ಬಲಿಷ್ಟ ಸಮಾಜ ನಿರ್ಮಿಸಲು ಉತ್ಕøಷ್ಟ ಸಾಹಿತ್ಯ ಅಗತ್ಯ: ಡಾ.ಸತೀಶ ಹೊಸಮನಿ

ಬೀದರ:ಮಾ.23: ಬಲಿಷ್ಟ ಸಮಾಜ ನಿರ್ಮಿಸಲು ಉತ್ಕøಷ್ಟ ಸಾಹಿತ್ಯ ಅಗತ್ಯವೆಂದು ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಡಾ.ಸತೀಶ ಹೊಸಮನಿ ಹೇಳಿದರು.

ಭಾನುವಾರ ಮಂದಾರ ಕಲಾವಿದರ ವೇದಿಕೆ ವತಿಯಿಂದ ಹಿರಿಯ ಸಾಹಿತಿ ಡಾ.ಎಂ.ಜಿ ದೇಶಪಾಂಡೆ ಅವರ 69ನೇ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡ ರಾಜ್ಯ ಮಟ್ಟದ ಕವಿಗೋಷ್ಟಿ ಉದ್ಘಾಟಿಸಿ ಮಾತನಾಡಿದರು.

ನಿರಂತರ ಸಾಹಿತ್ಯ ಜನಮಾನಸ ಗೆಲ್ಲುತ್ತದೆ. ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ಅನುಭವದ ಅಗತ್ಯವಿದೆ. ಅದನ್ನು ಪಡೆಯಲು ಆಳವಾದ ಅಧ್ಯಯನ ಅಗತ್ಯ. ಪುಸ್ತಕದ ಅಧ್ಯಯನ ಹಾಗೂ ತಂತ್ರಜ್ಞಾನದ ಸಹಕಾರದಿಂದ ಶ್ರೇಷ್ಠ ಕವಿಯಾಗಲು ಸಾಧ್ಯವಿದೆ. ಗ್ರಂಥಾಲಯವು ಸುಂದರ ಕಾವ್ಯ ರಚನೆಗೆ ಪ್ರೋತ್ಸಾಹಿಸುತ್ತದೆ. ಅದಕ್ಕಾಗಿ ಈಗ ಮೊಬೈಲ್‍ನಲ್ಲಿಯೇ ಪುಸ್ತಕ ಓದುವ ಹೊಸ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ರಾಜ್ಯದಲ್ಲಿ ಹಾಸನ ಹಾಗೂ ಕಲಬುರಗಿಯಲ್ಲಿ ಸುಮಾರು ಎರಡು ಲಕ್ಷ ಜನರು ಈ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದು ಬೀದರ್ ಜಿಲ್ಲೆಯ ಸಾಹಿತಿಗಳು ಹಾಗೂ ಪುಸ್ತಕಾಭಿಮಾನಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.

ಮೈಸೂರಿನ ಸಾಹಿತಿ ಜಯಪ್ಪ ಹೊನ್ನಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾವ್ಯದ ಪದಗಳು ನೀರಿನ ಹಾಗೆ ಬಳಿಸದೆ ತುಪ್ಪದ ರೂಪದಲ್ಲಿ ಬಳಿಕೆ ಮಾಡಬೇಕು. ಕಾವ್ಯ ಅರಳಲು ಹೃದಯ ಶ್ರೀಮಂತಿಕೆ ಬೇಕು. ಭಾವನಾ ಪ್ರಪಂಚದಲ್ಲಿದ್ದರೆ ಮಾತ್ರ ಕಾವ್ಯ ರಚಿಸಲು ಸಾಧ್ಯ. ಕಾವ್ಯ ಮತಿಸಬೇಕು, ಇನ್ನೊಬ್ಬರ ಹೃದಯ ತಟ್ಟುವಂತಿರಬೇಕು, ಮನಸ್ಸಿಗೆ ಅಲ್ಹಾದ ಕೊಡುವಂತಹ ಕಾವ್ಯ ರಚಿಸಬೇಕು. ಕಾವ್ಯ ಎಂಬುದು ಕೇವಲ ಕವನದ ಪದಗಳಿರದೆ, ಅದೊಂದು ತಪಸ್ಸು. ಪದಗಳು ಹದವಾದಾಗ ಸುಂದರ ಕಾವ್ಯ ರೂಪಗೊಳ್ಳಲು ಸಾಧ್ಯ ಎಂದರು.

