ಬಲಿಜ ಸಮಾಜಕ್ಕೆ ನ್ಯಾಯ ಒದಗಿಸಿಕೊಡಿ : ನಾರಾಯಣ ಇಂಗಳಗಿ

ಕಂಪ್ಲಿ ಜ 04 : ಬಲಿಜ ಜನಾಂಗಕ್ಕೆ ಸಾಮಾಜಿಕ ಉದ್ಯೋಗ, ಆರ್ಥಿಕ,ರಾಜಕೀಯ, ವಿದ್ಯಾಭ್ಯಾಸಕ್ಕಾಗಿ 2ಎ ಮೀಸಲಾತಿ 1994ರಂತೆ ಮರು ಮೀಸಲಾತಿ ಮುಂದುವರೆಸುವಂತೆ ಇಲ್ಲಿನ ಬಲಿಜ ಸಂಘ ತಾಲೂಕು ಘಟಕದ ಪದಾಧಿಕಾರಿಗಳು
ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸೋಮವಾರ ತಹಸೀಲ್ದಾರ್ ಗೌಸಿಯಾ ಬೇಗಂ ಅವರಿಗೆ ಸಲ್ಲಿಸಿದರು.
ಬಲಿಜ ಸಂಘ ತಾಲೂಕು ಘಟಕದ ಕಾರ್ಯದರ್ಶಿ ನಾರಾಯಣ ಇಂಗಳಗಿ ಮಾತನಾಡಿ, ರಾಜ್ಯದಲ್ಲಿ 60 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಲಿಜ ಸಮುದಾಯದವರಿದ್ದಾರೆ‌. ಹೀಗೆ ಬಲಿಷ್ಟವಾಗಿರುವ ಸಮುದಾಯವನ್ನು ರಾಜಕೀಯವಾಗಿ ಕಡೆಗಣಿಸಲ್ಪಟ್ಟಿದೆ. ಅಲ್ಲದೇ ಇನ್ನಿತರೆ ಸಮುದಾಯಗಳಿಗೆ ಸಾಕಷ್ಟು ರೀತಿಯಲ್ಲಿ ಅನುದಾನಗಳನ್ನು ಒದಗಿಸುತ್ತಿರುವ ರಾಜ್ಯ ಸರ್ಕಾರ ಬಲಿಜ ಸಮುದಾಯಕ್ಕೆ ಯಾವುದೇ ಅನುಕೂಲಗಳನ್ನು ಕಲ್ಪಿಸಿಲ್ಲ.‌ ಇವೆಲ್ಲದರ ಜೊತೆಗೆ 1994ರಲ್ಲಿ ವೀರಪ್ಪ ಮೊಯ್ಲಿ ಸರ್ಕಾರ ಬಲಿಜ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸಲಾಗಿತ್ತು. ಆದರೆ ಇದೀಗ 2ಎ ಮೀಸಲಾತಿಯಲ್ಲಿದ್ದ ನಮ್ಮ ಸಮುದಾಯವನ್ನು ಏಕಾಏಕಿಯಾಗಿ 3ಎಗೆ ವರ್ಗಾಯಿಸಿದ್ದು ಖಂಡನೀಯ‌ ಎಂದರು.
