ಬಲಿಷ್ಠ ಹಾಗೂ ಸುಸ್ಥಿರ ದೇಶ ಕಟ್ಟಲು ಮತ ಚಲಾಯಿಸಿ: ಜಿ. ಪಂ.ಸಿಇಓ ರಿಶಿ ಆನಂದ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.21 :ನಾವು ಚಲಾವಣೆ ಮಾಡುವ ಮತ ಬಲಿಷ್ಠ ಹಾಗೂ ಸುಸ್ಥಿರ ದೇಶ ಕಟ್ಟಲು ಸಹಾಯ ಮಾಡುತ್ತದೆ. ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ಮತ ಚಲಾಯಿಸಿ ಎಂದು ಜಿಲ್ಲಾ ಸ್ವೀಪ್ ಸಮಿತಿ ಅದ್ಯಕ್ಷ ಹಾಗೂ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ರಿಶಿ ಆನಂದ ಹೇಳಿದರು.
ವಿಜಯಪುರ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿÀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ ನವ ಸ್ಪೂರ್ತಿ ಸಂಘ, ಮಾಜಿ ದೇವದಾಸಿ ಪುನರ್ವಸತಿ ಯೋಜನೆ, ಏಡ್ಸ್ ಜಾಗೃತಿ ಮಹಿಳಾ ಸಂಘಗಳ ಸಹಯೋಗದಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆ-2024 “ಮತದಾನ ಜಾಗೃತಿ ಅಭಿಯಾನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಚುನಾಯಿಸುವ ಜನಪ್ರತಿದಿಗಳು ಆಯ್ಕೆಯಾದ ಮೇಲೆ ಆರೋಗ್ಯ, ಶಿಕ್ಷಣ, ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಂಡು ಸಮಾಜದ ಸಮಸ್ಯೆಗಳನ್ನು ನಿವಾರಿಸುತ್ತಾರೆ. ಈ ನಿಟ್ಟಿನಲ್ಲಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ತೊಡಗಿಸಿಕೊಳ್ಳುತ್ತಾರೆ. ಹಾಗಾಗಿ ಎಚ್ಚರಿಕೆ ಹಾಗೂ ಸೂಕ್ತ ರೀತಿಯಲ್ಲಿ ಉತ್ತಮ ಆಡಳಿತ ನಿರ್ಮಾಣ ಮಾಡಲು ಮತ ಚಲಾಯಿಸಿ ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಸಿ. ಆರ್. ಮುಂಡರಗಿ ಮಾತನಾಡಿ, ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತದಾನ ಮಾಡುವುದೂ ಸಹ ನಿಮ್ಮೆಲ್ಲರ ಹಕ್ಕು. ಮತದಾನದಲ್ಲಿ ಸಣ್ಣ ವ್ಯಕ್ತಿ ಹಾಗೂ ದೊಡ್ಡ ವ್ಯಕ್ತಿ ಎಂದು ವ್ಯತ್ಯಾಸ ಇಲ್ಲ. ಎಲ್ಲರ ಮತದಾನವು ಸಮಾನವಾಗಿರುತ್ತದೆ. ಮತಗಟ್ಟೆಗಳಲ್ಲಿ ಸಾರ್ವಜನಿಕರಿಗೆ ಎಲ್ಲ ಮೂಲಭೂತ ಸೌಲಭ್ಯಗಳಾದ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಸರತಿ ಸಾಲಿನ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಆದ್ಯತೆ ನೀಡುವುದು, ವಿಶೇಷ ಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಯಾರೂ ಭಯಭೀತರಾಗದೆ ಆಸೆ-ಆಮಿಷಗಳಿಗೆ ಒಳಗಾಗದಂತೆ ಪ್ರತಿಯೊಬ್ಬರೂ ಸಹ ಮತದಾನ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಆದ್ದರಿಂದ ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಿ ಜಿಲ್ಲೆಯ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಸಹಕರಿಸಬೇಕು. ಈ ನಿಟ್ಟಿನಲ್ಲಿ ಯಾರೂ ಮತದಾನದಿಂದ ಹೊರಗುಳಿಯಬಾರದು. ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು. ವಿಶೇಷವಾಗಿ ಜಿಲ್ಲೆಯ ಪ್ರತಿ ಮತಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಮಹಿಳೆಯರಿಗೋಸ್ಕರ ಮಹಿಳಾ ಸ್ನೇಹಿ ಮತಗಟ್ಟೆ(ಪಿಂಕ್/ಸಖಿ ಬೂತ್)ಗಳನ್ನು ಅಲಂಕರಿಸಲಾಗಿದೆ. ಆದ್ದರಿಂದ ಎಲ್ಲ ಮಹಿಳೆಯರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿ ಎಂದರು.
ನಂತರ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ರಾಜೇಶ ಪವಾರ ಅವರು ಮಾತನಾಡಿದರು. , ರಾಯಭಾರಿ ಸಹನಾ ಕುಡಿಗನೂರ ಅವರು ಎಲ್ಲರಿಗೂ ಮತದಾನ ಜಾಗೃತಿಯ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಇನ್ನೋರ್ವ ರಾಯಭಾರಿ ಸಾಕ್ಷಿ ಹಿರೇಮಠ ಅವರು ಮತದಾನ ಜಾಗೃತಿ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಬಿ.ಎಸ್ ಮೂಗನೂರಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಕೆ. ಚವ್ಹಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಜಶೇಖರ ಹೆಚ್ ದೈವಾಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರ, ಇನ್ನೋರ್ವ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಸಿ ಮ್ಯಾಗೇರಿ, ಜಿಲ್ಲಾ ಪಂಚಾಯತಿಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.