ಧಾರವಾಡ, ಸೆ.26: ಮುಖ್ಯಮಂತ್ರಿಗಳ ಜನಪರ ಕಾಳಜಿಯ ಪ್ರತೀಕವಾಗಿರುವ ಇಂದಿನ (ಸೆ.25) ಜನತಾ ದರ್ಶನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ರೂಪಿಸಿ, ಜಿಲ್ಲೆಯ ವಿವಿಧ ಗ್ರಾಮಗಳ ನಾಗರಿಕರು ಭಾಗವಹಿಸಿ, ಜನತಾ ದರ್ಶನ ಯಶಸ್ವಿಯಾಗಿ ಜರುಗಿದೆ. ಮುಂದಿನ ದಿನಗಳಲ್ಲಿ ತಾವು ತಾಲೂಕಾ ಮಟ್ಟದಲ್ಲಿ ಜನತಾ ದರ್ಶನ ಆಯೋಜಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.
ಧಾರವಾಡದಲ್ಲಿ ಜನತಾ ದರ್ಶನ ಕಾರ್ಯಕ್ರಮ ಮುಕ್ತಾಯಗೊಳಿಸಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅತ್ಯಂತ ಕಡಿಮೆ ಅವಧಿಯಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ಕುರಿತು ಜಿಲ್ಲೆಯ ಸಾರ್ವಜನಿಕರಿಗೆ ಮಾಹಿತಿ ನೀಡಿ ವಿವಿಧ ಗ್ರಾಮಗಳಿಂದ ಭಾಗವಹಿಸುವಂತೆ ಜಿಲ್ಲಾಡಳಿತ ಕ್ರಮ ವಹಿಸಿತ್ತು. ಜನತಾ ದರ್ಶನಕ್ಕೆ ಸುಮಾರು 405 ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಶೇ.50 ರಿಂದ 60 ರಷ್ಟು ಪ್ರಕರಣಗಳು ರಾಜ್ಯಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಈ ಕುರಿತು ಅಹವಾಲು ಸಲ್ಲಿಕೆದಾರರಿಗೆ ಮನವರಿಕೆ ಮಾಡಿ ಅರ್ಜಿಗಳನ್ನು ಸಂಬಂಧಪಟ್ಟ ರಾಜ್ಯಮಟ್ಟದ ಇಲಾಖಾ ಮುಖ್ಯಸ್ಥರಿಗೆ ಸೂಕ್ತ ಶಿಫಾರಸ್ಸಿನೊಂದಿಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ.
ಕೆಲವು ಅಹವಾಲುಗಳು ಸ್ಥಳೀಯ ಮಟ್ಟದ್ದವುಗಳಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳೀಯವಾಗೇ ಪರಿಹರಿಸಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಅಹವಾಲು ಸಂಬಂಧಿಸಿದ ಅಧಿಕಾರಿಗಳು ದೂರುದಾರರೊಂದಿಗೆ ಸಮಾಲೋಚನಾ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಬರ ಘೋಷಣೆಯಾಗಿದ್ದರೂ ಕೆಲವು ಬ್ಯಾಂಕರ್ಸ್‍ಗಳು ರೈತರಿಗೆ ಸಾಲ ವಸೂಲಾತಿಗಾಗಿ ನೋಟೀಸ್ ಜಾರಿ ಮಾಡುತ್ತಿದ್ದಾರೆ. ಈ ಕುರಿತು ರಕ್ಷಣೆ ನೀಡಬೇಕೆಂದು ರೈತರು ಅಹವಾಲು ಸಲ್ಲಿಸಿದ್ದು, ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಸಂಬಂಧಿಸಿದ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿ, ಸಾಲ ವಸೂಲಾತಿಗಾಗಿ ಯಾವುದೇ ರೀತಿಯ ಒತ್ತಡ, ನೋಟೀಸ್ ನೀಡದಂತೆ ಮುಂಜಾಗೃತೆ ವಹಿಸಲು ಸೂಚಿಸಲಾಗಿದೆ ಮತ್ತು ನೀಡಿರುವ ನೋಟೀಸ್‍ಗಳನ್ನು ನಿಯಮಾನುಸಾರ ಹಿಂಪಡೆಯುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಬೆಳೆಹಾನಿ ಸಮೀಕ್ಷೆ ಆರಂಭಿಸಲು ಮತ್ತು ಸರ್ಕಾರಕ್ಕೆ ಸೂಕ್ತ ಪರಿಹಾರ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿಲ್ಲ. ಅಗತ್ಯವಿರುವಲ್ಲಿ ಬೋರ್‍ವೆಲ್ ಹಾಗೂ ಇತರ ಜಲ ಮೂಲಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ದನಕರುಗಳಿಗೆ ಮುಂದಿನ ಐದು ತಿಂಗಳಿಗೆ ಆಗುವಷ್ಟು ಮೇವು ದಾಸ್ತಾನು ಇದೆ. ಯಾವುದೇ ರೀತಿಯ ಮೇವಿನ ಕೊರತೆ ಇಲ್ಲ. ಮುಖ್ಯಮಂತ್ರಿಗಳು ಪ್ರತಿ ಜಿಲ್ಲೆಯಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಪ್ರತಿ ರೈತರಿಗೆ ಉಚಿತವಾಗಿ ಮೇವಿನ ಬೀಜವನ್ನು ವಿತರಿಸುವ ಮೂಲಕ ಮೇವು ಬೆಳೆಯಲು ಪ್ರೋತ್ಸಾಹ ನೀಡಲು ನಿರ್ದೇಶಿಸಿದ್ದಾರೆ. ಮೇವಿನ ಕೊರತೆಯ ದೂರುಗಳಿದ್ದಲ್ಲಿ ತಕ್ಷಣ ತಾಲೂಕು ಆಡಳಿತ ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕೆಂದು ಅವರು ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.