ತಾಲೂಕು ಬಲಿಜ ಸಂಘದ ಗೌರವಧ್ಯಕ್ಷ‌ ಶ್ರೀನಿವಾಸಲು ಮಾತನಾಡಿ, ಮೀಸಲಾತಿ ವಿಷಯದಲ್ಲಿ ಬಲಿಜ ಸಮುದಾಯಕ್ಕೆ ಆದ ಅನ್ಯಾಯವನ್ನು ಖಂಡಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮೀಸಲಾತಿ ತೀರ್ಮಾನವನ್ನು ಸಮಾಜ ಕಲ್ಯಾಣ ಹಾಗು ಹಿಂದುಳಿದ ಆಯೋಗಕ್ಕೆ ವಿವೇಚನೆಗೆ ಬಿಟ್ಟಿತ್ತು. ಹೀಗಾಗಿ 3ಎಗೆ ವರ್ಗಾಯಿಸಿರುವ ಬಲಿಜ ಸಮುದಾಯದ ಮೀಸಲಾತಿಯನ್ನು ಈ ಹಿಂದಿನಂತೆ ಪುನಃ 2ಎ ವರ್ಗಕ್ಕೆ ವರ್ಗಾಯಿಸಿ ಸಮುದಾಯದ ಬಗ್ಗೆ ಮುಖ್ಯಮಂತ್ರಿ ಬಿಎಸ್ ವೈ ಅವರು ಕಾಳಜಿ ತೋರುವಲ್ಲಿ ಜಾಗೃತಿ ವಹಿಸಬೇಕಿದೆ. ಅಲ್ಲದೇ ಕಳೆದ ಬಾರಿ ಬಿಎಸ್ ವೈ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಲಿಜ ಸಮಾಜಕ್ಕೆ 2ಎ ಮೀಸಲಾತಿಯಡಿ ಕೇವಲ ಶೈಕ್ಷಣಿಕವಾಗಿ ಸೌಲಭ್ಯ ಕಲ್ಪಿಸಿದ್ದರು. ಇನ್ನು ರಾಜ್ಯದಲ್ಲಿ ಬಿಜೆಪಿಗೆ ಪೂರ್ಣಪ್ರಮಾಣದಲ್ಲಿ ಅಧಿಕಾರ ಸಿಕ್ಕಿದಲ್ಲಿ ಬಲಿಜ ಸಮಾಜಕ್ಕೆ 2ಎ ಮೀಸಲಾತಿಯಡಿ ಪೂರ್ಣ ಪ್ರಮಾಣದ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು. ಸಿಎಂ ನೀಡಿದ್ದ ಭರವಸೆಯಂತೆ ಬಲಿಜ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಮೀಸಲಾತಿ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸದ್ಯ 3ಎಗೆ ವರ್ಗಾಯಿಸಿರುವ ಬಲಿಜ ಸಮುದಾಯವನ್ನು 1994ರಂತೆ 2ಎ ಮರು ಮೀಸಲಾತಿ ನೀಡಬೇಕು. ಕೇವಲ ವಿದ್ಯಾಭ್ಯಾಸಕ್ಕಾಗಿ ಮಾತ್ರವಲ್ಲದೆ, ಔದ್ಯೋಗಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿಯೂ ಪ್ರಬಲ ಸಮುದಾಯವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ 2ಎ ಮೀಸಲಾತಿ ನೀಡಿ ಆದೇಶಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಲಿಜ ಸಂಘ ಜಿಲ್ಲಾ ಉಪಾಧ್ಯಕ್ಷ ಕೆ.ಶ್ರೀನಿವಾಸಪ್ಪ, ಬಲಿಜ ಸಂಘ ಕಂಪ್ಲಿ ತಾಲೂಕು ಘಟಕ ಉಪಾಧ್ಯಕ್ಷ ಕೆ.ಶಂಕರ್, ಪದಾಧಿಕಾರಿಗಳಾದ ಚಿದಾಂಬರಪ್ಪ, ಶ್ರೀನಿವಾಸಲು, ಕೃಷ್ಣ,ಲೋಕೇಶ್,ಶೇಷಗಿರಿ ಸಮಾಜದ ಮುಖಂಡರಾದ ಶಾರದ ಲೋಕೇಶ್, ಪದ್ಮಾವತಿ, ದಿವ್ಯಶ್ರೀ,ಎಂ.ವಿದ್ಯಾ,ರೂಪಾ,ಸುನಂದಮ್ಮ,ಶೈಲ,ರಾಜ್ಯ ಬಲಿನ ಯುವಕ ಸಂಘಟನಾ ಕಾರ್ಯದರ್ಶಿ ಹಾದಿಮನೆ ಕಾಳಿಂಗವರ್ಧನ, ಬಲಿಜ ಸಂಘದ ತಾಲೂಕು ಘಟಕ ಕಾರ್ಯದರ್ಶಿ ಕೆ.ಆನಂದ ಸೇರಿದಂತೆ ಅನೇಕರಿದ್ದರು.