ಕಲಬುರಗಿಯ ಖ್ಯಾತ ಕವಿಯತ್ರಿ ಕಾವ್ಯಶ್ರೀ ಮಾಹಾಗಾಂವಕರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾವ್ಯ ರಚನೆಗೆ ಪದ ಸಂಗ್ರಹಣೆ, ಜೋಡಣೆ ಹಾಗೂ ಅವುಗಳ ಸಂಪೂರ್ಣ ತಿಳುವಳಿಕೆ ಜೊತೆಗೆ ನಿರಂತರ ಅಧ್ಯಯನದಿಂದ ಪ್ರಬುದ್ಧ ಕಾವ್ಯ ರಚನೆ ಸಾಧ್ಯ ಎಂದರು.

ಬೆಂಗಳೂರಿನ ಕವಿ ರಾಜ್ ಆಚಾರ್ಯ ಮಾತನಾಡಿ, ಕಾವ್ಯ ರಚನೆಗೆ ಸ್ಪಷ್ಟ ಇತಿಹಾಸ ತಿಳಿದುಕೊಳ್ಳಬೇಕು, ಗತಕಾಲದ ಕವಿಗಳ ಕವಿತೆಗಳನ್ನು ಅಧ್ಯಯನ ಮಾಡಿ ಪುರಾತನ ಹಾಗೂ ನವ್ಯ ಕಾವ್ಯಗಳು ರಚಿಸಬೇಕು. ಓರ್ವ ರೈತ ಭೂಮಿ ಹದ ಮಾಡಿದಂತೆ ಹೃದಯದ ಮೂಲಕ ಕಾವ್ಯ ಹದ ಮಾಡಿದಾಗ ಸುಂದರ ಕವಿತೆ ರಚಿತವಾಗುತ್ತದೆ ಎಂದರು. ಬೆಂಗಳೂರಿನ ಸಾಹಿತಿ ಎಮ್.ಆರ್ ನಾಗರಾಜ ರಾವ್ ಅವರು ಎಂ.ಜಿ ದೇಶಪಾಂಡೆ ಅವರ ಕುರಿತು ಕಾವ್ಯ ವಾಚಿಸಿದರು.

