
ಬೀದರ್:ಸೆ.15: ಬಸವಕಲ್ಯಾಣ ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಿ ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಹೇಳಿದ್ದಾರೆ.
ಬರ ಘೋಷಣೆಯಿಂದಾಗಿ ಸರ್ಕಾರ ತಮ್ಮ ನೆರವಿಗೆ ಧಾವಿಸಲಿದೆ ಎನ್ನುವ ಭರವಸೆ ರೈತರಲ್ಲಿ ಮೂಡಿದೆ ಎಂದು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆಯಾಗದ ಕಾರಣ ತಾಲ್ಲೂಕಿನಲ್ಲಿ ಬೆಳೆಗಳಿಗೆ ತೇವಾಂಶ ಕೊರತೆ ಉಂಟಾಗಿದೆ. ಶೇ 60 ರಷ್ಟು ಇಳುವರಿ ಕಡಿಮೆಯಾಗಲಿದೆ. ವಾಣಿಜ್ಯ ಬೆಳೆಗಳಾದ ಉದ್ದು, ಹೆಸರು ಹಾಗೂ ಸೋಯಾಬಿನ್‍ನಲ್ಲಿ ಇಳುವರಿ ನಷ್ಟದಿಂದಾಗಿ ರೈತರು ತೊಂದರೆಗೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ನಂಬಿಕೊಂಡ ಬೆಳೆಗಳು ಕೈಕೊಟ್ಟ ಕಾರಣ ರೈತರು ಚಿಂತಾಕ್ರಾಂತರಾಗಿರುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿತ್ತು. ಬರಗಾಲ ಘೋಷಿಸಿ, ಸಹಾಯ ಹಸ್ತ ಚಾಚಲು ಕೋರಲಾಗಿತ್ತು. ತಮ್ಮ ಮನವಿಗೆ ಕೊನೆಗೂ ಸರ್ಕಾರ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ.
ತಾಲ್ಲೂಕನ್ನು ಬರ ಪೀಡಿತ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.