ಬಲಿಗಾಗಿ ಕಾಯುತ್ತಿದೆ ವಿದ್ಯುತ್ ಕಂಬ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.14: ವಿದ್ಯುತ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಲಿಗಾಗಿ ಕಾಯುತ್ತಿರುವ ವಿದ್ಯುತ್ ಕಂಬ.
ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹುಬ್ಬನಹಳ್ಳಿ ಕೆರೆಯಲ್ಲಿ ವಿದ್ಯುತ್ ಕಂಬವು ಬೀಳುವ ಹಂತದಲ್ಲಿ ಇದ್ದರೂ ಚೆಸ್ಕಾಂ ಅಧಿಕಾರಿಗಳು ಕಂಡೂ ಕಾಣದಂತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯುತ್ ಕಂಬ ಸಂಪೂರ್ಣವಾಗಿ ಬಾಗಿ ನೆಲಕಚ್ಚುವ ಹಂತದಲ್ಲಿದೆ. ಇದನ್ನು ಪ್ರತಿನಿತ್ಯ ಲೈನ್‍ಮೆನ್‍ಗಳು ಹಾಗೂ ಜೆಇ ಹಾಗೂ ಇತರೆ ಅಧಿಕಾರಿಗಳು ಇದೇ ಮಾರ್ಗದಲ್ಲಿ ತೆರಳುತ್ತಿದ್ದರೂ ಇದನ್ನು ನೋಡಿಯೂ ನೋಡದಂತೆ ತೆರಳುತ್ತಿದ್ದಾರೆ. ನೀರಿಗೆ ಒಂದೆರಡು ಅಡಿಗಳಲ್ಲಿ ವಿದ್ಯುತ್ ತಂತಿ ಹಾದುಹೋಗಿದ್ದು ನೀರಿಗೆ ವಿದ್ಯುತ್ ತಗುಲಿದರೆ ಇಡೀ ಕೆರೆಗೆ ವಿದ್ಯುತ್ ಪ್ರವಹಿಸಲಿದೆ. ಪ್ರತಿದಿನ ಅನೇಕರು ಇಲ್ಲಿಗೆ ವಿವಿಧ ಉದ್ದೇಶಗಳಿಗಾಗಿ ಬರುತ್ತಾರೆ ಮತ್ತು ನೂರಾರು ದನ, ಎಮ್ಮೆ, ಆಡು, ಕುರಿ ಮುಂತಾದ ಪ್ರಾಣಿಗಳು ಈ ಕೆರೆಗೆ ನೀರನ್ನು ಕುಡಿಯಲು ಬರುತ್ತಿದ್ದು ಅನಾಹುತವಾದರೆ ಯಾರು ಹೊಣೆ ?. ಅಷ್ಟು ಪ್ರಮಾಣದಲ್ಲಿ ಬಾಗಿರುವ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಕಂಬವನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಚೆಸ್ಕಾಂ ಕಛೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹುಬ್ಬನಹಳ್ಳಿ ಗ್ರಾಮಸ್ಥರು ಚೆಸ್ಕಾಂ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹಾಗೂ ಎಇಇ ಮತ್ತು ಜೆಇ ಯವರುಗಳನ್ನು ಆಗ್ರಹಿಸಿದ್ದಾರೆ.