ಬಲಿಷ್ಠ ಆರ್ಥಿಕತೆ ದೇಶಗಳಲ್ಲಿ ಭಾರತವೂ ಒಂದಾಗಲಿದೆ: ಮೋದಿ

ನವದೆಹಲಿ,ಜು.೨೭- ಪ್ರಧಾನ ಮಂತ್ರಿಯಾಗಿ ತಮ್ಮ ಮೂರನೇ ಅವಧಿಯಲ್ಲಿ ವಿಶ್ವದ ಮೂರು ಬಲಿಷ್ಠ ಆರ್ಥಿಕತೆ ಹೊಂದಿದ ದೇಶಗಳಲ್ಲಿ ಭಾರತವೂ ಒಂದಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ಹೆಚ್ಚುಕಡಿಮೆ ಇನ್ನೂ ಒಂದು ವರ್ಷವಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಭಾರಿಗೆ ಪ್ರಧಾನಿಯಾಗುವ ವಿಶ್ವಾಸದಲ್ಲಿದ್ದಾರೆ.
ದೆಹಲಿಯಲ್ಲಿ ಆಯೋಜಸಿದ್ದ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ಮಾತನಾಡಿದ ಅವರು ದೊಡ್ಡ ಕನಸು ಮತ್ತು ದೊಡ್ಡ ಕೆಲಸ ಮಾಡುವ ಸಮಯ ಇದು.ಭಾರತದ ಜನರು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಿರ್ಧರಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ, ದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ಟೀಕಿಸಿದ ಅವರು ಎಲ್ಲಾ ಅಡೆ ತಡೆ ದಾಟಿ ನಕಾರಾತ್ಮಕ ಮನೋಬಾವನೆಯನ್ನು ಜನರ ಮನಸ್ಸಿನಿಂದ ದೂರ ಮಾಡಿ ಮುಂದಿನ ಲೋಕಸಭೆ ಚುನಾವಣೆ ಬಳಿಕ ಮೂರನೇ ಬಾರಿಗೆ ಪ್ರಧಾನಿಯಾಗಲಿರುವ ಅವಧಿಯಲ್ಲಿ ಭಾರತ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಹೇಳಿದ್ದಾರೆ.
ದೊಡ್ಡ ವಸ್ತು ಸಂಗ್ರಹಾಲಯ ನಿರ್ಮಾಣ”
ಕರ್ತವ್ಯಪಥ’ ನಿರ್ಮಿಸಲು ಟೀಕೆಗಳನ್ನು ಎದುರಿಸಿ ಕುರಿತು ಪ್ರತಿಕ್ರಿಯಿಸಿದ ಅವರು ದೆಹಲಿಯಲ್ಲಿ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ ನಿರ್ಮಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ನವೀಕೃಥ ಐಟಿಪಿಒ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನಿ ಮೋದಿ ಅವರು “ಪೂಜೆ” ನೆರವೇರಿಸಿದರು ಮತ್ತು ಅವರು ಸಂಕೀರ್ಣದ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು ಮತ್ತು ಅವರನ್ನು ಸನ್ಮಾನಿಸಿದರು. ಪ್ರಗತಿ ಮೈದಾನದಲ್ಲಿ ಹಳೆಯ ಮತ್ತು ಹಳತಾದ ಕಟ್ಟಡಗಳ ಕೂಲಂಕುಷ ಪರೀಕ್ಷೆಯ ನಂತರ ನಿರ್ಮಿಸಲಾದ ಸೌಲಭ್ಯವನ್ನು ಸುಮಾರು ೨,೭೦೦ ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಸುಮಾರು ೧೨೩ ಎಕರೆ ಕ್ಯಾಂಪಸ್ ಪ್ರದೇಶವನ್ನು ಹೊಂದಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ.