ಬಲ್ಲಟಗಿ: ಸಾಮೂಹಿಕ ವಿವಾಹ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ೨೧ ಜೋಡಿ ವಧು ವರರು

ಸಿರವಾರ.ಮೇ.೧೪- ಸಂಸ್ಕಾರವಂತರು ಸಾಮೂಹಿಕ ವಿವಾಹಗಳಂತಹ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ಕಾರ್ಯಗಳು ಹೀಗೆಯೇ ಮುಂದುವರಿಯಲಿ.
ನೂತನ ವದು ವರರು ತಮಗೆ ಜನಿಸುವ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಶುಕ್ರವಾರ ರಾಮಲಿಂಗೇಶ್ವರ ಹಾಗೂ ಚೌಡೇಶ್ವರಿ ದೇವಸ್ಥಾನದ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಆಶಿರ್ವಚನದಲ್ಲಿ ಸಾಮೂಹಿಕ ವಿವಾಹ ಮಾಡುವುದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ. ಸರಳವಾಗಿ ವಿವಾಹವಾಗುವುದರಿಂದ ಆರ್ಥಿಕ ನಷ್ಟಕ್ಕೆ ಕಡಿವಾಣ ಹಾಕಬಹುದು. ಇಂತಹ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ, ದೇಶದಲ್ಲಿ ಸರಳ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು. ಬಾಲಯೋಗಿ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮದುವೆಯಾದ ವಧುಗಳು ಅತ್ತೆ ಮಾವನನ್ನು ತಂದೆ ತಾಯಿಗಳಂತೆ ಕಾಣಬೇಕು ಅಂದಾಗ ಮಾತ್ರ ಜೀವನ ಸುಖಮಯವಾಗುತ್ತದೆ. ಸತಿಪತಿಗಳ ನಡುವೆ ಮನಸ್ಥಾಪ ಬಂದಾಗ ಇಬ್ಬರು ಕುಳಿತು ಮನಸ್ಸು ಬಿಚ್ಚಿ ಮಾತನಾಡಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದರು.
ಮಾಜಿ ಶಾಸಕ ಜಿ.ಹಂಪಯ್ಯನಾಯಕ ಮಾತನಾಡಿ ಇತ್ತಿಚೆಗೆ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಆರ್ಥಿಕ ಹೊರೆಯನು ತಗ್ಗಿಸುತ್ತಿದ್ದಾರೆ. ನೂತನ ವದು ವರರು ಸಹ ಮನೆಗೆ ತೆರಳುವಾಗ ಬ್ಯಾಂಡ್ ಕುಣಿತ ಎಂದು ದುಂದು ವೆಚ್ಚ ಮಾಡದೆ ಸರಳವಾಗಿ ಇರಿ. ಮಕ್ಕಳಿಗೆ ಅಕ್ಷರ ಜ್ಞಾನ ಕೊಡಿಸಬೇಕು. ಮನೆಯಿಂದ ನಮ್ಮ ಸಂಸ್ಕೃತಿಯನ್ನು ಕಲಿಸುವ ಕೆಲಸ ಆಗಬೇಕು ಎಂದರು. ರಂಗನಾಥ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ೨೧ ಜೋಡಿ ನವ ವಧುವರರು ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ಸಂದರ್ಭದಲ್ಲಿ ಶ್ರೀಶೈಲಪ್ಪ ತಾತ, ಅಯ್ಯಪ್ಪ ತಾತ ಮಲ್ಲದಗುಡ್ಡ, ಕಾಳಪ್ಪ ತಾತ ಕಾರಟಗಿ, ಗುರು ಬಸಯ್ಯ ಸ್ವಾಮಿ ಬಲ್ಲಟಗಿ, ಪೆದ್ದಯ್ಯ ನಾಯಕ, ಬಸವರಾಜಪ್ಪ ಹೊಸಮನಿ, ಮುದ್ದಪ್ಪ ಸಾಹುಕಾರ್, ಬಸವರಾಜ ಕೊಡೇಕಲ್, ಬಸ್ಸಪ್ಪ ಪೋತ್ನಾಳ ಸೇರಿದಂತೆ ಅನೇಕರು ಇದ್ದರು.