ಸಾಹಿತಿ ಶ್ರೀದೇವಿ ಹೂಗಾರ, ರಘುಶಂಖ ಭಾತಂಬ್ರಾ, ಪಾರ್ವತಿ ಸೋನಾರೆ, ಸುಬ್ಬಣ್ಣ ಕರಕನಳ್ಳಿ, ಡಾ.ಎಂ.ಜಿ ಗಂಗನಪಳ್ಳಿ ಸಿದ್ದಿ ಬಿನಾಯಕ ಕಾಲೇಜಿನ ಪ್ರಾಧ್ಯಾಪಕ ಡಾ.ನಿತೇಶ ಬಿರಾದಾರ ಹಾಗೂ ಇತರರು ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಉದಯೋನ್ಮುಖ ಕವಿಗಳಾದ ಉಡುಪಿಯ ಅಶೋಕ ಬೆಳಂಜೆ, ಬೆಂಗಳೂರಿನ ಸಿ.ಶಂಕರ ಅಂಕಣಶೆಟ್ಟಿಪುರ, ಜಯರಾಮ ಪಣಯಾಡಿ, ರಾಯಚೂರಿನ ಅಂಬಮ್ಮ ಮಾನವಿ, ಧಾರವಾಡದ ಪ್ರೇಮಾ ನಡುವಿನಮನಿ, ಹುಮನಾಬಾದ್‍ದ ಬಸವರಾಜ ದಯಾಸಾಗರ, ಸ್ಥಳಿಯ ಸಂಗಮೇಶ ಜವಾದಿ, ಬಸವಶ್ರೀ ಮೈನಾಳೆ, ಮಲ್ಲೇಶ್ವರಿ ಉದಯಗಿರಿ, ನಿಜಲಿಂಗ ರಗಟೆ, ಮಹೇಶ್ವರಿ ಹೇಡೆ, ಶ್ರಯಾ ಮಹೇಂದ್ರಕರ್, ಆಶ್ರಿತಾ ಕುಲಕರ್ಣಿ, ಡಾ.ಸುಜಾತಾ ಹೊಸಮನಿ, ಡಾ.ಸಿ.ಆನಂದರಾವ್, ಮುಂಬಯಿಯ ವಾಣಿಶೆಟ್ಟಿ, ಶಾರದಾ ಅಂಬೇಸಂಗೆ, ಶಿವಯೋಗಿ ಸಣಮಣಿ, ಅಮರೇಶ ಪಾಟೀಲ, ಉದಯನಾಯಕ ಉಪ್ಪುಂದ, ಸುರೇಶ ಸಾಮಗಾರ ಗುಡ್ಡೆ ಹೋಟಲ್ ಹಾಗೂ ಇತರರು ಕವನ ವಾಚನ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು. ಮೋಹನ್ ಪಾಟೀಲ, ಬಂಡೆಪ್ಪ ಖೂಬಾ ಸೇರಿದಂತೆ ಇತರರು ಅತಿಥಿಗಳ ರೂಪದಲ್ಲಿ ವೇದಿಕೆಯಲ್ಲಿದ್ದರು. ನಿಜಲಿಂಗ ಹೇಡೆ, ಡಾ.ರಾಮಚಂದ್ರ ಗಣಾಪೂರ, ಶಿವಕುಮಾರ ಸ್ವಾಮಿ, ಶ್ರೀಕಾಂತ ಪಾಟೀಲ, ಓಂಪ್ರಕಾಶ ರೊಟ್ಟೆ, ಸುಧಾರಾಣಿ ರವಿಚಂದ್ರ, ಸುರೇಂದ್ರ ಹೊಡಮನಿ, ಪುಷ್ಪಾ ಕನಕ, ಪ್ರವಿಣಕುಮಾರ ಕಲಬುರಗಿ, ಉಷಾ ಪ್ರಭಾಕರ್, ಗೋಪಾಲಕೃಷ್ಣ ವಂಡ್ಸೆ ಸೇರಿದಂತೆ ಇನ್ನುರಕ್ಕೂ ಅಧಿಕ ಪ್ರತಿಭೆಗಳನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದಕ್ಕೂ ಮುನ್ನ ಅಂದು ಬೆಳಿಗ್ಗೆ ಗೀತ ಗಾಯನ ಗೋಷ್ಟಿ ಜರುಗಿತು. ಚಿಕಪೇಟ್‍ನ ಮಲ್ಲಿಕಾರ್ಜುನ್ ರಾಂಪೂರೆ ಹಾಗೂ ಸಂಗಡಿಗರಿಂದ, ಖ್ಯಾತ ಹಾಸ್ಯ ಕಲಾವಿದ ಮುಗನೂರದ ಪ್ರಕಾಶ ಕುಲಕರ್ಣಿ, ಕಲ್ಯಾಣರಾವ್ ಇವರಿಂದ ಸಾಂಸ್ಕøತಿಕ ಗೀತ ಗಾಯನ, ಕು.ಪವಿತಾ ಮಾಡಗೂಳ ಹಾಗೂ ಕು.ಶಾಂಭವಿ ಕಲ್ಮಠ ಇವರಿಂದ ಭಾವಗೀತೆಗಳು ಜರುಗಿತು. ದೇವಜ್ಞ. ಬಿ.ಲಕ್ಷ್ಮಣರಾವ್ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ರಮೇಶ ಕೊಳಾರ್, ರಘುನಾಥರಾವ್ ಪಾಂಚಾಳ್, ಸಂಜಯ ಮೈನಾಳೆ, ಪ್ರಕಾಶ ಕನ್ನಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಸಂಜೀವಕುಮಾರ ಸ್ವಾಮಿ ಸ್ವಾಗತಿಸಿ, ಸುನಿತಾ ಬೀಕ್ಲೆ ಕಾರ್ಯಕ್ರಮ ನಿರೂಪಿಸಿ, ಓಂಕಾರ ಪಾಟೀಲ ವಂದಿಸಿದರು. ಸಾಹಿತಿ ಡಾ.ಎಮ್.ಜಿ ದೇಶಪಾಂಡೆ ಈ ಎಲ್ಲ ಕಾರ್ಯಕ್ರಮಗಳ ಕೇಂದ್ರಬಿಂದುಗಳಾಗಿದ್ದರು.