರಗೌಡ
ಬಳ್ಳಾರಿ, ಜೂ.01: ಲಕ್ಷಾಂತರ ರೂ ಜನರ ತೆರಿಗೆ ಹಣದಿಂದ ನಿರ್ಮಾಣ ಮಾಡಿದ ಈ ಸಭಾಂಗಣಕ್ಕೆ ಕಳೆದ ಎರೆಡು ವರ್ಷದಿಂದ ಬೀಗ ಜಡಿಯಲಾಗಿದೆ. ಭೂತ್ ಬಂಗಲೆಯಂತಾಗಿದೆ. ಇದರ ಸದ್ಬಳಕೆಗೆ ಕಲಾವಿದರ ಆಗ್ರಹವಾಗಿದೆ.
ಸಾಂಸ್ಕೃತಿಕ ಮನೋಭಾವದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಪಿ.ಪ್ರಕಾಶ್ ಅವರು. ವಿಶಾಲವಾಗಿದ್ದ ಡಿಸಿ ಬಂಗಲೆಯ ಜಾಗವನ್ನು ಅಂದಿನ ಜಿಲ್ಲಾಧಿಕಾರಿ ಗೌರಿ ತ್ರಿವೇದಿ ಅವರಿಂದ 1996 ರಲ್ಲಿಪಡೆದು. ಕನ್ನಡ ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಿ. ಅಲ್ಲಿ ಸಾಂಸ್ಕೃತಿಕ ಸಮುಚ್ಚಯವನ್ನು ನಿರ್ಮಿಸಿದರು.
ಇದರಲ್ಲಿ ಬಯಲು ರಂಗ ಮಂದಿರ, ಶಿಲ್ಪ ಭವನ, ವಿಚಾರ ಸಂಕಿರಣ ಸಭಾಂಗಣ, ವಸ್ತುಸಂಗ್ರಹಾಲಯದ ಕಟ್ಟಡ ನಿರ್ಮಿಸಿ1999 ರ ಜನವರಿ 4 ರಂದು ದಿ.ಮುಖ್ಯ ಮಂತ್ರಿ ಜೆ.ಹೆಚ್.ಪಟೇಲರಿಂದ ಉದ್ಘಾಟನೆ ಮಾಡಲಾಗಿತ್ತು. ಆಗ ವಿ.ಮಂಜುಳಾ ಅವರು ಜಿಲ್ಲಾಧಿಕಾರಿಯಾಗಿದ್ದರು.
ಅವರು ಇದೇ ಅವರಣದಲ್ಲಿ ಜಿಲ್ಲಾ ಗ್ರಂಥಾಲಯ ಕಟ್ಟಡ ನಿರ್ಮಿಸಲು ಕಾರಣರಾದರು. ನಂತರ ಇಲ್ಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯನ್ನು ಸ್ಥಳಾಂತರಿಸಲಾಯ್ತು. ಬಳಿಕ ಸಂಗನಕಲ್ಲಿನ ಪ್ರಾಗೈತಿಹಾಸಿಕ ಮ್ಯೂಸಿಯಂ, ಕನ್ನಡ ಭವನ, ಹೊಂಗಿರಣ ಸಭಾಂಗಣ ನಿರ್ಮಾಣ ಆದವು.
ಸಮುಚ್ಚಯದ ಆವರಣದಲ್ಲಿ ದೆಹಲಿಯ ಪಾರ್ಲಿಮೆಂಟ್ ನಂತೆ ಅರ್ಧ ವೃತ್ತಾಕಾರದಲ್ಲಿ ನಿರ್ಮಿಸಿದ. ಈ ಸುಂದರ ಕಲ್ಲು ಕಟ್ಟಡದಲ್ಲಿ ಹಲವಾರು ಉಪಯುಕ್ತ ಕಾರ್ಯಕ್ರಮಗಳು ನಡೆದವು. ನಂತರ 2014 ರಲ್ಲಿ ಮತ್ತಷ್ಟು ವೆಚ್ಚ ಮಾಡಿ, ವೇದಿಕೆ ಹಾಗೂ ಧ್ವನಿವರ್ಧಕ ಅಳವಡಿಸಿ. ನಾಡಿನ ಕೆಲ ಪ್ರಸಿದ್ದ ಸಾಹಿತಿಗಳ ಪ್ರತಿಮೆಗಳನ್ನಿರಿಸಿ. ವಿಚಾರ ಸಂಕಿರಣ ಸಭಾಂಗಣದ ಸಂಗ್ರಹಾಲಯ ಎಂದು ಹೆಸರಿಸಿ ಅಂದು ಮತ್ತು ಈಗ ಮುಖ್ಯ ಮಂತ್ರಿ ಆಗಿರುವ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು.
ಆದರೆ ಆದ್ಯಾವ ಕಾರಣಕ್ಕೆ ಇದರ ಬಳಕೆಯಾಗದೆ. ಈ ಸಭಾಂಗಣಕ್ಕೆ ಬೀಗ ಜಡಿಯಲಾಗಿದೆಯೋ ಗೊತ್ತಿಲ್ಲ.
ಸದ್ಭಳಕೆಯಾಗಲಿ:
ಈ ಕಟ್ಟಡದ ಬೀಗ ತೆಗೆದು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ. ಕಲಾತಂಡಗಳಿಗೆ ತರಬೇತಿಗೆ ಹಾಗೂ ನಾಟಕ ನೃತ್ಯ ಸಂಗೀತ ತಾಲೀಮುಗಳಿಗೆ ಉಪಯೋಗವಾಗಲಿ. ಮುಖ್ಯವಾಗಿ ಬಳ್ಳಾರಿಯನ್ನು ಹೈಟೆಕ್ ಸಿಟಿ ಮಾಡುತ್ತೇವೆಂದು ಭಾಷಣ ಮಾಡುವವರು ಇತ್ತ ನೋಡಲಿ.
ಕೆ. ಜಗದೀಶ್ ರಂಗಕರ್ಮಿ ಬಳ್ಳಾರಿ.
ಮ್ಯೂಸಿಯಂಗೆ ನೀಡಲಿದೆ
ಉಪಯೋಗಕ್ಕಿಲ್ಲದ ಈ ಕಟ್ಟಡವನ್ನು ಸಂಗಲಕಲ್ಲು ಪ್ರಾಗೈತಿಹಾಸಿಕ ವಸ್ತು ಸಂಗ್ರಹಾಲಯಕ್ಕೆ ನೀಡಲು ಉದ್ದೇಶಿಸಿದೆ. ಎರೆಡು ಕೋಟಿ ರೂ ವೆಚ್ಚದಲ್ಲಿ ಮ್ಯೂಸಿಯಂ ಅಭಿವೃದ್ಧಿಗೆ ಬಳಕೆ ಮಾಡುವ ಉದ್ದೇಶ ಹೊಂದಲಾಗಿದೆಯಂತೆ.
ಸುರೇಶ್ ಕುಮಾರ್
ಪ್ರಭಾರಿ ಸಹಾಯಕ ನಿರ್ದೇಶಕರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ.