ಬಲಿಜಿಗ ಸಮುದಾಯ ಕಾರ್ಯಕರ್ತರ ಸಮಾವೇಶ

ಗೌರಿಬಿದನೂರು, ಏ.೨೬- ರಾಜ್ಯದಲ್ಲಿ ಬಿಜೆಪಿ ಪಕ್ಷ ಎಂದರೆ ಮೋಸ, ಸುಳ್ಳು, ಭ್ರಷ್ಟಾಚಾರವಾಗಿದೆ, ಅದನ್ನು ಅಧಿಕಾರದಿಂದ ಕಿತ್ತೊಗೆದು ಕಾಂಗ್ರೆಸ್ ನ್ನು ಮತ್ತೆ ಅಧಿಕಾರಕ್ಕೆ ತಂದು ಬಡವರ ಪರವಾದ ಕೆಲಸ ಮಾಡುವ ಜವಾಬ್ದಾರಿ ನಿಮ್ಮೆಲ್ಲರದ್ದಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ತಿಳಿಸಿದರು.
ನಗರದ ನದಿದಡ ಶ್ರೀಆಂಜನೇಯ ಸ್ವಾಮಿ ದೇವಾಲಯದ ಆವರಣದಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಬಲಿಜ ಸಮುದಾಯದ ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಜನತೆ ಕಳೆದ ೪ ವರ್ಷಗಳ ಬಿಜೆಪಿಯ ದುರಾಡಳಿತಕ್ಕೆ ಬೇಸತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏತಿಕೆಯಿಂದಾಗಿ ನೆಮ್ಮದಿಯ ಬದುಕನ್ನು ಕಳೆದುಕೊಂಡಿದ್ದಾರೆ. ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ತಾವೆಲ್ಲರೂ ಒಮ್ಮತದಿಂದ ಸ್ಥಳೀಯ ಅಭ್ಯರ್ಥಿ ಎನ್.ಎಚ್.ಶಿವಶಂಕರರೆಡ್ಡಿ ಯವರನ್ನು ೬ ನೇ ಬಾರಿ ಶಾಸಕರನ್ನಾಗಿ ಮಾಡುವ ಶಪಥ ಮಾಡಬೇಕಾಗಿದೆ. ನಿಮ್ಮೆಲ್ಲರ ಕಾರ್ಯಕ್ಕೆ ನಾವುಗಳು ಬೆನ್ನೆಲುಬಾಗಿ ಕಾರ್ಯನಿರ್ವಹಿಸಲು ಬದ್ಧವಾಗಿದ್ದೇವೆ ಎಂದು ಹೇಳಿದರು.
ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ತನ್ನದೇ ಆದ ಮಹತ್ವವಿದ್ದು, ಅದರ ಮೌಲ್ಯಗಳನ್ನು ಅರಿತು ಕಡ್ಡಾಯ ಮತದಾನ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಉಳಿಸಿ ಬೆಳೆಸಬೇಕಾಗಿದೆ. ರಾಜ್ಯ ಹಾಗೂ ದೇಶದಲ್ಲಿನ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವ ಜತೆಗೆ ಎಲ್ಲೆಡೆ ಅಶಾಂತಿ ಮತ್ತು ಧರ್ಮಗಳ ನಡುವೆ ಸಂಘರ್ಷವನ್ನು ನಿರ್ಮಾಣ ಮಾಡುವ ಕಾರ್ಯವನ್ನು ಬಿಜೆಪಿ ಮಾಡಿಕೊಂಡು ಬಂದಿದೆ. ಇದರಿಂದ ಸಮಾಜದಲ್ಲಿನ ಸ್ವಾಸ್ಥ್ಯ ಮತ್ತು ಸಾಮರಸ್ಯವು ನಶಿಸಿದೆ. ಜನತೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕಬೇಕಾದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ. ಬಡವರ ಹಸಿವು ನೀಗಿಸುವ ಜತೆಗೆ ಅವರ ಬಾಳಿಗೆ ಬೆಳಕು ನೀಡುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಬಲಿಜ ಸಮುದಾಯಕ್ಕೆ ತನ್ನದೇ ಆದ ವೈಶಿಷ್ಟ್ಯತೆಯಿದ್ದು ಅವರನ್ನು ರಾಜಕೀಯವಾಗಿ ಬೆಳೆಸುವ ಪ್ರಯತ್ನಕ್ಕೆ ನಾವುಗಳು ಮುಂದಾಗುತ್ತೇವೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಮಾತನಾಡಿ, ಬಾಲ್ಯದಲ್ಲಿಯೇ ಜನ್ಮದಾತರನ್ನು ಕಳೆದುಕೊಂಡು ಅನಾಥನಾಗಿದ್ದ ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡಿಸಲು ಕಾರಣವಾಗಿದ್ದು ಎನ್.ಎಚ್.ಶಿವಶಂಕರರೆಡ್ಡಿಯವರು. ಅವರ ಸದೃದಯ ಮನೋಭಾವ ಹಾಗೂ ಪಕ್ಷ ನಿಷ್ಠೆಯಿಂದ ನನ್ನಂತಹ ಅನೇಕ ಯುವಕರು ರಾಜಕಾರಣಕ್ಕೆ ಬರಲು ಸಾಧ್ಯವಾಗಿದೆ. ಬಲಿಜ ಸಮುದಾಯದ ಎಲ್ಲ ಮುಖಂಡರು ಒಮ್ಮತದಿಂದ ಸ್ಥಳೀಯವಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಸಮುದಾಯದ ಶೈಕ್ಷಣಿಕ ಮತ್ತು ರಾಜಕೀಯ ಪ್ರಗತಿಗೆ ಸಾಧ್ಯವಾಗುತ್ತದೆ. ಶಿವಶಂಕರರೆಡ್ಡಿಯಂತಹ ಹಿರಿಯ ನಾಯಕರು ರಾಜಕಾರಣದಲ್ಲಿ ಇರುವವರೆಗೂ ಎಲ್ಲ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸಾಧ್ಯವಾಗುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಬಡ ಮತ್ತು ಶೋಷಿತರ ಪರವಾಗಿ ಅನುಷ್ಟಾನಗೊಳಿಸಿದ್ದ ಯೋಜನೆಗಳನ್ನು ಬಿಜೆಪಿ ಸ್ಥಗಿತಗೊಳಿಸಿದೆ. ಇದರಿಂದ ಬಡವರ ಬಾಳಿಗೆ ಕಂಟಕವಾಗಿದೆ, ಮತ್ತೆ ರಾಜ್ಯದಲ್ಲಿನ ಬಡ ಮತ್ತು ಕಾರ್ಮಿಕ ವರ್ಗದವರ ಬದುಕು ಹಸನಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮುಖಂಡರಾದ ಬಿ.ಪಿ.ಅಶ್ವತ್ಥನಾರಾಯಣಗೌಡ, ರೂಬಿ ಮನೋಹರ್, ಎಚ್.ಎನ್.ಪ್ರಕಾಶರೆಡ್ಡಿ, ಮುಮ್ತಾಜ್ ಅಲಿ ಖಾನ್, ಆರ್.ಲೋಕೇಶ್, ಎನ್.ಎಸ್.ಭಾರ್ಗವರೆಡ್ಡಿ, ವೆಂಕಟಾದ್ರಿ, ವೇದಲವೇಣಿ ಎನ್.ವೇಣು, ಎ.ಅರುಂಧತಿ, ವೆಂಕಟರವಣ, ವಿ.ರಮೇಶ್, ನಾಗರಾಜ್, ಕಂಬಕ್ಕ ವೆಂಕಟೇಶ್, ವೇಣು, ಆರ್.ಪಿ.ಜಗನ್ನಾಥ್, ಮಂಜುನಾಥ್, ಅಸ್ಲಾಂ ಉಲ್ಲಾ ಷರೀಪ್, ಕಿರಣ್, ತಿಮ್ಮಾರೆಡ್ಡಿ, ದೀಪಂಶು ಭಾಗವಹಿಸಿದ್ದರು.