ಬಳಕೆಯಾಗದ ಅಂಬೇಡ್ಕರ್ ಭವನಕ್ಕೆ ಗ್ರಂಥಾಲಯ ರೂಪ

ಬೆಂಗಳೂರು, ಸೆ. ೨೧- ಗ್ರಾಮೀಣ ಭಾಗದಲ್ಲಿ ಬಳಕೆಯಾಗದ ಡಾ. ಬಿ.ಆರ್. ಅಂಬೇಡ್ಕರ್ ಭವನಗಳನ್ನು ಗ್ರಾಮ ಪಂಚಾಯ್ತಿ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ೧ ಸಾವಿರ ಭವನಗಳು ಉಪಯೋಗಿಸದೆ ಬೀಗ ಹಾಕಲಾಗಿದೆ. ಇವುಗಳನ್ನು ಗ್ರಾಮ ಪಂಚಾಯ್ತಿ ಗ್ರಂಥಾಲಯಗಳನ್ನಾಗಿ ಪರಿವರ್ತಿಸುವ ತೀರ್ಮಾನ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಆದಷ್ಟು ಶೀಘ್ರ ಡಾ. ಬಿ.ಆರ್. ಅಂಬೇಡ್ಕರ್ ಭವನಗಳನ್ನು ಪೂರ್ಣಗೊಳಿಸಲಾಗುವುದು. ಅರಕಲಗೂಡು ಕ್ಷೇತ್ರದಲ್ಲೂ ಅಪೂರ್ಣಗೊಂಡಿರುವ ಭವನ ನಿರ್ಮಾಣ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಸದನ ಮುಗಿದ ಒಂದು ವಾರದ ನಂತರ ಕ್ಷೇತ್ರಕ್ಕೆ ಭೇಟಿ ನೀಡಿ ಭವನ ನಿರ್ಮಾಣದ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಸಚಿವರು ಹೇಳಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ವಿಧಾನಸಭಾಧ್ಯಕ್ಷರು, ನಿನ್ನೆ ಸದನದಲ್ಲಿ ಭವನಗಳ ಬಗ್ಗೆ ಚರ್ಚೆಯಾಗಿದೆ. ತಾಲ್ಲೂಕುಗಳಲ್ಲಿ ವಿವಿಧ ಸಮುದಾಯಗಳ ಭವನ ನಿರ್ಮಾಣದ ಬದಲು ಎಲ್ಲರಿಗೂ ಉಪಯೋಗವಾಗುವಂತಹ ಸುಸಜ್ಜಿತ ಭವನ ನಿರ್ಮಾಣ ಮಾಡುವ ಸಲಹೆ ಬಂದಿದೆ. ಅದಕ್ಕೆ ಕಾನೂನು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಗಮನ ಕೊಡಿ ಎಂದು ಸಚಿವರಿಗೆ ಸೂಚಿಸಿದರು.
ಈ ಬಗ್ಗೆ ಗಮನ ಹರಿಸುವುದಾಗಿ ಹೇಳಿದ ಸಚಿವರು, ಪ್ರಸ್ತುತ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ೨೫ ಲಕ್ಷ, ಹೋಬಳಿಗೆ ೭೫ ಲಕ್ಷ ಹಾಗೂ ತಾಲ್ಲೂಕುಗಳಿಗೆ ೨ ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದರು.