ಬರ ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ಸೆ. 11ರಂದು ಪ್ರತಿಭಟನೆ

ಕಲಬುರಗಿ,ಸೆ.4: ಬರಗಾಲ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲೆಯಾದ್ಯಂತ ಜಾಥಾ ಹಾಗೂ ಪಾದಾಯಾತ್ರೆ, ರಸ್ತೆ ತಡೆ ಚಳುವಳಿ ಅಲ್ಲದೇ ಸೆಪ್ಟೆಂಬರ್ 11ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ವಿಮೆ ಹಣ ಕಟ್ಟಿದ ರೈತರು 188000 ಜಿಲ್ಲೆಯಲ್ಲಿ ಇದ್ದು, ಒಟ್ಟು 161 ಕೋಟಿ ರೂ.ಗಳು ರೈತರಿಂದ ಜಮಾ ಆಗಿದೆ. ಕೇವಲ 91 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಇನ್ನೂ 115 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಆದಾಗ್ಯೂ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರಿಂದ ಅರ್ಜಿ ಸಲ್ಲಿಸಿದ ರೈತರ ಖಾತೆಗೆ ವಿಮೆ ಹಣ ಹಾಕಲಾರದೇ ದಲ್ಲಾಳಿಗಳಿಗೆ ರೈತರನ್ನು ಕಡೆಗಣಿಸಿ ರೈತರಿಗೆ ಮೋಸ ಮಾಡಿ ವಿಮೆ ಹಣದಿಂದ ವಂಚಿತರಾದ ರೈತರ ಕುರಿತು ಕಾಳಜಿ ವಹಿಸಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಯಾರದೋ ಖಾತೆ, ಯಾರದೋ ಗಂಟು, ಯಲ್ಲಮ್ಮನ ಜಾತ್ರೆ ಮಾಡಿದ ಅಧಿಕಾರಿಗಳ ಮೇಲೆ ಕಾನೂನು ಸೇವೆ ಕ್ರಮ ಕೈಗೊಂಡು ಸೇವೆಯಿಂದ ಅಮಾನತ್ತುಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ಮತ್ತು ವಿಮೆ ಹಣದಿಂದ ವಂಚಿತರಾದ ರೈತರ ಖಾತೆಗೆ ವಿಮೆ ಹಣ ಕಟ್ಟಿದ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಕ್ಷಣವೇ ವಿಮೆ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಬೇಕು ಎಂದು ಒತ್ತಾಯಿಸಿದ ಅವರು, ತಕ್ಷಣವೇ ಬೆಳೆ ನಷ್ಟ ಸಮೀಕ್ಷೆ ಕೈಗೊಂಡು ಪ್ರತಿ ಎಕರೆಗೆಅಣೆವಾರು ಪರಿಹಾರ ಘೋಷಿಸಿ ರೈತರ ಸಾಲ ಮನ್ನಾ ಮಾಡಬೇಕು ಎಂಧು ಅವರು ಒತ್ತಾಯಿಸಿದರು.
ಜಿಲ್ಲೆಯ ಎಲ್ಲ ಕಡೆಗಳಲ್ಲಿ ಬರಗಾಲ ಆವರಿಸಿದೆ. ಜೂನ್‍ನಲ್ಲಿ ಬಹಳ ವಿಳಂಬವಾಗಿ ಪ್ರಾರಂಭವಾದ ಮುಂಗಾರು ಜುಲೈ ಮಧ್ಯ ಭಾಗದಿಂದ ಇಲ್ಲಿಯವರೆಗೆ ಸತತ ಎರಡು ತಿಂಗಳುಗಳ ಕಾಲ ಮಳೆಬೀಳದೇ ರೈತರಿಗೆ ಹಾಗೂ ಗ್ರಾಮೀಣ ಜನರನ್ನು ವಿಪರೀತ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಏಕ ಕಾಲದಲ್ಲಿ ಜಿಲ್ಲೆಯ ಬಹುತೇಕ ಚಿಂಚೋಳಿ, ಚಿತ್ತಾಪುರ, ಸೇಡಂ ತಾಲ್ಲೂಕಿನಲ್ಲಿ ಬಿತ್ತನೆ ಆಗಿದೆ. ಆದಾಗ್ಯೂ, ತೇವಾಂಶ ಕೊರತೆಯಿಂದ ಯಾವ ರೊಕ್ಕದ ಮಾಲು ಉದ್ದು, ಹೆಸರು, ಸೋಯಾಬಿನ್ ಇಳುವರಿ ಬರುತ್ತಿಲ್ಲ. ಹೀಗಾಗಿ ರೈತರ ಸಂಕಷ್ಟ ಮುಗಿಲು ಮುಟ್ಟಿದೆ. ಇನ್ನುಳಿದ ತಾಲ್ಲೂಕುಗಳಲ್ಲಿ ಕೆಲವು ಕಡೆಗಳಲ್ಲಿ ಕೆಲವರು ರೈತರು ಬಿತ್ತನೆ ಮಾಡಲಾರದೇ ಹಾಗೆ ಪ್ರದೇಶ ಉಳಿದುಹೋಗಿದೆ. ಎಲ್ಲ ಕಡೆ ಬರಗಾಲ ಆವರಿಸಿದೆ. ಜಿಲ್ಲೆಯ ಆಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಬಹಳ ಕಡಿಮೆ ಇದ್ದು, ನದಿ ನೀರಿನ ಬಳಕೆ ಸಂಬಂಧ ಆತಂಕಗಳು ಉಂಟಾಗಿವೆ ಎಂದು ಅವರು ಹೇಳಿದರು.
