ಕಲಬುರಗಿ.ಜೂ.03: ಒರಿಸ್ಸಾದ ಬಲಾಸೋರ್ ಬಳಿ ಶುಕ್ರವಾರ ನಡೆದ ಭೀಕರ ರೈಲ್ವೆ ಅಪಘಾತದಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆಯ ಬಗ್ಗೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷವು ತೀವ್ರ ಆಘಾತ ಮತ್ತು ಶೋಕ ವ್ಯಕ್ತಪಡಿಸುತ್ತದೆ. ಕೂಡಲೇ ಇಡೀ ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು ಎಂದು ಎಸ್‍ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಹೆಚ್.ವಿ. ದಿವಾಕರ್ ಅವರು ಒತ್ತಾಯಿಸಿದ್ದಾರೆ.
ಮೂರು ರೈಲುಗಳನ್ನೊಳಗೊಂಡ ಸರಣಿ ಅಪಘಾತವು ಅತ್ಯಂತ ಭೀಕರ ಅಪಘಾತಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ರೈಲುಗಳ ಢಿಕ್ಕಿಯನ್ನು ತಡೆಯುವ ‘ಕವಚ್’ ತಂತ್ರಜ್ಞಾನವನ್ನು ಈ ಮಾರ್ಗದಲ್ಲಿ ಅಳವಡಿಸಲಾಗಿಲ್ಲ ಎಂದು ರೈಲ್ವೆ ಇಲಾಖೆಯು ಹೇಳುತ್ತಿದೆ. ಇಂತಹ ಅವಘಡದ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ ಎಂದು ವಾದಿಸಬಹುದಾದರೂ, ಕೆಲವೊಂದು ಪ್ರಶ್ನೆಗಳನ್ನು ಕೇಳಲೇ ಬೇಕು. ಕೇವಲ ಶ್ರೀಮಂತರ ಐμÁರಾಮಿ ರೈಲು ವಂದೇ ಭಾರತ್‍ಗೆ ಕೊಟ್ಟ ಮಹತ್ವವನ್ನು ಸುರಕ್ಷತೆಗೆ ಏಕೆ ನೀಡಿಲ್ಲ. ರೈಲ್ವೆ ಇಲಾಖೆಯಲ್ಲಿ ತೀವ್ರವಾದ ಸಿಬ್ಬಂದಿ ಕೊರತೆಯಿದ್ದು, ಅತಿಯಾದ ದುಡಿಮೆ ಅವಧಿಯೂ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ವರದಿಯಾಗಿದೆ. ಖಾಲಿ ಹುದ್ದೆಗಳನ್ನು ಏಕೆ ಭರ್ತಿ ಮಾಡುತ್ತಿಲ್ಲ ಎಂದೂ ಪ್ರಶ್ನೆ ಮಾಡಬೇಕಿದೆ ಎಂದು ಅವರು ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಪಘಾತದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು, ಮುಂದೆ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು, ಮೃತರಾದವರಿಗೆ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು, ರಾಜ್ಯದ ಸಂತ್ರಸ್ತರಿಗೆ ಚಿಕಿತ್ಸೆ ಮತ್ತು ಪ್ರಯಾಣಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.