ಬಲಭೀಮನಿಗೆ ಲಸಿಕೆ ಕೊಡಿಸಲು ಧರಣಿ ಕುಳಿತ ಜಿಲ್ಲಾಧಿಕಾರಿ

ಕಲಬುರಗಿ :ಜೂ.05: ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಶನಿವಾರ ಕೋವಿಡ್ ಲಸಿಕೆ ಪಡೆಯದ ಬಲಭೀಮ್ ಎಂಬ ವಿಕಲಚೇತನಿಗೆ ಧರಣಿ ಮೂಲಕ ಲಸಿಕೆ ಕೊಡಿಸುವಲ್ಲಿ ಯಶಸ್ವಿಯಾದ ಘಟನೆ ಶನಿವಾರ ವರದಿಯಾಗಿದೆ.
ಅಫಜಲಪುರ ತಾಲ್ಲೂಕಿನ ಘತ್ತರಗಿಯ ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳುವ ವಿಶೇಷ ಚೇತನ ಬಲಭೀಮ್ ಚೌರದ್ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಆತನ ಮನವೊಲಿಸಲು ಹರಸಾಹಸಪಟ್ಟರು.
ಬಲಭೀಮನು ಯಾವುದೇ ಕಾರಣಕ್ಕೂ ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ. ಲಸಿಕೆ ಪಡೆಯುವುದರಿಂದ ಅಡ್ಡ ಪರಿಣಾಮ ಆಗುತ್ತೆ ನೀವು 10 ಸಾವಿರ ರೂ.ಗಳನ್ನು ಕೊಟ್ಟರೂ ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಹಠ ಹಿಡಿದು ಕುಳಿತ. ಆಗ ಆತನ ಮನವಲಿಸಲು ಸ್ಥಳಿಯ ಪ್ರತಿನಿಧಿಗಳು ಹಾಗೂ ತಾಲ್ಲೂಕು ಅಧಿಕಾರಿಗಳು ಹರಸಾಹಸಪಟ್ಟರು. ಆದಾಗ್ಯೂ, ಲಸಿಕೆ ಪಡೆಯಲು ಒಪ್ಪದೆ ಇದ್ದಾಗ ಕೊನೆಗೆ ಜಿಲ್ಲಾಧಿಕಾರಿಗಳ ಮಾತಿಗೂ ಒಪ್ಪಲಿಲ್ಲ.
ಇದರಿಂದಾಗಿ ಸ್ವತ: ಜಿಲ್ಲಾಧಿಕಾರಿಗಳೇ ನೀನು ಲಸಿಕೆ ತೆಗೆದುಕೊಳ್ಳುವವರೆಗೂ ಗ್ರಾಮ ಪಂಚಾಯಿತಿ ಮುಂದೆ ಧರಣಿ ಮಾಡುತ್ತೇನೆಂದು ಗ್ರಾಮ ಪಂಚಾಯಿತಿ ಮುಂದೆ ಕೆಲವು ಹೊತ್ತು ಧರಣಿ ಕುಳಿತುಕೊಂಡು ಸೋಜಿಗ ಹಾಗೂ ಅಚ್ಚರಿಯನ್ನು ಹುಟ್ಟಿಸಿದರು. ಆದಾಗ್ಯೂ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ್ ನಾಟೀಕರ್ ಹಾಗೂ ಅಧಿಕಾರಿಗಳು ಬಲಭೀಮನನ್ನು ಮನವಲಿಸಿ ಲಸಿಕೆ ಹಾಕಿಸುವುದು ನಮ್ಮ ಜವಾಬ್ದಾರಿ ಎಂದಾಗ ಜಿಲ್ಲಾಧಿಕಾರಿಗಳು ಧರಣಿ ಕೈಬಿಟ್ಟರು.
ನೀವುಗಳು ಬಲಭೀಮನಿಗೆ ಲಸಿಕೆ ಹಾಕಿಸುವುದು ನಿಮ್ಮ ಜವಾಬ್ದಾರಿ ಹಾಗೂ ಬಲಭೀಮನಿಗೆ ಹಾಕಿಸಿರುವ ಭಾವಚಿತ್ರಗಳನ್ನು ನನಗೆ ಕಳುಹಿಸಿಕೊಡಿ ಎಂದು ಸ್ಥಳದಲ್ಲಿದ್ದ ವಿಠ್ಠಲ್ ನಾಟೀಕಾರ್ ಹಾಗೂ ಅಧಿಕಾರಿಗಳಿಗೆ ಹೇಳಿ ಹೋದರು. ತಕ್ಷಣ ಜಿಲ್ಲಾಧಿಕಾರಿಗಳು ಮಾತಿಗೆ ಬೆಲೆಕೊಟ್ಟು ಬಲಭೀಮ್ ಲಸಿಕೆ ಹಾಕಿಸಿಕೊಂಡ. ಇದರಿಂದ ಖುಷಿಯಾದ ಜಿಲ್ಲಾಧಿಕಾರಿಗಳು ಆತನಿಗೆ ನನ್ನ ಕಡೆಯಿಂದ ಧನ್ಯವಾದ ತಿಳಿಸಿ ಎಂದು ಹೇಳಿದರು.