ತೊಗರಿ ನಾಡಿನ ಬರಗಾಲ ಪರಿಸ್ಥಿತಿ ಹೀಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಡೀ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಸಮರೋಪಾದಿಯಲ್ಲಿ ಬರಗಾಲ ಪರಿಹಾರ ಹಮ್ಮಿಕೊಳ್ಳಲು ಮೀನಾಮೇಷ ಎಣಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ ಅವರು, ಬರಗಾಲ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳು ರಾಜ್ಯ ಸರ್ಕಾರದ ಕೈ ಕಟ್ಟಿ ಹಾಕಿದೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಅಸಹಾಯಕ ವ್ಯಕ್ತಪಡಿಸಿದ್ದರೆ, ಇನ್ನೊಂದು ಕಡೆ ಕರ್ನಾಟಕದ ಬರ ಪರಿಸ್ಥಿತಿ ತನಗೆ ಏನೂ ಸಂಬಂಧವಿಲ್ಲ ಎಂಬಂತೆ ಮೋದಿ ಸರ್ಕಾರ ಹಾಗೂ ರಾಜ್ಯದ ಸಂಸದರು ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಹಿಂದೆಂದೂ ಇಲ್ಲದಷ್ಟು ಬರ ಪರಿಸ್ಥಿತಿಗೆ ಸಿಲುಕಿರುವ ರೈತಾಪಿ ಜನರ ಸಮುದಾಯವನ್ನು ಕಾಪಾಡಲು ಅಗತ್ಯ ಕ್ರಮಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಪರಿಹಾರ ಕಾರ್ಯಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಇಡೀ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಹಾಗೂ ಕೇಂದ್ರ ಸರ್ಕಾರವು ತನ್ನ ವಸಾಹತುಶಾಹಿ ಕಾಲಘಟ್ಟದ ಮಾನದಂಡಗಳಿಗೆ ಬದಲಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನದಂಡಗಳನ್ನು ರೂಪಿಸುವಂತೆ ಆಗ್ರಹಿಸಿದರು.
ಜಿಲ್ಲೆಯಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸುವಂತೆ, ಟ್ಯಾಂಕರ್ ನೀರಿನ ಮಾರಾಟದ ಮೇಲೆ ನಿಯಂತ್ರಣ ಸಾಧಿಸುವಂತೆ ಒತ್ತಾಯಿಸಿದ ಅವರು, ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಲ್ಬಣಗೊಳ್ಳುತ್ತಿದೆ. ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ತಕ್ಷಣವೇ ಬಿಪಿಎಲ್, ಎಪಿಎಲ್ ತಾರತಮ್ಯ ಇಲ್ಲದೇ ಬರಗಾಲ ಪರಿಹಾರ ಪಡಿತರ ವಿತರಣೆಯಲ್ಲಿ ಹೆಚ್ಚುವರಿ ಆಹಾರ ಧಾನ್ಯ ಒದಗಿಸುವಂತೆ, ಆಹಾರ ಧಾನ್ಯಗಳ ಬೆಲೆ ಏರಿಕೆ ಕಡಿವಾಣ ವಿಧಿಸುವಂತೆ, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸುವಂತೆ, ಮೇವು ಕುಂದು ಕೊರತೆ ಪರಿಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಅವರು ಒತ್ತಾಯಿಸಿದರು.
ಕೂಡಲೇ ಕೇಂದ್ರ ಸರ್ಕಾರವು ಎಲ್ಲ ರೈತರ, ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡುವಂತೆ, ಎಲ್ಲ ರೀತಿಯ ಸಾಲ ವಸೂಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸುವಂತೆ, ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸುವಂತೆ, ಬರಗಾಲದ ಕೂಲಿಯಾಗಿ 600ರೂ.ಗಳನ್ನು ಪಾವತಿಸುವಂತೆ, ರೈತರ, ಕೃಷಿ ಕೂಲಿಕಾರರ, ಗೇಣಿ ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮ ಸಭೆ ನಡೆಸುವಂತೆ, ಗ್ರಾಮದಿಂದ ನಡೆಯುವ ಸಂಕಷ್ಟ ವಲಸೆಗೆ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಮತ್ತು ಜಿಲ್ಲಾಧಿಕಾರಿಗಳನ್ನು, ಹೊಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಾವೇದ್ ಹುಸೇನ್, ದಿಲೀಪಕುಮಾರ್ ನಾಗೂರೆ, ರಾಯಪ್ಪ ಹುರಮುಂಜಿ ಮುಂತಾದವರು ಉಪಸ್ಥಿತರಿದ್ದರು.