
ಸಂಜೆವಾಣಿ ವಾರ್ತೆ
ಮಂಡ್ಯ.ಸೆ.16:- ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳು ತೀವ್ರ ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರದಿಂದ ಘೋಷಣೆಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ಮಾಹಿತಿ ಸಂಗ್ರಹಿಸಲು ನಮೂನೆ ನೀಡಲಾಗಿದ್ದು, ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದದ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿದರು. ಮಾಹಿತಿಯನ್ನು ನಿಗದಿತ ಸಮಯದೊಳಗೆ ಗ್ರಾಮವಾರು ನೀಡಬೇಕಿದ್ದು, ಯಾವುದೇ ಲೋಪವಾಗದಂತೆ ಮಾಹಿತಿಯನ್ನು ನೀಡಿ ಎಂದರು.
ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಬರಪೀಡಿತ ಸಂಬಂಧ ಪರಿಶೀಲಿಸಲು ಕೇಂದ್ರದ ತಂಡ ಆಗಮಿಸಲಿದೆ. ಮಂಡ್ಯ ಜಿಲ್ಲೆಗೆ ಕೂಡ ಕೇಂದ್ರದ ತಂಡ ಭೇಟಿ ನೀಡಿ ಬೆಳೆ ಹಾನಿ ಕುರಿತಂತೆ ಪರಿಶೀಲನೆ ನಡೆಸಲಿದೆ. ಇದಕ್ಕೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದರು.
ಕೇಂದ್ರದ ತಂಡ ಪರಿಶೀಲನೆಗೆ ಆಗಮಿಸಿದಾಗ ಅವರಿಗೆ ಸರಿಯಾದ ಮಾಹಿತಿಯನ್ನು ಪೂರಕ ಛಾಯಚಿತ್ರಗಳೊಂದಿಗೆ ನೀಡಬೇಕು. ಬೆಳೆ ನಷ್ಟದಲ್ಲಿ ಬಿತ್ತನೆಯಾಗಿ ಮೊಳಕೆ ಒಡೆದು ಒಣಗಿರುವ ಅಥವಾ ನಂತರ ಒಣಗಿರುವ ಬೆಳೆಯನ್ನು ಪರಿಗಣಿಸಬೇಕಾಗುತ್ತದೆ. ಅಧಿಕಾರಿಗಳು ಖುದ್ದು ಸ್ಥಳ ಭೇಟಿ ನೀಡಿ ಮಾಹಿತಿ ಪಡೆದುಕೊಂಡರೆ ಕೇಂದ್ರದ ತಂಡದವರಿಗೆ ಮನವರಿಕೆಯಾಗುವ ರೀತಿ ಸಮಸ್ಯೆಗಳನ್ನು ವಿವರಿಸಬಹುದು ಎಂದರು.
ತಹಶೀಲ್ದಾರ್, ಕೃಷಿ, ತೋಟಗಾರಿಕೆ, ರೇಷ್ಮೆ, ಜಿಲ್ಲಾ ಅಂಕಿ ಅಂಶ ಸಂಗ್ರಹಣಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಪೂರಕ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆರ್.ಅಶೋಕ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ , ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಉಪಸ್ಥಿತರಿದ್ದರು.