ಬಲವರ್ಧಕ ಟಾನಿಕ್ ಮತ್ತು ತ್ರಾಣಿಕಕ್ಕೆ ಮನೆಮದ್ದು

೧. ಪ್ರತಿದಿನ ಬೆಳಿಗ್ಗೆ ೨ ಚಮಚ ಈರುಳ್ಳಿ ರಸ, ೧ ಚಮಚ ತುಪ್ಪ, ಅರ್ಧ ಚಮಚ ಜೇನುತುಪ್ಪ ಸೇರಿಸಿ, ಚೆನ್ನಾಗಿ ಕಲಸಿ. ೪೦ ದಿನಗಳ ಕಾಲ ಸೇವಿಸುತ್ತಾ ಬಂದರೆ ಶರೀರದಲ್ಲಿ ಶಕ್ತಿಯು ಬರುತ್ತದೆ. ಇದೊಂದು ಒಳ್ಳೆಯ ಟಾನಿಕ್.
೨. ಒಂದು ಹಿಡಿ ನುಗ್ಗೆಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ, ಶೋಧಿಸಿ. ಆ ಕಷಾಯಕ್ಕೆ ಒಂದು ಚಿಟಿಕೆ ಕಾಳುಮೆಣಸಿನಪುಡಿಯನ್ನು ಬೆರೆಸಿ ಕುಡಿಯುವುದರಿಂದ ದೈಹಿಕ ಶಕ್ತಿ ಹೆಚ್ಚುತ್ತದೆ.
೩. ಪರಂಗಿಹಣ್ಣನ್ನು ಹಾಲಿನ ಜೊತೆ ಚೆನ್ನಾಗಿ ಮಿಶ್ರ ಮಾಡಿ ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ ರೋಗ ನಿರೋಧಕ ಶಕ್ತಿ ಉತ್ತಮವಾಗುತ್ತದೆ. ಇದು ಒಳ್ಳೆಯ ಟಾನಿಕ್ ರೀತಿ ಕೆಲಸ ಮಾಡುತ್ತದೆ.
೪. ಬೆಟ್ಟದ ನೆಲ್ಲಿಕಾಯಿ ಜಜ್ಜಿ ಬೀಜ ತೆಗೆದು ಅದರ ತುಣುಕುಗಳನ್ನು ಒಂದು ಗಾಜಿನ ಸೀಸೆಯಲ್ಲಿ ಜೇನುತುಪ್ಪ ಹಾಕಿ ಅದರಲ್ಲಿ ಮುಳುಗಿಸಿಡಿ. ೨೧ ದಿನಗಳ ನಂತರ ನೆಲ್ಲಿಕಾಯಿ ಹೋಳುಗಳನ್ನು ತೆಗೆದುಬಿಡಿ. ಕೇವಲ ಜೇನುತುಪ್ಪವನ್ನು ಪ್ರತಿನಿತ್ಯ ೧ ಚಮಚ ಬೆಳಿಗ್ಗೆ – ಸಾಯಂಕಾಲ ಸೇವಿಸುತ್ತಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಮೃದ್ಧವಾದ ಪೋಷಕಾಂಶಗಳಿಂದ ಕೂಡಿರುವುದರಿಂದ ಶರೀರಕ್ಕೆ ಬಲವನ್ನು ಕೊಡುತ್ತದೆ (ನೀರು ತಾಗಿಸಬಾರದು).
೫. ಅಂಜೂರದ ರಸಾಯನ ಮಾಡಿಟ್ಟುಕೊಂಡು ಪ್ರತಿನಿತ್ಯ ಸೇವಿಸುವುದರಿಂದ ರಕ್ತವೃದ್ಧಿಯಾಗಿ ಆರೋಗ್ಯಪೂರ್ಣವಾಗಿರಲು ಸಹಾಯವಾಗುತ್ತದೆ.
ಮಾಡುವ ವಿಧಾನ: ೫೦ ಗ್ರಾಂ ಅಂಜೂರ, ೧೦೦ ಗ್ರಾಂ ಒಣದ್ರಾಕ್ಷಿ, ೫೦ ಗ್ರಾಂ ಖರ್ಜೂರ, ೫೦ ಗ್ರಾಂ ತುಪ್ಪ, ೨೫ ಗ್ರಾಂ ಜೇನುತುಪ್ಪ, ೩ ರೀತಿಯ ಒಣಹಣ್ಣುಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಕೆದಕುತ್ತಿರಿ. (ಇದಕ್ಕೆ ಸಕ್ಕರೆ, ಬೆಲ್ಲವನ್ನು ಹಾಕಬಾರದು) ಬಾಣಲೆ ಬಿಡುವವರೆಗೆ ಸ್ವಲ್ಪ ಸ್ವಲ್ಪ ತುಪ್ಪ ಹಾಕುತ್ತಾ ಕೆದಕುತ್ತಿರಿ. ಪೂರ್ತಿ ಬಾಣಲೆ ಬಿಡುವ ಹೊತ್ತಿಗೆ ಇಳಿಸಿ ಸಂಪೂರ್ಣವಾಗಿ ಆರಿದ ನಂತರ ಗಾಜಿನ ಸೀಸೆಗೆ ಹಾಕಿಡಿ. ಇದನ್ನು ಪ್ರತಿನಿತ್ಯ ಬೆಳಿಗ್ಗೆ ತಿಂಡಿಗೆ ಮುಂಚೆ ೧ ಚಮಚ ಸೇವಿಸುತ್ತಾ ಬಂದರೆ ನರದೌರ್ಬಲ್ಯ, ರಕ್ತವೃದ್ಧಿ, ರಕ್ತಶುದ್ಧಿ, ಧಾತುಕ್ಷಯ, ಈ ರೀತಿ ಎಲ್ಲಾ ಸಮಸ್ಯೆಗೂ ಉತ್ತಮ ಟಾನಿಕ್ ರೀತಿ ಕೆಲಸ ಮಾಡುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