ಬಲಿಜ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹುಳಿಯಾರು, ಡಿ. ೧೮- ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಇನ್ನು ಚೆನ್ನಾಗಿ ಓದಿ ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದಲ್ಲಿ ನೊಂದ ಜನರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗುವಂತೆ ತಾಲ್ಲೂಕು ಬಲಿಜ ಸಮಾಜದ ಅಧ್ಯಕ್ಷ ಲಕ್ಷ್ಮಣಪ್ಪ ಹೇಳಿದರು.
ಹುಳಿಯಾರಿನ ಬಲಿಜ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣ ಎಂಬುದು ಸಾಧಕನ ಸ್ವತ್ತಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಚೆನ್ನಾಗಿ ಓದಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಗಳಿಸುವ ಮೂಲಕ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುವಂತೆ ತಿಳಿಸಿದರು.
ಸರ್ಕಾರ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಮೇಲೆ ಸಮಾಜದಲ್ಲಿನ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ನೀಡುವಂತ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬಲಿಜ ಸಂಘದ ಮುಖಂಡರಾದ ಕೃಷ್ಣಪ್ಪ, ಪ್ರಸನ್ನಕುಮಾರ್, ಚಂದ್ರಪ್ಪ, ಹೆಚ್.ಕೆ. ರಾಮಯ್ಯ, ಮೂಡ್ಲಯ್ಯ, ತಾ.ಪಂ. ಸದಸ್ಯ ಹೆಚ್.ಎನ್. ಕುಮಾರ್, ಪ.ಪಂ. ಮಾಜಿ ಸದಸ್ಯ ವೆಂಕಟೇಶ್, ಮುಖಂಡರಾದ ಬಸವರಾಜು, ವಿವೇಕಾನಂದ್, ಕೆ.ಎಂ.ಎಲ್. ಮೂರ್ತಿ, ಶ್ರೀನಿವಾಸ್, ಶಿಕ್ಷಕ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೈದಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಸುಹಾಸ್ ಮತ್ತು ಎಂಜಿನಿಯರ್ ಶಿಕ್ಷಣಕ್ಕೆ ಪ್ರವೇಶ ಪಡೆದ ಅಂಕಿತ್ ಹಾಗೂ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಭಿನಂದಿಸಲಾಯಿತು.