ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಭರವಸೆ

ಕೋಲಾರ, ಮೇ,೫- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾದ ಕೂಡಲೇ ಬಲಿಜ ಸಮುದಾಯಕ್ಕೆ ೨ಎ ಮೀಸಲಾತಿ ಒದಗಿಸುವುದು ಮತ್ತು ರಾಷ್ಟ್ರೀಯ ಹೆದ್ದಾರಿಯ ಮುಳಬಾಗಿಲು ಹೆದ್ದಾರಿಮಾರ್ಗದಲ್ಲಿ ೨೦೨೪ರ ಕೈವಾರ ತಾತಯ್ಯನವರ ಜನ್ನದಿನದಂದು ಶ್ರೀಕೃಷ್ಣದೇವರಾಯರ ಲೋಹದ ಪುತ್ಥಳಿ ಅನಾವರಣ ಮಾಡುವುದಾಗಿ ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸಮುದಾಯದ ಮುಖಂಡ ಆಟೋ ಕೆ.ವಿ.ಸುರೇಶ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಬಲಿಜ ಸಮುದಾಯದ ಅನೇಕ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಮುಳಬಾಗಿಲಿನಲ್ಲಿ ೨೫ ಲಕ್ಷ ರೂ ವೆಚ್ಚದಲ್ಲಿ ಆಂಜನೇಯ ಸ್ವಾಮಿ ಜತೆ ರಾಮ,ಲಕ್ಷ್ಮಣರನ್ನು ಹೊತ್ತ ವಿಗ್ರಹ ಸ್ಥಾಪಿಸಲು ನಿರ್ಧರಿಸಿದ್ದು, ಅದರ ಜತೆಯಲ್ಲೇ ಶ್ರೀ ಕೃಷ್ಣದೇವರಾಯರ ಪುತ್ಥಳಿ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಬಲಿಜ ಸಮುದಾಯಕ್ಕೆ ತನ್ನದೆ ಆದ ಕೊಡುಗೆ ನೀಡಿದೆ. ಬಲಿಜ ಸಮುದಾಯ ಪ್ರವರ್ಗ ೨ಎ ಯಿಂದ ಕಾಂಗ್ರೇಸ್ ಪಕ್ಷದ ವೀರಪ್ಪ ಮೊಯಿಲಿ ಅವರು ತೆಗೆದರೆ ಬಿಜೆಪಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ೨ಎ ಶೈಕ್ಷಣಿಕವಾಗಿ ಮೀಸಲಾತಿ ಸೌಲಭ್ಯ ಕಲ್ಪಿಸಿ ಕೊಟ್ಟಿದ್ದಾರೆ. ಇನ್ನು ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಬಿಜೆಪಿ ಅಧಿಕಾರಕ್ಕೆ ತನ್ನಿ ಎಂದರು.
ನಾನು ಸಂಸದನಾದ ಮೇಲೆ ೧.೩೫ ಲಕ್ಷ ರೂ ವೆಚ್ಚದಲ್ಲಿ ಅವಣಿಯಲ್ಲಿ ರಾಮಲಿಂಗೇಶ್ವರ ದೇವಾಲಯ, ಕೋಲಾರಮ್ಮ, ಸೋಮೇಶ್ವರ ದೇವಾಲಯಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಇದರ ಜತೆ ವಾಲ್ಮೀಕಿ ಆಶ್ರಮ, ಅಭಿವೃದ್ದಿಪಡಿಸಬೇಕಿದೆ ಎಂದರು.
ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ಮಾತನಾಡಿ, ಕೋಲಾರದಲ್ಲಿ ಬಲಿಜ ಸಮುದಾಯ ಭವನ ನಿರ್ಮಾಣಕ್ಕೆ ಜೂನ್ ಮಾಹೆಯಲ್ಲಿ ೫ ಕೋಟಿಯನ್ನು ಮಂಜೂರು ಮಾಡಿ ಹಂತ,ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಲಿಜ ಅಭಿವೃದ್ದಿ ನಿಗಮ ಸ್ಥಾಪನೆ ಬಿಜೆಪಿ ಮಾಡಿದ್ದು, ಈ ಕೆಲಸ ಕಾಂಗ್ರೇಸ್ ಪಕ್ಷ ಮಾಡಬೇಕಾಗಿತ್ತು ಅದರೆ ಕಾಂಗ್ರೇಸ್ ಸಮುದಾಯವನ್ನು ನಿರ್ಲಕ್ಷಿಸಿ ಮೂಲೆ ಗುಂಪು ಮಾಡಿತ್ತು ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಲಿಜ ಸಮುದಾಯಕ್ಕೆ ಅಭಿವೃದ್ದಿ ನಿಗಮ ಅಲ್ಲದೆ ಪ್ರವರ್ಗ ೨ಎ ಯಲ್ಲಿ ಶೈಕ್ಷಣಿಕ ಮೀಸಲಾತಿ ನೀಡಿದೆ, ಪೂರ್ಣಮೀಸಲಾತಿ ಕೊಡಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವೀಕ್ಷಕರಾದ ಸಾಯಿ ಲೋಕೇಶ್ ಮಾತನಾಡಿದರು, ಹಿರಿಯ ಮುಖಂಡ ರುಕ್ಮಾಂಗದ, ನರಸಿಂಹ, ಸಾ.ಮ.ಬಾಬು, ಬಿಜೆಪಿ ವಿಸ್ತಾರ್ ಪ್ರಮುಖ್ ನಿರ್ಮಾಲಮ್ಮ, ಅರುಣಮ್ಮ ,ಬಿಜೆಪಿ, ಸಿ.ಡಿ.ರಾಮಚಂದ್ರ, ಕಾರ್ಯದರ್ಶಿ ರಾಜೇಶ್ ಸಿಂಗ್,ಓಹಿಲೇಶ್, ಮುಂತಾದವರು ಹಾಜರಿದ್ದರು.